Monday, November 13, 2017

ಮರೆಸಿ ಕೊಲ್ಲುವ ಅಲ್ ಝೈಮರ್ ನ ಖಾಯಿಲೆಯ ನಿವಾರಣೆಗೆ ಹೊಸ ಆಪ್!



ಜರ್ಮನಿಯ ಮನೋವೈದ್ಯ ಮತ್ತು ನರರೋಗ ತಜ್ಞರಾದ ಡಾ| ಅಲಾಯಿಸ್ ಅಲ್ ಝೈಮರ್ ರವರು ೧೯೦೬ ರ ಸಮ್ಮೇಳನವೊಂದರಲ್ಲಿ ಉಪನ್ಯಾಸ ನೀಡುತ್ತಾ, ತಮ್ಮಲ್ಲಿ ಚಿಕಿತ್ಸೆಗೆ ಬಂದ ರೋಗಿಯಾದ ೫೧ ವರ್ಷದ 'ಆಗಸ್ಟೆ' ಎಂಬ ಮಹಿಳೆಯಲ್ಲಿ ತಾವು ಗಮನಿಸಿದ ಗುಣಲಕ್ಷಣಗಳನ್ನು ಪ್ರಥಮ ಬಾರಿಗೆ ಜಗತ್ತಿಗೆ ವಿವರಿಸಿದರು. ಮುಂದೆ, ಈ ಖಾಯಿಲೆಗೆ  ಅಲ್ ಝೈಮರ್ ನ ಖಾಯಿಲೆ ಅಥವಾ ಚಿಕ್ಕದಾಗಿ ಅಲ್ ಝೈಮರ್ಸ್ ಎಂದೇ ಹೆಸರಿಸಲಾಯಿತು. ಅಲ್ ಝೈಮರ್ಸ್ ಶೇಕಡಾ ೬೦-೭೦ ರಷ್ಟು ಬುದ್ದಿಮಾಂದ್ಯತೆಗೆ ಕಾರಣವಾಗುತ್ತಿರುವ ಒಂದು ನರಶೂಲ ರೋಗವಾಗಿದೆ. ಸಾಮಾನ್ಯವಾಗಿ ೬೫ ವರ್ಷದ ನಂತರದ ಪ್ರಾಯದವರಲ್ಲೇ ಕಾಣಿಸಿಕೊಳ್ಳುವ ಈ ಖಾಯಿಲೆಯ ಬೆಳವಣಿಗೆ ದಶಕಗಳಷ್ಟು ಹಿಂದಿನಿಂದಲೇ ಪ್ರಾರಂಭಗೊಳ್ಳುತ್ತದೆಂದು 'ಪಾಟ್ರಿಸಿಯಾ ಲೊಟ್ಟೊ' ಎಂಬ ಮಹಿಳೆಯ ಡೈರಿಯಲ್ಲಿನ ವಿಚಾರಗಳಿಂದ ದೃಢಪಟ್ಟಿದೆ.

ತನ್ನಲ್ಲಿ ಬೆಳವಣಿಗೆಯಾಗುತ್ತಿರುವ ಮಾನಸಿಕ ಅಸ್ವಸ್ಥತೆಯ ಕುರಿತು ಚಿಂತಿತರಾದ ೬೫ ವರ್ಷದ ಪಾಟ್ರಿಸಿಯಾರವರು ತನಗಾಗುತ್ತಿರುವ ಅನುಭವಗಳನ್ನು ಬೇರೆಯವರೊಂದಿಗೆ ಹಂಚಿಕೊಳ್ಳಲಾಗದೆ, ಒಂದು ಡೈರಿಯಲ್ಲಿ ಬರೆಯಲಾರಂಭಿಸಿದರು. ೧೯೯೦ ರ ಮೇ ೧೨ ರಂದು ಆರಂಭಿಸಲಾದ ಆ ಡೈರಿಯ ಪ್ರಥಮ ಸಾಲಿನಲ್ಲೇ 'ನನಗೆ ಅಲ್ ಝೈಮರ್ ನ ಖಾಯಿಲೆಯಿದೆಯೆಂದು ಭಯವಾಗುತ್ತಿದೆ' ಎಂದು ಬರೆದುಕೊಳ್ಳುತ್ತಾರೆ. ಅಲ್ಲಿಂದ ಮುಂದೆ ತಮ್ಮ ಸ್ಥಿತಿಯನ್ನು ಅವಲೋಕಿಸುತ್ತಾ, 'ನಾನು ಯಾವುದನ್ನೂ ನೆನಪಿಸಿಕೊಳ್ಳಲಾಗದಿರುವ ನಿರ್ಜನ ಪ್ರದೇಶದೊಳಗೆ ಬಿದ್ದಿದ್ದೇನೆ. ಇದನ್ನು ಸ್ಪಷ್ಟವಾಗಿ ಬರೆಯಲು ಸಹ ನನಗೆ ಸಾಧ್ಯವಾಗದಿರುವುದು ಹೆಚ್ಚಿನ ಆಘಾತವನ್ನುಂಟುಮಾಡಿದೆ' ಎಂದು ಬರೆಯುತ್ತಾರೆ. ನಂತರದ ದಿನಗಳಲ್ಲಿ 'ತನ್ನ ಸಹಿಯನ್ನೂ ಮಾಡಲು ಕಷ್ಟವಾಗುತ್ತಿಹುದೇಕೆ ಎಂದು ಅರ್ಥವಾಗುತ್ತಿಲ್ಲ' ಎಂದು ಬರೆಯುತ್ತಾ 'ನನ್ನ ಮನಸ್ಸು ರಂಧ್ರಗಳಿಂದ ತುಂಬಿ ಹೋಗಿದೆ' ಎಂದು ತಮ್ಮ ಸ್ಥಿತಿಯನ್ನು ವಿವರಿಸುತ್ತಾರೆ. ೨೦ ವರ್ಷಗಳ ತರುವಾಯ ಪಾಟ್ರಿಸಿಯಾಗೆ ಅಲ್ ಝೈಮರ್ಸ್ ಇರುವುದು ದೃಢಪಡುತ್ತದೆ. ಆದರೆ, ಅಷ್ಟರಲ್ಲಾಗಲೇ ಏನನ್ನೂ ಸರಿಪಡಿಸಲಾಗದಷ್ಟು ತಡವಾಗಿ, ಪರಿಸ್ಥಿತಿ ಕೈಮೀರಿರುತ್ತದೆ.

