Wednesday, August 22, 2012

ಸವಿಗನಸಲ್ಲೊಂದು ಮನಸು..

ಉದ್ದುದ್ದ ಗೀಚಿದರೆ ಮುಗಿಯದು,
ಮುದ್ದು ಮನದ ಆಳದಿ ಹೊಕ್ಕಿ ಕೂತಾ ಕದನ..
ಎಷ್ಟು ಸಾಲುಗಳಾದರೇನು? ಕವನಗಳ ಹುಚ್ಹೆದ್ದರೇನು?.. 
ವ್ಯಕ್ತವಾಗುವುದೇ? ವ್ಯಕ್ತವು ವ್ಯರ್ಥವಾಗುವುದೇ??
ತಲ್ಲಣಿಸಿದೆ ಮನ.. ..

ತನ್ನಳಿವಾದಂತಿದೆ, ನಾ ಶೂನ್ಯ ಹೊದ್ದಂತಿದೆ,
ಸರ್ವಂ ತನ್ಮಯಂ ನನ್ನೊಳಗೆ...
ನವಿರಾಗಿಯೆದ್ದ ತಿಳಿ ಗಾಳಿ, ತುಸು ತುಸುವೇ ಬೀರಿ,
ನಿನ್ನ ಬಿಂಬವನೇ ಎದಿರು ನಿಲ್ಲಿಸಿದೆ..

ಇದ್ದಕ್ಕಿದ್ದಂತೆ, ಕನಸಲ್ಲೆದ್ದಂತೆ..
ಅಲ್ಲೊಂದು ಸಿಹಿ ಮೊಗ್ಗ ಕಂಡಂತೆ..
ಕಂಪನೆರೆಯುತಾ ಹೂವಾಗಿ, ಮನವೆಂಬ ಕನ್ಯೆ ತಾ ಮುಡಿಯೇ ಅದ,
ಸ್ವರ್ಗವೇ ಕರದಿ ಸಿಕ್ಕಿ ನಿಂತಂತೆ..

ರೆಕ್ಕೆಯೆರಡು ಹುಟ್ಟಿ, ಮೊದಲಾಗಿ ಬಿಚ್ಚಿ..
ಪಟ ಪಟನೆ ಬಡಿದು ಹಾರುವ ಪ್ರಯತ್ನದಿ..
 ಭಯವು ತಬ್ಬಿದ ಮನದ, ಬಳಿ ಜಾರಿ ನೀನಪ್ಪಿದೊಡೆ,
ಬಾನಿನಾಚೆಗೆ ಬಾಳಿನಾ ಜೊತೆ ಸಾಗಿ ಬಂದಂತೆ..
 
ನೀ ಗೊಂದಲವೋ, ಮೇಲೆದ್ದ ಭಾವೋಧ್ವೇಗವೋ..?
ಭೋರ್ಗೆರೆವ ಬಿರುಗಾಳಿಯ ನಡುವೆ ನಾನಾಡುವ ಉಸಿರಾಟವೋ??
ನನ್ನೊಳಗೆ ನನಗಾಗೆಂದು ಬಂದ ಮೊದಲ ಆಲೋಚನೆಯೋ..?
ಅನುಮಾನವಿಹುದು.. ನಾ ನಾನೋ? ಅಥವ ನೀನೋ???

- ರೋಹಿತ್...

Friday, August 3, 2012

ರಕ್ಷಾ ಬಂಧನ..

ಹಿಂದಿಂದೆ ಬಂದೆ,
ಎಲ್ಲೆಲ್ಲೂ, ಹುಟ್ಟಿನಲೂ..
ನನ್ನ ಮೊದಲ ಮಗುವು ನೀ..

ನಿನ್ನಾ ತರಲೆ, ತುಂಟಾಟಗಳೋ,
ಮುಗ್ದ ಮುನಿಸೊಳು ಮುಳುಗಿಸಿ 
ಮನ್ನಿಸೇಳಿಸೋ ಆಟಗಳೂ..
ನನ್ನ ತಾಯಿಯೂ ನೀನೇ..