ದೀರ್ಘಕಾಲ ಕಾಡುವ ಅಲ್ ಝೈಮರ್ಸ್ ನ ಬೆಳವಣಿಗೆ ಸಹ ವಿವಿಧ ಹಂತಗಳಲ್ಲಿ ಆಗುತ್ತದೆ. ಪ್ರಾಥಮಿಕ ಹಂತಗಳಲ್ಲಿ ಭಾಷೆಯ ವಾಗ್ದಾರೆ ಮತ್ತು ಸ್ಪಷ್ಟತೆ, ಯೋಚನಾ ಶಕ್ತಿ, ಕಾರ್ಯಕ್ಷಮತೆ ಹಾಗೂ ಚಲನೆಯ ಹೊಂದಾಣಿಕೆಗಳಲ್ಲಿ ಸಣ್ಣಪುಟ್ಟ ತೊಂದರೆಗಳು ಕಾಣಿಸಿಕೊಳ್ಳುತ್ತದೆ. ಮುಂದುವರೆದಂತೆ, ಓದಲು ಮತ್ತು ಬರೆಯಲು ಕಷ್ಟವಾಗುವುದು, ಮಾತಿನ ಮಧ್ಯದಲ್ಲಿ ಆಗಾಗ್ಗೆ ತಪ್ಪು ಪರ್ಯಾಯ ಪದಗಳು ಸೇರುವುದು ಹಾಗೂ ಸಂಕೀರ್ಣ ದೈನಂದಿನ ಚಟುವಟಿಕೆಗಳನ್ನು ಸ್ವತಂತ್ರವಾಗಿ ಕೈಗೊಳ್ಳಲು ಸಾಧ್ಯವಾಗದಂತಹ ಪರಿಸ್ಥಿತಿ ಬಂದೊದಗುತ್ತದೆ. ಹೆಚ್ಚಿನ ಸಮಯಗಳಲ್ಲಿ ಈ ಗುಣಲಕ್ಷಣಗಳನ್ನು ಮುಪ್ಪಿನಿಂದ ಬಂದವುಗಳೆಂದು ತಪ್ಪಾಗಿ ಅರ್ಥೈಸಿಕೊಳ್ಳಲಾಗುತ್ತದೆ. ಆದರೆ, ವಯೋಸಹಜ ಹಾಗೂ ಅಲ್ ಝೈಮರ್ಸ್ ಸಂಬಂಧಿತ ಮರೆವಿನಲ್ಲಿ ಭಿನ್ನತೆಯಿರುತ್ತದೆ. ಉದಾಹರಣೆಗೆ, ವಯೋಸಹಜ ಮರೆವಿನಲ್ಲಿ ಕಾರಿನ ಕೀಯನ್ನು ಇಟ್ಟಿರುವ ಜಾಗವನ್ನು ಮರೆತರೆ, ಅಲ್ ಝೈಮರ್ಸ್ ನ ಸಂದರ್ಭದಲ್ಲಿ ಅದೇ ಕೀಯನ್ನು ಸಾಮಾನ್ಯವಾಗಿ ಇಡುವ ಜಾಗಕ್ಕಿಂತಲೂ ವಿಚಿತ್ರವಾದ ಜಾಗಗಳಲ್ಲಿ (ಉದಾ: ರೆಫ್ರಿಜರೇಟರ್) ಇಡುತ್ತಾರೆ. ಹಾಗೆಯೇ, ಓಡಾಡುವಾಗ, ಒಂದು ಅಥವಾ ಎರಡು ತಿರುವುಗಳಲ್ಲಿ ದಾರಿ ಮರೆಯುವುದು ಸಹಜವಾಗಿದ್ದು, ದಿನನಿತ್ಯ ಓಡಾಡುವ ಜಾಗಗಳಲ್ಲೇ ಕಳೆದು ಹೋದ ಭಾವನೆ ಬಂದು, ಆ ಜಾಗಕ್ಕೆ ಹೇಗೆ ಬಂದೆನೆಂದೇ ಅರಿವಾಗದಿರುವುದು ಅಲ್ ಝೈಮರ್ಸ್ ನ ಗುಣಲಕ್ಷಣವಾಗಿದೆ. ಖಾಯಿಲೆಯ ಕೊನೆಯ ಹಂತದಲ್ಲಿ ದೀರ್ಘವಧಿ ನೆನಪುಗಳು ಸಂಪೂರ್ಣ ನಶಿಸಿ ಹೋಗುವುದರ ಜೊತೆಗೆ ಮೌಖಿಕ ಭಾಷಾ ಸಾಮರ್ಥ್ಯ ನಷ್ಟ, ಭ್ರಮನಿರಸನಗೊಳ್ಳುವುದು, ಯೋಚನಾ ಶಕ್ತಿ ಹರಣ, ಅನಿರೀಕ್ಷಿತ ಆಕ್ರಮಣಶೀಲತೆ ಹಾಗೂ ಯಾವ ಕೆಲಸವನ್ನೂ ಮಾಡಲಾಗದ ಸ್ಥಿತಿಗೆ ತಲುಪಿ ಹಾಸಿಗೆ ಹಿಡಿಯುತ್ತಾರೆ. ಕಡೆಯಲ್ಲಿ ನ್ಯುಮೋನಿಯಾಗಳಂತಹ ಅಂತರ್ಕಾಲೀನ ಸೋಂಕುಗಳಿಂದ ಮರಣ ಹೊಂದುತ್ತಾರೆ. ರೋಗನಿರ್ಣಯಗೊಂಡ ನಂತರ ರೋಗಿಯು ಕೇವಲ ೩ ರಿಂದ ೯ ವರ್ಷಗಳ ಕಾಲ ಮಾತ್ರ ಜೀವಿಸಬಲ್ಲರು. ಜಗತ್ತಿನಲ್ಲಿ ಪ್ರಸ್ತುತ ಸುಮಾರು ೪ ಕೋಟಿ ೭೫ ಲಕ್ಷ ಜನರು ಅಲ್ ಝೈಮರ್ಸ್ ನಿಂದ ಬಳಲುತ್ತಿದ್ದರೆ, ಭಾರತದಲ್ಲಿ ಈ ಸಂಖ್ಯೆ ಸುಮಾರು ೩೭ ಲಕ್ಷದಷ್ಟಿದೆ. ೨೦೩೦ ರ ವೇಳೆಗೆ ನಮ್ಮ ದೇಶದಲ್ಲಿನ ಅಲ್ ಝೈಮರ್ಸ್ ಬಾಧಿತರ ಸಂಖ್ಯೆ ದ್ವಿಗುಣಗೊಂಡು ಸುಮಾರು ೭೫ ಲಕ್ಷ ತಲುಪಬಹುದೆಂದು ಪರಿಣಿತರು ವರದಿ ನೀಡಿದ್ದಾರೆ.

ಅಲ್ ಝೈಮರ್ಸ್ ಗೆ ಕಾರಣಗಳಾವುವು ಎಂಬುದು ಇನ್ನೂ ಕೂಡಾ ಸ್ಪಷ್ಟವಾಗಿಲ್ಲ. ಆದರೆ, ಈ ಕುರಿತು ಕೆಲವು ಸಿದ್ಧಾಂತಗಳಿವೆ. ಈ ಸಿದ್ದಾಂತಗಳ ಪ್ರಕಾರ ಮೆದುಳಿನಲ್ಲಿ ನರಕೋಶಗಳ ಹೊರಗೆ ಮತ್ತು ಒಳಗೆ ಕ್ರಮವಾಗಿ ಶೇಖರಗೊಂಡು ನರಕೋಶಗಳ ಸಾವಿಗೆ ಕಾರಣವಾಗುವ ಅಮೈಲಾಡ್  ಬೀಟಾ ಮತ್ತು ಟಾವ್ ಎಂಬ ಎರಡು ಅಸಹಜ ಪ್ರೋಟೀನುಗಳು ಹಾಗೂ ಎರಡು ನರಕೋಶಗಳ ನಡುವೆ ಸಂಕೇತಗಳನ್ನು ಪ್ರಸರಿಸುವ ಅಸಿಟೈಲ್ ಕೊಲಿನ್ ನ ಪ್ರಮಾಣದಲ್ಲಾಗುವ ಕಡಿತಗಳು ಅಲ್ ಝೈಮರ್ಸ್ ಗೆ ಕಾರಣೀಭೂತ ಅಂಶಗಳಾಗಿವೆ. ಅಲ್ಲದೇ, ಹಲವು ಅನುವಂಶಿಕ ಧಾತುಗಳಲ್ಲಾಗುವ ಅಸಹಜ ರೂಪಾಂತರಗಳೂ ಅಲ್ ಝೈಮರ್ಸ್ ಗೆ ದಾರಿಯಾಗಬಹುದೆಂಬ ವಿಷಯವನ್ನು ಅಧ್ಯಯನಗಳು ಹೊರಹಾಕಿವೆ. ಇವುಗಳ ಜೊತೆಯಲ್ಲಿ, ಧೂಮಪಾನ ಹಾಗೂ ವಾಯುಮಾಲಿನ್ಯಗಳೂ ಸಹ ಈ ಖಾಯಿಲೆಯನ್ನು ತರಬಲ್ಲ ಅಪಾಯಕಾರಿ ಅಂಶಗಳಾಗಿವೆ.

ನಿರಾಶೆಯ ಸಂಗತಿಯೆಂದರೆ ಈ ಮೇಲಿನ ಎಲ್ಲಾ ಕಾರಣೀಯ ಅಂಶಗಳ ವಿರುದ್ಧ ಅಭಿವೃದ್ಧಿಪಡಿಸಲಾದ ಯಾವುದೇ ಔಷಧಗಳಿಂದ ಅಲ್ ಝೈಮರ್ಸ್ ನ್ನು ತಡೆಯಲು, ನಿಯಂತ್ರಿಸಲು ಅಥವಾ ಗುಣಪಡಿಸಲು ಸಾಧ್ಯವಾಗದಿರುವುದು. ಸಧ್ಯ ಬಳಕೆಯಲ್ಲಿರುವ ೪-೫ ಔಷಧಗಳೂ ಸೀಮಿತ ಪ್ರಯೋಜನವನ್ನು ತೋರುತ್ತಿರುವುದರಿಂದ ಪರಿಣಾಮಕಾರಿ ಚಿಕಿತ್ಸಾ ಕ್ರಮಗಳನ್ನು ಅಭಿವೃದ್ಧಿಪಡಿಸುವ ಅವಶ್ಯಕತೆಯಿದೆ.

ಹಲವಾರು ಅಧ್ಯಯನಗಳು ಸೃಜನಾತ್ಮಕ ಕ್ರಿಯೆಗಳಾದ ಓದು, ಬರವಣಿಗೆ, ಸಂಗೀತ ವಾದ್ಯ ನುಡಿಸುವಿಕೆ ಮತ್ತು ಪದಬಂಧ ಬಿಡಿಸುವಂತಹ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವರಲ್ಲಿ ಅಲ್ ಝೈಮರ್ಸ್ ನ ಸಾಧ್ಯತೆ ಕಡಿಮೆ ಎಂದು ಅಭಿಪ್ರಾಯಪಟ್ಟಿವೆ. ಈ ರೀತಿ ಮೆದುಳಿನ ಕಾರ್ಯಚಟುವಟಿಕೆಯನ್ನು ಹೆಚ್ಚಿಸಿ, ಆ ಮೂಲಕ ಈ ಖಾಯಿಲೆಯನ್ನು ನಿಯಂತ್ರಿಸುವ ಗುರಿಯೊಂದಿಗೆ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ ಸಂಶೋಧಕರು 'ಗೇಮ್ ಶೋ' ಎಂಬ ನವೀನ ವೀಡಿಯೊ ಗೇಮ್ ಒಂದನ್ನು ಅಭಿವೃದ್ದಿಪಡಿಸಿ, ಅಧ್ಯಯನ ಕೈಗೊಂಡಿದ್ದಾರೆ. ಒಟ್ಟು ೪೨ ಪ್ರಾಥಮಿಕ ಹಂತದ ಅಲ್ ಝೈಮರ್ಸ್ ರೋಗಿಗಳು ಭಾಗವಹಿಸಿದ ಈ ಅಧ್ಯಯನದಲ್ಲಿ, ೨೧ ರೋಗಿಗಳು ಮಾತ್ರ ಪ್ರತಿ ವಾರ ೨ ಗಂಟೆಗಳಷ್ಟು ಕಾಲ ವಿವಿಧ ಹಂತಗಳಲ್ಲಿ ಹೆಚ್ಚು ಮಾನಸಿಕ ಸವಾಲೆಸೆಯುವ ಈ ಆಟವನ್ನು ಆಡಿದರು. ಆಡದಿದ್ದ ಉಳಿದ ೨೧ ರೋಗಿಗಳಿಗೆ ಹೋಲಿಸಿದಾಗ, ಆಡಿದ ರೋಗಿಗಳಲ್ಲಿ ಸ್ಮರಣಶಕ್ತಿ ವೃದ್ಧಿಯಾಗಿ ದಿನನಿತ್ಯದ ಚಟುವಟಿಕೆಗಳಿಗೆ ಸಹಕಾರಿಯಾಗಿದೆ. ಈ ಪರಿಣಾಮಕಾರಿ ಫಲಿತಾಂಶಗಳಿಂದ ಹರ್ಷಿತರಾದ ಸಂಶೋಧನೆಯ ರೂವಾರಿಗಳಲ್ಲೊಬರಾದ ಪ್ರೊ| ಬಾರ್ಬರ ಸಾಹಕಿಯನ್ ರವರು 'ಮೆದುಳಿನ ತರಬೇತಿ ಅಲ್ ಝೈಮರ್ಸ್ ರೋಗಿಗಳಿಗೆ ಪ್ರಯೋಜನಕಾರಿಯಾಗಬಲ್ಲದು' ಎಂದು ಹೇಳುತ್ತಾರೆ.