ನಿನ್ನೊಡನೆಯ ಒಲವ 
ನೆಪ್ಪದೋಳಾಡಿದ  ಜಗಳಗಳೋ ,
ಟೂ ಬಿಟ್ಟು ಮಾತನಾಡಿದ ಕ್ಷಣದ ನಗುವುಗಳು..
ಗೆಳತಿಯಾದವಳು ನೀನೇ..

ನೀ ನಲುಮೆಯ ತಂಗಿ, ಒಡನೆ ಬರುವೆಯಾದರೆ 
ಎಷ್ಟೇ ಜನ್ಮವು ಸಹ್ಯ ನನಗೆ..
ನನ್ನೆಲ್ಲಾ ಬದುಕುಗಳಾ ನಗುವು
ಕೂಡಿ ಬರಲೆಂದೆಂದು ನಿನಗೆ..
ಈ ಬಂಧನದ ರಕ್ಷೆಯೊಳಗಿಹೆವು
ನಾವ್ ಹೀಗೆ...
ರಕ್ಷಾ ಬಂಧನದ ಶುಭಾಷಯಗಳು
ನನ್ನ ಮುದ್ದು ತಂಗಿಗೆ...

- ರೋಹಿತ್..

Tuesday, July 24, 2012

ಪಾದಕೆರಗುವ ಧೂಳೇ ಧನ್ಯ...


ಪಾದಕೆರಗುವ ಧೂಳೇ ಧನ್ಯ... 

ಪಾದಕೆರಗುವ ಧೂಳೇ ಧನ್ಯ
ನಿನ್ನಯ ಸ್ಪರ್ಶದೊಳಿರಲು,
ಆ ಮುಂಗುರುಳಿನದೇನೇ ಪುಣ್ಯ
ಕಣ್ಗಳೊಡನಾಡುತಿರಲು,
ನಿನ್ನ ಕಣ್ಗಳೊಡನಾಡುತಿರಲು...
ಪಾದಕೆರಗುವ ಧೂಳೇ ಧನ್ಯ ...

ಎಟುಕದ ಚಂದ್ರನು ಇಳಿವನು ಇಳೆಗೇ
ಮಿಟುಕಿಸಿ ಕಣ್ಣ ನಿನ್ನ ಚೆಲುವಿನ ಸಿರಿಗೆ,
ಸೂರ್ಯನೇ ಕರಗುವ ಮೆಲ್ಲನೆ ಧರೆಗೆ
ನಿನ್ನೊಡನೆ ಭುವಿ ಇರೋ ಒಡಲಿನ ಉರಿಗೆ,
ಒಡಲಿನ ಉರಿಗೇ...
ಪಾದಕೆರಗುವ ಧೂಳೇ ಧನ್ಯ ...

ಕವಿಯೇ ಹುಟ್ಟುವ ಪ್ರತಿ ಕಣ್ಣೊಳಗೆ..
ಕವಿಯೂ ಮೂಕನೆ ಬಣ್ಣಿಸ ಕೂತರೆ..
ತಿರುಗೋ ಭೂಮಿ ತಿರುಗಿ ನೋಡಿತು ಮೆಲ್ಲನೆ,
ನಿನ್ನನು ಕಾಣಲು ಒಂದು ಗಳಿಗೆ,
ತೆಗೆಯಲೇ ದೃಷ್ಟಿಯ ಒಮ್ಮೆ ನಿನಗೆ..
ಪಾದಕೆರಗುವ ಧೂಳೇ ಧನ್ಯ ...

ಪಾದಕೆರಗುವ ಧೂಳೇ ಧನ್ಯ
ನಿನ್ನಯ ಸ್ಪರ್ಶದೊಳಿರಲು,
ಆ ಮುಂಗುರುಳಿನದೇನೇ ಪುಣ್ಯ
ಕಣ್ಗಳೊಡನಾಡುತಿರಲು,
ನಿನ್ನ ಕಣ್ಗಳೊಡನಾಡುತಿರಲು...
ಪಾದಕೆರಗುವ ಧೂಳೇ ಧನ್ಯ ...
ಪಾದಕೆರಗುವ ಧೂಳೇ ಧನ್ಯ ...

- ರೋಹಿತ್..

Facebook Page: www.facebook.com/rohitkumarhg1

Friday, July 13, 2012

ನಕ್ಕು ಬಿಡು ಒಮ್ಮೆ.. ೩

ಮನುಷ್ಯ ತನ್ನ ತಾನು ಅತೀ ಬುದ್ದಿವಂತ ಅಂತ ನಿರೂಪಿಸಿಕೊಳ್ಳೋಕೆ ಸಾಕಷ್ಟು ಆವಿಷ್ಕಾರಗಳನ್ನ ಮಾಡಿದ್ದಾನೆ. ಪ್ರಕೃತಿಗೇ ಸವಾಲೆಸೆದು ಅವಶ್ಯಕತೆಯ ಗಡಿ ದಾಟಿ ಬೆಳೆದು ನಿಂತ ಅವನ ಚಿಂತನೆಗಳು ತನ್ನೊಳಗೆ ನೂರು ನೋವುಗಳಿಗೆ ಮನೆ ಮಾಡಿ ಕೊಟ್ಟಿದೆ. ಯಾವ ಹೊಸ ತಂತ್ರಜ್ಞಾನವೂ ಭಾಂಧವ್ಯದೊಳಗಿರುವ ಭಾವನೆಯನ್ನ ಹೊತ್ತು ತರಲಾರದು, ಅರಸಿ ಹೊರಟ ನಗುವನ್ನು ನೀಡುವುದಕ್ಕೂ ಅದರಿಂದಾಗದು.. ನಮ್ಮವರೊಡನೆ ಇರುವ ಬೆಚ್ಚಗಿನ ಬದುಕನ್ನ ಕಟ್ಟಿಕೊಡಲು, ನೆಮ್ಮದಿ-ಸಂತೋಷಗಳನ್ನು ಹುಟ್ಟಿ ಹಾಕಲು ಯಾವುದೇ ಯಂತ್ರ(ಮೆಶಿನ್ನು)ಗಳಿಂದಲೂ ಸಾದ್ಯವಿಲ್ಲ.. ಅಂತೆಯೇ ತಾ ಬಯಸಿ ನಿಂತವರು ನಮ್ಮೊಡನೆ ಬರದಾದಾಗ, ಎದ್ದು ನಿಂತ ನೋವಿಗೆ ಮದ್ದು ಕೇವಲ ಆ ಬಯಸಿದ ಮನಸಿನ ಸಿಹಿ ಇರುವಿಕೆಯಷ್ಟೇ.. ಅಪ್ಪ, ಅಮ್ಮನನ್ನೇ ಕಾಣದ ಲೋಕವರಿಯದ ಆ ಮಕ್ಕಳಿಗೂ, ಮಕ್ಕಳ ಕಳೆದುಕೊಂಡ ಪುಟ್ಟ ಮನಸಿನ ಹಿರಿಜೀವಗಳಿಗೂ ಕಾಡುವ ನೋವದು ಒಂದೇ.. ಕಂಬನಿಯ ರೂಪ ಒಂದೇ.. ಅದು ತರುವ ದುಗುಡದ ಭಾವವೊಂದೇ.. ಕಾರಣ ಮಾತ್ರ ಬೇರೆ... ತೊರೆದ ಜೀವವ ಕಾದು ಕುಳಿತ ಮನಗಳಿಗೆ...

ನಕ್ಕು ಬಿಡು ಒಮ್ಮೆ..
ಹುಟ್ಟುತಾ ಒಂಟಿಯೇ, ಹೊರಟಾಗಲೂ ಒಬ್ಬನೇ...
ನಡುವೆ ಜೊತೆಯಾದವಗೆ ನೆರಳಾಗಿ ನೆಡೆಯುತ್ತಿರೆ..
ನಮ್ಮವರ ನೆನಪ ಕಡೆವರೆಗೂ ಕದಲದಂತೆ ಬಚ್ಚಿಟ್ಟು..
ಆ ನೆನೆಪೂ ಕೂಡಾ ನಗುವಂತೆ..
ನಕ್ಕು ಬಿಡು ಒಮ್ಮೆ...

- ರೋಹಿತ್..