ಈ ಗೇಮ್ ಆಪ್ ನಿಂದ ನೇರವಾಗಿ ಖಾಯಿಲೆಯನ್ನು ಗುಣಪಡಿಸಲು ಸಾಧ್ಯವಾಗದಿದ್ದರೂ, ಸ್ಮರಣ ಸಂಬಂಧಿತ ಖಾಯಿಲೆಯ ಗುಣಲಕ್ಷಣಗಳನ್ನು ತಹಬದಿಗೆ ತರುವಲ್ಲಿ ಈ ಆಟವು ಸಹಕಾರಿಯಾಗಲಿದೆ. ಆದರೂ, ಇನ್ನೂ ಹೆಚ್ಚಿನ ಸಂಶೋಧನೆಯ ಅಗತ್ಯವಿದ್ದು, ತಂತ್ರಜ್ಞಾನಗಳ ಸದುಪಯೋಗದ ಜೊತೆಯಲ್ಲಿ ರೋಗನಿವಾರಕಗಳ ಅಭಿವೃದ್ಧಿಯೂ ಕೂಡಾ ಆಗಬೇಕಿದೆ. ಇವುಗಳೆಲ್ಲದಕ್ಕಿಂತ ಮಿಗಿಲಾಗಿ ರೋಗಿಗಳಿಗೆ ಪೂರಕವಾಗಿರುವಂತಹ ವಾತಾವರಣವನ್ನು ಮನೆಯಲ್ಲಿ ನಿರ್ಮಿಸಿ, ಅವರುಗಳಿಗೆ ಸೂಕ್ತ ಆರೈಕೆ ನೀಡುವುದು ಅತ್ಯಂತ ಪ್ರಮುಖವಾಗಿದೆ. ನಮ್ಮ ಆಹಾರ ಪದ್ದತಿಯ ಬದಲಾವಣೆಯಿಂದ ಈ ಖಾಯಿಲೆಯನ್ನು ಅಲ್ಪಮಟ್ಟಿಗೆ ತಡೆಗಟ್ಟಬಹುದಾಗಿರುವುದರಿಂದ, ನಮಗೆ ಮರವು ಆವರಿಸುವ ಮುನ್ನ ನಮ್ಮ ಜೀವನಶೈಲಿಯನ್ನು ಸುಧಾರಿಸಿಕೊಳ್ಳುವ ಅವಕಾಶವೊಂದು ನಮ್ಮ ಮುಂದಿದೆ.


ಡಾ|| ರೋಹಿತ್ ಕುಮಾರ್ ಹೆಚ್. ಜಿ. । ವಿಕ್ರಮ । ೧೨-೧೧-೨೦೧೭










       

Friday, August 18, 2017

ಸ್ವಾತಂತ್ರ್ಯದ ಆಶಯ

ಎಲ್ಲರಿಗೂ ಸ್ವಾತಂತ್ರ್ಯೋತ್ಸವದ ಶುಭಾಶಯಗಳು. 

ನಾವು ಇಂದು ಅನುಭವಿಸುತ್ತಿರುವ ಸ್ವಾತಂತ್ರ್ಯದ ಹಕ್ಕುಗಳು ಅಸಂಖ್ಯಾತ ದೇಶಭಕ್ತರ ಬಲಿದಾನದಿಂದ ದೊರೆತಿರುವುದಾಗಿದೆ. ಅಂತಹ ಎಲ್ಲಾ ಮಹನೀಯರಾದ ಸ್ವಾತಂತ್ರ್ಯ ಹೋರಾಟಗಾರರು, ವೀರ ಯೋಧರು, ಕ್ರಾಂತಿಕಾರಿಗಳು ಮತ್ತು ಇತರ ಅನೇಕ ಹುತಾತ್ಮರನ್ನು ಇಂದು ಸ್ಮರಿಸಿ, ಅವರ ಕೊಡುಗೆಗಳಿಗೆ ವಿನಮ್ರ ವಂದನೆಗಳನ್ನು ಸಲ್ಲಿಸುವುದು ನಮ್ಮೆಲ್ಲರ ಆಧ್ಯ ಕರ್ತವ್ಯವಾಗಿದೆ. ವೈಜ್ಞಾನಿಕ ಪುರಾವೆಗಳ ಪ್ರಕಾರ ಭಾರತದಲ್ಲಿ ಸರಿಸುಮಾರು ೭೫ ಸಾವಿರ ವರ್ಷಗಳ ಹಿಂದಿನಿಂದ ಆಧುನಿಕ ಮಾನವನು, ಅಂದರೆ ಹೋಮೋ ಸೇಪಿಯೆನ್ಸ್ ವಾಸಿಸುತ್ತಿದ್ದಾನೆ. ಸಿಂಧೂ ಕಣಿವೆ ನಾಗರೀಕತೆಯ ತವರೂರಾದ ನಮ್ಮ ದೇಶದಲ್ಲಿ ಹಲವಾರು ಸಂಸ್ಕೃತಿ, ಭಾಷೆ ಮತ್ತು ಧರ್ಮಗಳು ಏಕತೆಯೊಂದಿಗೆ ಸಹಭಾಳ್ವೆಯನ್ನು ನಡೆಸುತ್ತಿವೆ. 

ಮೌರ್ಯರು, ದೆಹಲಿಯ ಸುಲ್ತಾನರು, ವಿಜಯನಗರ ಅರಸರು, ಮೊಘಲರು, ಮರಾಠರು ಹಾಗೂ ಸಿಖ್ ಸಾಮ್ರಾಜ್ಯಗಳು ಸೇರಿದಂತೆ ಹಲವಾರು ಸಾಮ್ರಾಜ್ಯಗಳು/ಸಂಸ್ಥಾನಗಳ ರಾಜರುಗಳ ಆಳ್ವಿಕೆಯಲ್ಲಿ ಸಮಗ್ರ ಭಾರತವು ಸಂಪನ್ಮೂಲಭರಿತ ರಾಷ್ಟ್ರವಾಗಿ ಬೆಳೆಯಿತು. ಈ ರೀತಿ ಸಮೃದ್ಧತೆಗೆ ಇನ್ನೊಂದು ಹೆಸರಾಗಿದ್ದ ಭಾರತಕ್ಕೆ ಯುರೋಪ್ ನಿಂದ ಸಮುದ್ರ ಮಾರ್ಗವನ್ನು ೧೪೯೮ರಲ್ಲಿ ವಾಸ್ಕೊಡಗಾಮ ಕಂಡುಹಿಡಿಯುವುದರೊಂದಿಗೆ ಭಾರತ ಹಾಗೂ ಯೂರೋಪಿನ ನಡುವೆ ವ್ಯಾಪಾರ ವಹಿವಾಟು ಪ್ರಾರಂಭಗೊಂಡಿತು. ಪೋರ್ಚುಗೀಸ್ ಮತ್ತು ಡಚ್ಚರ ನಂತರ ೧೬೦೦ ರ ವೇಳೆಗೆ ವ್ಯಾಪಾರದ ನೆಪ ಹೊತ್ತಿದ್ದ ಬ್ರಿಟೀಷ್ ಈಸ್ಟ್ ಇಂಡಿಯಾ ಕಂಪನಿಯ ಆಗಮನದಿಂದ ನಮ್ಮ ದೇಶದಲ್ಲಿ ವಸಾಹತುಶಾಹಿ ಪರಿಸರ ನಿರ್ಮಾಣವಾಗತೊಡಗಿತು. ಬ್ರಿಟಿಷ್ ವ್ಯಾಪಾರಿಗಳು ಕ್ರಮೇಣ ಸೇನೆ ಹಾಗೂ ಆಡಳಿತ ಚುಕ್ಕಾಣಿ ಹಿಡಿಯಲು ಪ್ರಾರಂಭಿಸಿದರು ಹಾಗೂ ಇದನ್ನು ವಿರೋಧಿಸಿದ ಹಲವಾರು ರಾಜ್ಯ/ಸಂಸ್ಥಾನಗಳನ್ನು  ಬಲಿಷ್ಠ ಸೇನೆಯ ಮುಖಾಂತರ ಸೋಲಿಸಿ, ವಶಪಡಿಸಿಕೊಂಡರು. ೧೭೫೭ರ ಹೊತ್ತಿಗೆ ಭಾರತದ ಹಲವಾರು ಭಾಗಗಳು ಆಂಗ್ಲರ ಪಾಲಾಗಿತ್ತು. 

ಆಂಗ್ಲರ ದಬ್ಬಾಳಿಕೆ ಹಾಗೂ ಪಕ್ಷಪಾತಿ ಧೋರಣೆಯಿಂದ ಬೇಸತ್ತಿದ್ದ ಭಾರತೀಯರು ೧೮೫೭ ರಲ್ಲಿ ಬ್ರಿಟೀಷರ ಆಳ್ವಿಕೆಯ ವಿರುದ್ಧ ಹೋರಾಡಲು ಅಣಿಯಾದರು. ಇದು ಭಾರತದ ಸ್ವಾತಂತ್ರ್ಯ ಸಂಗ್ರಾಮವೆಂದೇ ಹೆಸರಾಯಿತು. ಈ ಸಂಗ್ರಾಮವು ನಮ್ಮ ದೇಶದ ಸ್ವಾತಂತ್ರ್ಯ ಚಳುವಳಿಗೆ ಮುನ್ನುಡಿಯನ್ನು ಬರೆಯಿತು. ಅಲ್ಲಿಂದ ಮುಂದೆ, ಆಂಗ್ಲರು ನಡೆಸಿದ ಜಲಿಯನ್ ವಾಲಾಬಾಗ್ ಸೇರಿದಂತೆ ಹಲವಾರು ಹತ್ಯಾಕಾಂಡಗಳು ಹಾಗೂ ಅವರ ನೀತಿರಚನೆಯಲ್ಲಿನ ತಪ್ಪುಗಳಿಂದ ಉಂಟಾದ ಭೀಕರ ಕ್ಷಾಮಗಳು ಭಾರತೀಯರನ್ನು ಬ್ರಿಟೀಷರ ವಿರುದ್ಧ ಒಗ್ಗೂಡಿಸಿ, ಸ್ವಾತಂತ್ರ್ಯ ಚಳುವಳಿಯನ್ನು ಬಲಪಡಿಸಿತು. ಮಹಾತ್ಮಾ ಗಾಂಧೀಯವರ ನೇತೃತ್ವದ ಶಾಂತಿಯುತ ಸತ್ಯಾಗ್ರಹ ಮತ್ತು ಅಸಹಕಾರಿ ಚಳುವಳಿಗಳ ಜೊತೆಯಲ್ಲಿ ಭಗತ್ ಸಿಂಗ್, ಚಂದ್ರಶೇಖರ್ ಆಜಾದ್, ಸುಭಾಷ್ ಚಂದ್ರ ಬೋಸ್ ರಂತಹ ಸಹಸ್ರಾರು ಕ್ರಾಂತಿಗಳ ಹೊರರಾಟಗಳು ಹಾಗೂ ವಿವಿಧ ಸಮಯಾವಧಿಗಳಲ್ಲಿ ಆಂಗ್ಲರ ವಿರುದ್ಧ ತೊಡೆ ತಟ್ಟಿದ ಅನೇಕರ ಹೋರಾಟಗಳು ಭಾರತಕ್ಕೆ ಆಗಸ್ಟ್ ೧೫, ೧೯೪೭ ರಂದು ಸ್ವಾತಂತ್ರ್ಯ ದೊರಕುವಲ್ಲಿ ನೆರವಾದವು. ಸ್ವಾತಂತ್ರ್ಯದ ಹೊತ್ತಿನಲ್ಲಿ ದೇಶದಲ್ಲಿದ್ದ ೫೬೫ ರಾಜಮನೆತನಗಳ ರಾಜ್ಯಗಳಲ್ಲಿ ೨೧ ಮಾತ್ರ ರಾಜ್ಯ ಸರ್ಕಾರವನ್ನು ಹೊಂದಿದ್ದವು. ಅವುಗಳಲ್ಲಿ ೩ ರಾಜ್ಯಗಳು ಮಾತ್ರ ಅತೀ ದೊಡ್ಡ ರಾಜ್ಯಗಳಾಗಿದ್ದು, ಅದರಲ್ಲಿ ನಮ್ಮ ಮೈಸೂರು ಸಂಸ್ಥಾನವೂ ಒಂದಾಗಿತ್ತು. 

ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ತಮ್ಮ ಜೀವ-ಜೀವನವನ್ನೇ ಮುಡುಪಾಗಿಟ್ಟವರು ಅನೇಕರು. ಹಾಗೆಯೇ, ನಮಗೆ ದೊರೆತಿರುವ ಸ್ವಾತಂತ್ರ್ಯ ಹಾಗೂ ನಮ್ಮ ದೇಶದ ಸಮಗ್ರತೆಯನ್ನು ದುಷ್ಟರನ್ನು ನಿಗ್ರಹಿಸುವ ಮೂಲಕ ರಕ್ಷಿಸುತ್ತಿರುವವರು ನಮ್ಮ ಸೈನಿಕರು. ಇಂತಹ ಮಹಾನ್ ವ್ಯಕ್ತಿತ್ವಗಳಿಗೆ ನಮ್ಮ ಕೃತಜ್ಞತೆಯನ್ನು ಸಲ್ಲಿಸುವ ಹಾಗೂ ಅವರ ಬಲಿದಾನಗಳನ್ನು ನೆನೆಯುವ ಸಂದರ್ಭವಿದು. ನಾವೆಲ್ಲಾ ದೇಶದ ಉತ್ತಮ ನಾಗರೀಕರಾಗಿ ದೇಶಭಕ್ತಿಯನ್ನು ಮೈಗೂಡಿಸಿಕೊಂಡು ನಮ್ಮ ದೇಶಕ್ಕೆ ಕೈಲಾದ ಸಹಾಯವನ್ನು ಮಾಡಲು ಪ್ರಯತ್ನಿಸೋಣ.  

ವಂದೇ ಮಾತರಂ. 

 ಡಾ| ರೋಹಿತ್ ಕುಮಾರ್ ಎಚ್. ಜಿ. 






Tuesday, June 27, 2017

೭೦ ದೇಶ ದಾಟಿ ಭಾರತಕ್ಕೆ ಬಂದ ಝಿಕಾ ಬಗ್ಗೆ ಎಚ್ಚರ ಅತ್ಯಗತ್ಯ!

ಅಂದು ನವೆಂಬರ್ ೦೯, ೨೦೧೬. ಗುಜರಾತಿನ ಅಹಮದಾಬಾದ್ ನಗರದ ಬಿ.ಜೆ.ಎಂ.ಸಿ. ಆಸ್ಪತ್ರೆಯಲ್ಲಿ ೩೪ ವರ್ಷದ ಮಹಿಳೆಯೊಬ್ಬರು ಒಂದು ಆರೋಗ್ಯವಂತ ಮಗುವಿಗೆ ಜನ್ಮ ನೀಡಿದರು. ಹೆರಿಗೆಯ ನಂತರ ಇನ್ನೂ ಆಸ್ಪತ್ರೆಯಲ್ಲಿರುವಾಗಲೇ ಸಣ್ಣ ಪ್ರಮಾಣದ ಜ್ವರ ಬಂದಿದ್ದರಿಂದ, ವೈದ್ಯರು ಡೆಂಗ್ಯೂ ಜ್ವರವಿರಬಹುದೆಂದು ಶಂಕಿಸಿ, ರಕ್ತದ ಮಾದರಿಯನ್ನು ಆಸ್ಪತ್ರೆಯಲ್ಲಿರುವ ವೈರಲ್ ರಿಸರ್ಚ್ ಅಂಡ್ ಡಯಾಗ್ನಾಸ್ಟಿಕ್ ಲ್ಯಾಬೋರೇಟರಿ (ವಿ. ಆರ್. ಡಿ. ಎಲ್.) ಗೆ ಕಳುಹಿಸಿದರು. ಗರ್ಭಧರಿಸಿದ ನಂತರ ಯಾವುದೇ ರೀತಿಯ ಜ್ವರದಿಂದ ಬಳಲದೇ ಇದ್ದ ಆ ತಾಯಿಯ ರಕ್ತದ ಪರೀಕ್ಷೆ ನಡೆಸಲಾಗಿ, ಪತ್ತೆಯಾಗುತ್ತದೆ ವೈರಾಣು 'ಝಿಕಾ'. ಅಲ್ಲಿಗೆ, ಸುಮಾರು ೭೦ ದೇಶಗಳನ್ನು ದಾಟಿ ಝಿಕಾ ವೈರಾಣು ಭಾರತಕ್ಕೆ ಬಂದು ತಲುಪಿದಂತಾಗಿದೆ. 

೧೯೪೭ರ ಏಪ್ರಿಲ್ ನಲ್ಲಿ ಉಗಾಂಡಾದ ಝಿಕಾ ಅರಣ್ಯದಲ್ಲಿನ ರೀಸಸ್ ಮಕಾಕ್ ಮಂಗದಿಂದ ಪ್ರಪ್ರಥಮವಾಗಿ ಬೇರ್ಪಡಿಸಲಾದ ಈ ವೈರಾಣು ' ಫ್ಲ್ಯಾವಿವಿರಿಡೇ' ಎಂಬ ವೈರಸ್ ನ ಗುಂಪಿಗೆ ಸೇರಿದ್ದು, ಮೂಲ ಅರಣ್ಯದ ಹೆಸರನ್ನೇ ವೈರಾಣುವಿಗೂ ಇಡಲಾಗಿದೆ. ಡೆಂಗ್ಯೂ, ಹಳದಿ ಜ್ವರ ಮತ್ತು ಜಪಾನೀಸ್ ಏನ್ಸೆಫಲೈಟಿಸ್ ರೋಗಾಣುಗಳ ಗುಂಪಿಗೆ ಸೇರಿರುವ ಝಿಕಾ ವೈರಾಣುವು ಮಾನವನಿಗೂ ಸಹ ಸೋಂಕನ್ನು ತರಬಲ್ಲವು ಎಂದು ೧೯೫೨ ರಲ್ಲಿ ಉಗಾಂಡ ಮತ್ತು ತಾಂಜೇನಿಯಾದಲ್ಲಿ ನಡೆದ ರಕ್ತ ಪರೀಕ್ಷೆಗಳ ಸಮೀಕ್ಷೆಯಿಂದ ದೃಢಪಟ್ಟಿದೆ. ಈ ಸಮೀಕ್ಷೆಯಲ್ಲಿ ಪರೀಕ್ಷಿಸಲಾದ ಒಟ್ಟು ೯೯ ರಕ್ತದ ಮಾದರಿಗಳಲ್ಲಿ ೬ ಮಾದರಿಗಳು ಝಿಕಾ ಸೋಂಕನ್ನು ಹೊಂದಿದ್ದವು. ಮಂಗನಿಂದ ಮಾನವನಿಗೆ ವೈರಾಣುವನ್ನು ಹಗಲಿನಲ್ಲಿ ಕ್ರಿಯಾಶೀಲವಾಗಿರುವ 'ಈಡೀಸ್' ಜಾತಿಯ ಸೊಳ್ಳೆಗಳು ಪ್ರಾಥಮಿಕ ಸಂಪರ್ಕ ಮಾಧ್ಯಮವಾಗಿ ಪಸರಿಸಬಲ್ಲವು ಎಂದು ೧೯೪೮ರಲ್ಲೇ ಝಿಕಾ ಅರಣ್ಯದ ಸೊಳ್ಳೆಗಳಿಂದ ರೋಗಾಣುಗಳನ್ನು ಬೇರ್ಪಡಿಸುವ ಮೂಲಕ ಕಂಡುಹಿಡಿಯಲಾಯಿತು. ಅಲ್ಲದೇ, ರಕ್ತದ ವರ್ಗಾವಣೆಯಿಂದ, ಲೈಂಗಿಕ ಸಂಪರ್ಕದಿಂದ ಹಾಗೂ ಗರ್ಭಧಾರಣೆಯ ಸಂದರ್ಭದಲ್ಲಿ ತಾಯಿಯಿಂದ ಮಗುವಿಗೂ ಸಹ ಝಿಕಾ ವೈರಾಣು ಹರಡಬಲ್ಲದಾಗಿದೆ. ಝಿಕಾ ಸೋಂಕಿತ ಪ್ರದೇಶಗಳಿಂದ ಇತರ ಪ್ರದೇಶಗಳಿಗೆ ಪ್ರವಾಸ ಕೈಗೊಳ್ಳುವವರು ಈ ವೈರಾಣು ಹರಡಲು ಕಾರಣೀಭೂತರಾಗುತ್ತಾರೆ. 