ನಕ್ಕು ಬಿಡು ಒಮ್ಮೆ.. ೨

ಎಷ್ಟು ವಿಚಿತ್ರ.. ಕೆಲವು ಸಲ ಕೆಲವುಗಳನ್ನ ಎಷ್ಟು ಜೋಪಾನವಾಗಿ ಎತ್ತಿ ಇಟ್ಟಿರ್ತಿವಿ ಅಂದ್ರೆ ಇಟ್ಟಿರೋ ವಸ್ತು ಎಲ್ಲಿದೆ ಅಂತ ಕೂಡಾ ನೆನಪಿರೋದಿಲ್ಲ.. ಅಂತೆಯೇ ಬದುಕು.. ಬದುಕನ್ನ ಜೋಪಾನ ಮಾಡೋದಕ್ಕಿಂತ ಅದರ ಪಾಡಿಗೆ ಅದನ್ನ ಬಿಟ್ಟಿದ್ರೆ ಸುಂದರವಾಗೇ ಸಾಗುತ್ತೆ.. 
ಹೆಚ್ಚು ಖುಷಿಯನ್ನ ಬಯಸಿ ಬಯಸಿ,
ಆ ಬದುಕಿಗೂ ಒಂದಿಷ್ಟು ಆಸೆ ತರಿಸಿ..
ಇರೋ ಪುಟ್ಟ ಪುಟ್ಟ ನಗುವನ್ನ ಆ ಆಸೆಗಾಗಿ ಮೀಸಲಿಟ್ಟು ನಗೋದನ್ನ ಮರೆತಿರುವ ನಾವುಗಳು, ಸಿಕ್ಕಾಪಟ್ಟೆ ನಗಬೇಕು ಅಂತ ಇಷ್ಟ ಪಡ್ತೀವಿ.. ನಗೋದಕ್ಕೆ ಕಾರಣ ಹುಡುಕಿ ಕುಳಿತಂತಹ ಅಂತವರಿಗೆ..

ನಕ್ಕು ಬಿಡು ಒಮ್ಮೆ..
ಸಿಕ್ಕೂ-ಸಿಗದ ಕಾರಣಗಳು,
ತೊರೆದ ಬೂತಕಾಲದ ಕನಸುಗಳೂ..
ನೀನೇ ಸಹ್ಯ ನಮಗೆನ್ನುತಾ ತಿರುಗಿ ಬರುವಂತೆ..
ನಕ್ಕು ಬಿಡು ಒಮ್ಮೆ..

- ರೋಹಿತ್ 

ನಕ್ಕು ಬಿಡು ಒಮ್ಮೆ.. ೧



ಎಂಥಾ ಮನಸೊಳಗೂ, ಎಷ್ಟೇ ನಗುವಿನಾ ನೆರಳಲ್ಲೂ ಒಂದಿಷ್ಟು ನೋವುಗಳು ಮೈಮುರಿದು ನಿಂತಿರೊತ್ತೆ... ಪ್ರತಿಯೊಬ್ಬರಿಗೂ ಇನ್ನೊಬ್ಬರ ಬದುಕು ಸುಖಮಯವಾಗಿ ಕಾಣೊತ್ತೆ.. ಅವರವರ ನೋವುಗಳು ಮಾತ್ರ ಅವರಿಗೆ ಬೆಟ್ಟವಾಗಿ ಕಾಣೊತ್ತೆ.. ಮತ್ತ್ಯಾರ ಕಂಬನಿಯ ಅರಿವೂ ಸಹ ಇನ್ನೊಬ್ಬರಿಗೆ ಇರೋಲ್ಲಾ..!


ನಕ್ಕು ಬಿಡು ಒಮ್ಮೆ.. 
ನಿನ್ನೆಲ್ಲಾ ನೋವುಗಳು, ಭಯ ಮಾಡೋ ಭೀತಿಗಳೂ 
ನಿನ್ನ ಕಂಡು ದೂರ ಓಡುವಂತೆ..
ನಕ್ಕು ಬಿಡು ಒಮ್ಮೆ..


- ರೋಹಿತ್..

Saturday, June 23, 2012

ಬೇಸರಿಕೆಯೇ ನನ್ನಲಿ ??

ಬೇಸರಿಕೆಯೇ ನನ್ನಲಿ ??
ಕಾದು ಕಾದು ಕದಲಿ 
ಹೋಗಿಹೆ ನಿನ್ನ ನಗುವಿಗೆ..
ಎದೆಯಾಳದಲೇನೋ ಹೊಕ್ಕಿ ಎಳೆದಂತೆ..
ಒಡಲ ಸಂಕಟ ತಾಳಲಾಗದೆ..
ಕುಸಿವೆನೇನೋ ನಿಂತಲ್ಲಿ..
ಬೇಸರಿಕೆಯೇ ನನ್ನಲಿ..???

- ರೋಹಿತ್..

Wednesday, April 4, 2012

ಕಳೆದೆನಾ ನಿನ್ನಾ...?


ಕಳೆದೆನಾ ನಿನ್ನಾ...?
ಅರಿಯದೆಲೆ ಮುಳ್ಳಾದೆನಾ??
ಮುಳುಗಿ ಹೋದ ಬೆಳಕ ಹುಡುಕುತಾ,
ಕತ್ತಲೆಯಲಿ ಕೈ ಚಾಚಿದೆನಾ?? 
ಕಂಬನಿಯ ಕಸಿಯ ಹೊರಟು,
ಇತ್ತು, ಹೊಂದಿ ಮರಳಿದೆನಾ??
ನಂಬಿಕೆಯೆಡೆಗಿನ ದಾರಿಯಲಿ,
ನಡುವಲೇ ಸೋತು ಬದುಕಿದೆನಾ?
ಕದಲಿ  ಹೋದ ನಿಂತ ನೆಲದಿ
ನಡುಗದೆಯೇ ನಿಲ್ಲುವೆನಾ?
ಎನಿತು ಪ್ರೆಶ್ನೆಗಳಾ ಸೆರೆಯು??
ಎನಿತಿದು  ಮೌನ ಮನದ 
ಒಳಗೊಳಗೇ ಬರ ಸಿಡಿಲು..??
ನೋವ ಹಾದಿಯಲಿ ನಗುವ ಹುಡುಕಾಟವೇತಕೆ ಈ ಪರಿಯು...??

-- ರೋಹಿತ್ 

Friday, March 30, 2012

ಅರಸುತಿದೆ ನಿನ್ನೇ...

ಅರಸುತಿದೆ ನಿನ್ನೇ...
ಬರದೆ-ಕಾಣದೆ, ಬಾಯಾರಿದ ಕಂಗಳು,
ತೆರೆದ ಬಾಗಿಲ ಮುಚ್ಚದಲೇ...

ಕನವರಿಸುತಿದೆ ನಿನ್ನೇ...
ಹಠಮಾಡಿ ತಾನಿಂದು, ಬರಲೇಬೇಕೆಂದು,
ಮನಸಿನೊಳಗಿಲ್ಲೇ...

ಉಸಿರಿಸುತಿದೆ ನಿನ್ನೇ...
ಎದೆಯೊಳಗಿನೆಲ್ಲಾ, ಏರಿಳಿತಕೆಲ್ಲಾ ನಿನ್ನನೆ ಹೆಸರಿಸಿ,
ಪ್ರತಿ ಉಸಿರಿನಲ್ಲಿ , ಪ್ರತಿಯ ಕ್ಷಣದಲ್ಲಿ...

ಕಾಣುತಿಹೆ ನಿನ್ನೇ...
ಅಲ್ಲಿಲ್ಲಿ ಎಲ್ಲೆಲ್ಲೋ, ಬೀಡ ಬಿಗುವಿನ ನಡುವೆ,
ನನ್ನನ್ನೇ ನಾ ಮರೆತ ವೇಳೆಯಲಿ..

ಹೊದ್ದ ಕನಸಲೂ ನೀನೇ..
ಅಕ್ಷಿಯಾಗಸದ ಮಳೆ ಚಿಗುರಲೂ ನೀನೇ...
ನಾನು ನನ್ನೊಳಗೂ ನೀನು ನೀನೇ..
ಒಂಟಿ ಮನದ ಒಂಟಿತನದ ಜೊತೆಯಾಗಿ,
ಸಿಕ್ಕ ಸೊಬಗಿನ ಬದುಕು ನನಗೆ ನೀನೇ..