ಝಿಕಾ ಸೋಂಕಿತರು  ಸಣ್ಣ ಪ್ರಮಾಣದ ಜ್ವರ (೩೮. ಡಿಗ್ರಿಗಿಂತ ಕಡಿಮೆ ಉಷ್ಣತೆಯ), ಚರ್ಮಗಳ ಮೇಲೆ ಚಿಕ್ಕ ಚಿಕ್ಕ ಕೆಂಪು ಬಾವುಗಳು, ಮಾಂಸಖಂಡ  ನೋವು, ಕೀಲುಗಳಲ್ಲಿ ಊತದೊಂದಿಗಿನ ನೋವು, ತಲೆ ನೋವು, ಕಣ್ಣುಗಳ ಹಿಂದಿನ ಭಾಗದಲ್ಲಿ ನೋವು ಹಾಗು ಕಂಜೆಕ್ಟಿವೈಟಿಸ್ ನಿಂದ ಬಳಲುತ್ತಾರೆ. ಈ ಗುಣಲಕ್ಷಣಗಳು ಸೌಮ್ಯವಾಗಿರುವ ಪರಿಣಾಮ ಹೆಚ್ಚಿನ ಸಂದರ್ಭಗಳಲ್ಲಿ ಗಮನಕ್ಕೆ ಬಾರದೇ ಹೋಗುತ್ತವೆ ಅಥವಾ ಡೆಂಗ್ಯೂ ಜ್ವರವೆಂದು ತಪ್ಪಾಗಿ ಅರ್ಥೈಸಿಕೊಳ್ಳಲಾಗುತ್ತದೆ. ಝಿಕಾ ಸೋಂಕನ್ನು ವೈರಾಣುವಿನ ನ್ಯೂಕ್ಲಿಯಿಕ್ ಆಸಿಡ್ (ಆರ್. ಎನ್. ಎ.) ಪತ್ತೆ ಹಾಗೂ ರಕ್ತ ಪರೀಕ್ಷೆಗಳ ಮೂಲಕ ಗುರುತಿಸಬಹುದಾಗಿದೆ. ಆದರೆ, ಈ ಸೋಂಕಿಗೆ ಯಾವುದೇ ರೀತಿಯ ವೈರಾಣು ನಿರೋಧಕ ಔಷಧ ಅಥವಾ ಲಸಿಕೆಗಳು ಇನ್ನೂ ಅಭಿವೃದ್ಧಿಯಾಗಿಲ್ಲದಿರುವುದರಿಂದ, ಪ್ರಸ್ತುತ ಕೇವಲ ಗುಣಲಕ್ಷಣಗಳನ್ನು ಉಪಶಮನಗೊಳಿಸುವಂತಹ ಔಷಧಗಳನ್ನು ( ಉದಾ: ಜ್ವರ ಮತ್ತು ನೋವು ನಿವಾರಕಗಳು) ಮಾತ್ರ ಸೂಚಿಸಲಾಗುತ್ತಿದೆ. ಸೋಂಕಿತರಲ್ಲಿ ಬಹುಪಾಲು ಜನರು ಯಾವುದೇ ಹೆಚ್ಚಿನ ತೊಂದರೆಗಳಿಗೆ ಒಳಗಾಗದೆ ಗುಣಮುಖರಾಗುತ್ತಾರೆ. ಈ ಸೋಂಕಿನಿಂದ ಆಸ್ಪತ್ರೆಗಳಿಗೆ ದಾಖಲಾಗುವ ಸಂಖ್ಯೆಯೂ ಸಹ ವಿರಳವಾಗಿದ್ದು, ಇಲ್ಲಿಯವರೆಗೆ ಯಾವುದೇ ಪ್ರಾಣಹಾನಿಯು ದಾಖಲಾಗಿಲ್ಲ. ಹಾಗಾದರೇ, ಏಕೆ ನಾವು ಈ ಬಗ್ಗೆ ಗಮನ ಹರಿಸಬೇಕು? ನಮ್ಮ ದೇಶಕ್ಕೆ ವೈರಾಣು ಬಂದಿರುವುದರ  ಕುರಿತು ಏತಕ್ಕೆ ಚಿಂತೆಗೊಳಗಾಗಬೇಕು ಎಂದು ಪ್ರೆಶ್ನಿಸುವುದಾದರೆ, ಉತ್ತರ ಮುಂದೆ ಇದೆ. 