-- ರೋಹಿತ್


Tuesday, March 6, 2012

ಜಗದೋದ್ದಾರದ ಬಯಕೆ..

ಸುಶಿಕ್ಷಿತ, ಸುಕೃತದ ಬಯಕೆಗಳಿಗೆ ಬೇಕು 
ದೃಡತೆಯ ನೆಡೆಯು,
ಸರಿತಪ್ಪುಗಳ ತೂಗಿ, 
ತಪ್ಪನ್ನು ದಿಕ್ಕರಿಸೋ ಎದೆಯು..
ನಂಬಿಕೆ ಇದ್ದರೆ ಬದುಕು,
ನಂಬಿಕೆ ಇರಲು ಸರ್ವಸಾದ್ಯವು..
ಜಗವ ತಿದ್ದುವ ಕಾರ್ಯ ಮೊದಲಾಗಲಿ,
ಮೊದಲಾಗಲಿ ನಮ್ಮ ಶುದ್ದಿಯಿಂದಲೇ..
ಅಂದೇ ಸಾದ್ಯ ಜಗದೋದ್ದಾರವು..

-- ರೋಹಿತ್ 

ಒಂಟಿ ನೆರಳು

ಯಾರು ಕೊನೆವರೆಗೆ??? 
ಯಾರು ನೆಡೆವರೋ ಕಾಣೆ..
ಅಲ್ಲಲ್ಲಿ ಜೊತೆಯಾಗೋ ಹಲವರ ಭಾವಸಾರದೊಡನೆ,
ದಾರಿಯಲ್ಲಿ ಹುಟ್ಟು ಹಿಡಿದು ನಿಂತವನು ನಾನೊಬ್ಬನೇ..!!
ದಿಕ್ಕು ಕೂಡಿಸಿ, ಎಲ್ಲರ ಜೊತೆ ಮಾಡಿ ತಲುಪಿಸಲು,
ಅಲ್ಲಿಗೆ ಮರಳಿದಂತೆ 
ಒಂಟಿ ನೆರಳು ಮೆಲ್ಲನೆ...

-- ರೋಹಿತ್.. 

Saturday, March 3, 2012

ಮೊದಲ ತೊದಲು ...

ಅತ್ತಿತ್ತ ಎತ್ತಣವೋ ಸಿಲುಕಿದ್ದ ಕನಸುಗಳು,
ಬದುಕಿಗಿಳಿದು ಕೊನೆಗೆ, ಈತನಕ ಬಂದಿರಲು..
ಏರಿಹ ಗುರಿಯ ಗಿರಿಯು ಒಂದಾಗಿಹುದು..
ಪುಟ್ಟ ಅರಿಕೆ ಇದುವೇ,
ಜೊತೆ ನಡೆವ ಕಡೆಯವರೆಗೆ,
ನಿಲುಕದೆತ್ತರಕೆ ಸೇರಿಸೋ ಗುಡಿಯ ಕಂದಮ್ಮಗಳೇ...
ಬದಲಾವಣೆಯ ಭಾಷೆಯ ನುಡಿಯ ತೊದಲಾಗುವ..
ಸರಿದಾರಿಹೋಕರಲ್ಲಿ ನಾವ್ ಮೊದಲಾಗುವ..

-- ರೋಹಿತ್..

ನೂಕುತಿದೆ ಕನಸುಗಳು...

ನೂಕುತಿದೆ ಕನಸುಗಳು ಹಾಸಿಗೆಯೊಳಿಂದ,
ಏಳು ಸಾಕು ನೆಡೆಸು ಬೇಗ ನನ್ನನೆಂದು..
ಕಣ್ಣೊಳಗಿನ ಕಲ್ಪನೆಗೆ ರೆಕ್ಕೆ ಕಟ್ಟಿ,
ಬದುಕಿನಾಗಸದಲ್ಲಿ ಸೇರಿಸೆಂದು..
ಹೆಜ್ಜೆ ಇಡುತ ಗುರಿಯ ಕಡೆಗೆ ಸಾಗುತ್ತಲಿ,
ಉತ್ತರಿಸು ಜಗಕೆ ನೀ ಬಂದ ಕಾರಣವನ್ನು..
ನಿನ್ನೊಳಗಿನ ನಿನ್ನನ್ನು ತೋರಿಸಿನ್ನು..

-- ರೋಹಿತ್..

Wednesday, February 29, 2012

ಅಮ್ಮಾ...

ಅಮ್ಮಾ...
ಅನನ್ಯ ಸಿಂಚನದ ಸವಿ ರಾಗ ಮೇಳೈಸುವ
ನಗೆ ಹರಿಸೋ ಕಡಲಿನ ರಾಶಿಯೋ..
ತುಂಟ ಅಳುವಿಗೂ, ದಿಗಿಲಾಗಿ ತೊಳಲಾಡೊ 
ಮುಗ್ದ ಮನದ ಭೂತಾಯಿಯೋ..
ಎಷ್ಟೋ ಕಂಗಳಲಿ ನಲಿದಾಡೋ ಸವಿಯೋ,
ನನ್ನೀ ಉಸಿರಿಗೆ ನೀ ಸ್ಪೂರ್ತಿಯು..
ನೂರು ನೋವಿನಲೂ, ಮುಳ್ಳ ಹಾದಿಯಲೂ,
'ಅಮ್ಮಾ' ಹೆಸರದು ಉಳಿಯುವ 
ಕಡೆಯ ಕನಸಿನ ಆಸೆಯು...

-- ಪುಟ್ಟು  

Sunday, February 26, 2012

ಒಂದೇ ಮನ.. ನೂರು ಮನಸು..!!


ನೂರೆಂಟು ದಾರಿ, ನೂರೆಂಟು ಗುರಿಯು, 
ನೂರಿರಲು ಮನದ ಬಯಕೆ..
ಕದಡುತ್ತಾ ಕುಳಿತರೆ ಕಣ್ಣ ಕನಸನ್ನ
ಗೊಂದಲವು ನಿನ್ನೆಲ್ಲಾ ಎಣಿಕೆ..
ಗುರಿಯಿರಲು ಒಂದೇ, ನಡೆದಿರಲು ಮುಂದೆ
ಏನುಂಟು ಅಡೆಯು ಇಲ್ಲಿ??..
ಅಡೆಯಿದ್ದರೂನು ನಗುವಿರಲು ಮೊಗದಿ, 
ಬಿಟ್ಟು ನಿಲ್ಲುವವು ದಾರಿ ನಮಗೆ...
ಮರ್ಕಟ ಮನಕೆ ಬುದ್ದಿ ಹೇಳಿ, ಹಾದಿ ಶುದ್ದಿಗೊಳಿಸೆ..
 ಸಾರ್ಥಕದೆಡೆಗಿನ ಪಯಣ ಸುಗಮ...

-- ರೋಹಿತ್ 


Saturday, February 25, 2012

ನೆನಪಲ್ಲಿ...


ಹಗಲಿರುಳ ಆ ಕದನಗಳ ಕಡೆಗೆ..
ಬದುಕ ಬಯಕೆಗಳ ಬಿರುಗಾಳಿಯ ಸೆರೆಗೆ..
ಸಿಕ್ಕಿ ದೋಣಿ ಏರಿ ಕುಳಿತ ಒಡಲ ಕುಡಿಗಳು ನಾವು.. 
ದಿನ ಕಳೆದಂತೆ, ದಡ ಬಂದಂತೆ, ತೊರೆಯೊಲ್ಲದು ಮನಸು,
ಜೊತೆಗಾಲದ ಕಡೆಯಾಟದ ಅಂಚಲ್ಲಿ ನಿಂತಿರೆ..
ನೆನೆದು ನೆನೆದು ಬಂದಿದೆ ಗೆಳೆತನದಾ ನೆನಪು..

ಉಸಿರ ಗೆಳೆತನಕ್ಕೆ, ಮನಃಪೂರ್ಣ ನಮನಗಳು..

-- ರೋಹಿತ್


Friday, February 24, 2012

ತುಸುವಾಗಿಯೇ ಬಾ, ತಂಗಾಳಿಯೇ..

ತುಸುವಾಗಿಯೇ ಬಾ, 
ತಂಗಾಳಿಯೇ..
ಸರಿಸದಿರು ಮಳೆಯೂಡೆಯನ.. 
ತಾನೇ ಬರುವ ಮುಂಗಾರಿಗೆ, 
ಟಿಸಿಲೊಡೆದ  ಮೊಗ್ಗಾಗಿ ಮೊಗ ಚಾಚುವ..
ಮೊದಮೊದಲ ಮಳೆಯ ಆ ಹನಿಯಲಿ,
ಒಂದಾಗಿ ಗರಿ ಬಿಚ್ಚಿದ ನವಿಲಾಗುತಾ..
ಕುಣಿದು ಎಲ್ಲರ ಕುಣಿಸುತಲಿ,
ಸಂಜಯನ ಕೈಬೀಸಿ ತಾಯ ಬಳಿ ಸರಿ ಎನ್ನುತಾ..
ಮೋಡದೊಳಗಿನ ಚಂದಿರಗೆ ಕಾದು ಕುಳಿವ..

ತುಸುವಾಗಿಯೇ ಬಾ, 
ತಂಗಾಳಿಯೇ..

-- ರೋಹಿತ್

Wednesday, February 22, 2012

ಓ ಹಿರಿಯರೇ...

ಹೊಸತು ಚಿಗುರಿನ ನಲಿವಿದೆ 
ಹಳೆಯ ಬೇರಿನ ತುದಿಗೆ..
ಗರಿಬಲಿತರೂ ಮರಿಗೆ,  ತಾಯಿ ಹಕ್ಕಿಗೆ ಮಕ್ಕಳೇ...
ಈ ಬದುಕ ಪಯಣಕೆ
ಸ್ಪೂರ್ತಿ ನೀವೇ ಹಿರಿಯರೇ..
ಓ ಹಿರಿಯರೇ...

- ರೋಹಿತ್ 

ಕಾದು ನೋಡಿ

ಹೊಸ ಅಂಕಣ...

"ತೀರ"


ಆತ್ಮೀಯ ಒಡನಾಡಿಗಳೇ,


೨೦೧೦-೨೦೧೧ ನೇ ಸಾಲಿನ ಹಿರಿಯ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದ ವಿಶೇಷವಾಗಿ ಮಾಡಲ್ಪಟ್ಟ "ತೀರ" ಎಂಬ ವೀಡಿಯೋ ತುಣುಕನ್ನು ಈ ಮೂಲಕ ನಮ್ಮ ಬ್ಲಾಗ್ ನಲ್ಲಿ upload ಮಾಡುತ್ತಿದ್ದೇವೆ. ನಮ್ಮ ವಿಭಾಗದಲ್ಲಿನ ದಿನಗಳ ನೆನಪನ್ನ ಮತ್ತೆ ನಿಮ್ಮಲ್ಲಿಗೆ ತರುವಂತಹ ಒಂದು ಪುಟ್ಟ ಪ್ರಯತ್ನವು ಇದಾಗಿದ್ದು, ನಿಮ್ಮೆಲ್ಲರ ಮೆಚ್ಚುಗೆಗೆ ಪಾತ್ರವಾಗುತ್ತದೆ ಎಂದು ನಂಬಿದ್ದೇವೆ.


ನಿಮ್ಮ ಪ್ರತಿಯೊಂದು ಅನಿಸಿಕೆಗಳಿಗೂ ಆದರದ ಸ್ವಾಗತ.



ಈ ವೀಡಿಯೊ ತುಣುಕನ್ನು ತಯಾರಿಸಲು ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಸಹಕರಿಸಿದ ಪ್ರತಿಯೋರ್ವರಿಗೂ ಈ ಮೂಲಕ ಧನ್ಯವಾದವನ್ನು ಅರ್ಪಿಸುತ್ತೇವೆ.


- ರೋಹಿತ್

ತೀರ ಭಾಗ - 1

ತೀರ ಭಾಗ - 2

ತೀರ ಭಾಗ - 3

ನನ್ನ ಬೆರಳಿನೊಡನೆ ಆಡಿದ ಕನಯ್ಯ...

ನನ್ನ ಬೆರಳಿನೊಡನೆ ಆಡಿದ ಕನಯ್ಯ...