ಗರ್ಭಧಾರಣೆ ಸಂದರ್ಭದಲ್ಲಿ ಝಿಕಾ ವೈರಾಣುವಿನಿಂದ ಸೋಂಕಿತರಾದಲ್ಲಿ ಮುಂದೆ ಜನಿಸುವ ಮಗುವು ಮೈಕ್ರೋಸೆಫಾಲಿ ಅಥವಾ ಇತರೆ ಮೆದುಳಿನ ವಿರೂಪತೆಯನ್ನು ಹೊಂದುವ ಸಾಧ್ಯತೆಯಿರುತ್ತದೆ. ಮೆದುಳಿನ ಬೆಳವಣಿಗೆಯಲ್ಲಿನ ನ್ಯೂನ್ಯತೆಗಳಿಂದ ಮಗುವಿನ ತಲೆ ಸಹಜ ಗಾತ್ರಕ್ಕಿಂತ ಚಿಕ್ಕದಾಗಿರುವುದನ್ನು ಮೈಕ್ರೋಸೆಫಾಲಿ ಎಂದು ಕರೆಯುತ್ತಾರೆ. ಯಾವುದೇ ಔಷಧಗಳಿಲ್ಲದ ಮೈಕ್ರೋಸೆಫಾಲಿಯನ್ನು ಹೊಂದಿರುವ ಮಗು, ಭೌದ್ದಿಕ  ನ್ಯೂನ್ಯತೆ, ಕುಬ್ಜತೆ, ಅಸಹಜ ಮುಖಲಕ್ಷಣ, ಚಲನೆಯಲ್ಲಿ ತೊಂದರೆ, ಮಾತನಾಡುವಲ್ಲಿ ದುರ್ಬಲತೆ  ಹಾಗೂ ರೋಗಗ್ರಸ್ತವಾಗುವಿಕೆಗಳಂತಹ ತೀವ್ರವಾದ ಸಮಸ್ಯೆಗಳಿಂದ ಬಳಲುತ್ತದೆ. ಅಲ್ಲದೇ, ಈ ರೋಗಕ್ಕೆ ತುತ್ತಾದ ಮಗುವಿನ ಜೀವಿತಾವಧಿ ಸಹ ಕುಂಠಿತಗೊಳ್ಳುತ್ತದೆ. ವಯಸ್ಕರಲ್ಲಿ ಝಿಕಾ ಸೋಂಕು ನರವ್ಯೂಹದಲ್ಲಿನ ನರಕೋಶಗಳು ಹಾನಿಗೊಳಗಾಗುವಂತಹ ಗುಲೈನ್-ಬಾರ್ ಸಿಂಡ್ರೋಮ್ ಎನ್ನುವ ಅಪರೂಪದ ಅಸ್ವಸ್ಥತೆಯನ್ನು ತಂದೊಡ್ಡುತ್ತದೆ. ಇದರಿಂದ ಕೈ-ಕಾಲುಗಳ ಮರಗಟ್ಟುವಿಕೆ ಮತ್ತು ನಿಶ್ಯಕ್ತಿ, ಆಹಾರ ನುಂಗಲು ತೊಂದರೆ, ಬೆನ್ನು ಮತ್ತು ಕುತ್ತಿಗೆಯಲ್ಲಿ ನೋವು, ಮೇಲ್ಭಾಗದ ಶ್ವಾಸೇಂದ್ರಿಯ ಸೋಂಕು, ರಕ್ತದೊತ್ತಡ ಮತ್ತು ಹೃದಯ ಬಡಿತದಲ್ಲಿ ಏರುಪೇರು, ಹಾಗೂ ಅತಿಸಾರಗಳಂತಹ  ಸಮಸ್ಯೆಗಳು ಎದುರಾಗುತ್ತವೆ. ತೀವ್ರವಾದ ಸಂದರ್ಭಗಳಲ್ಲಿ ಉಸಿರಾಟ ವಿಫಲತೆಗೂ ಕಾರಣವಾಗಿ , ಆ ಮೂಲಕ ಪ್ರಾಣಹಾನಿಗೂ  ದಾರಿಯಾಗುತ್ತದೆ, ಈ ಎಲ್ಲಾ ಕಾರಣಗಳಿಂದಾಗಿಯೇ ನಾವು ಝಿಕಾ ಕುರಿತು ಎಚ್ಚರಿಕೆಯೊಂದಿಗಿನ ಅರಿವನ್ನು ಹೊಂದುವ ಅವಶ್ಯಕತೆಯಿದೆ. 

ಹಾಗಾದರೆ, ಭಾರತಕ್ಕೆ ಬರುವ ಮೊದಲು ಝಿಕಾ ಯಾವ ಯಾವ ದೇಶಗಳಲ್ಲಿ ತನ್ನ ಉಪಸ್ಥಿತಿಯನ್ನು ತೋರಿದೆ? ೧೯೫೨ ರಿಂದ  ಸುಮಾರು ೫ ದಶಕಗಳಿಗೂ ಹೆಚ್ಚಿನ ಕಾಲ ಈಡೀಸ್ ಸೊಳ್ಳೆಗಳಲ್ಲಿ ಜೀವಿಸಿದ ಈ ವೈರಾಣುವು, ೨೦೦೭ ರಲ್ಲಿ ಪ್ರಥಮ ಬಾರಿಗೆ ಫೆಡೆರೇಟೆಡ್ ಸ್ಟೇಟ್ಸ್ ಆಫ್ ಮಿಕ್ರೋನಿಷಿಯಾದ ಯಾಪ್ ದ್ವೀಪದಲ್ಲಿ ಸಾಂಕ್ರಾಮಿಕ ರೋಗಕ್ಕೆ ಕಾರಣವಾಗಿ, ಒಟ್ಟು ೪೯ ಜನರಿಗೆ ಅಸ್ವಸ್ಥತೆಯನ್ನು ಉಂಟುಮಾಡಿತು. ಅಲ್ಲಿಂದ ೨೦೧೩ರ ಅಕ್ಟೋಬರ್ ನಲ್ಲಿ ಫ್ರೆಂಚ್ ಪಾಲಿನೀಷಿಯಾದಲ್ಲಿ ಗುಲೈನ್-ಬಾರ್ ಸಿಂಡ್ರೋಮ್  ನೊಂದಿಗೆ ಕಾಣಿಸಿಕೊಂಡ ಝಿಕಾ, ಜನವರಿ ೨೦೧೪ ರಲ್ಲಿ ಫ್ರಾನ್ಸ್ ನ ನ್ಯೂ ಕಾಲೆಡೋನಿಯಾ, ಚಿಲಿ ದೇಶದ ಈಸ್ಟರ್ ದ್ವೀಪ ಮತ್ತು ನ್ಯೂಜಿಲ್ಯಾಂಡ್ ನ ಕೂಕ್  ದ್ವೀಪಗಳಿಗೂ ಲಗ್ಗೆಯಿಟ್ಟು ಸುಮಾರು ೧೩೮೫ ಜನರಿಗೆ ಸೋಂಕನ್ನು ಹರಡಿತು. ಮುಂದೆ, ೨೦೧೫ರಲ್ಲಿ ಬ್ರೆಜಿಲ್ ನಿಂದ ಆರಂಭಗೊಂಡ ಝಿಕಾ ಆರ್ಭಟ, ಮೆಕ್ಸಿಕೋ, ಕೆರೆಬಿಯನ್ ಪ್ರದೇಶಗಳೊಂದಿಗೆ ಅಮೆರಿಕಾವನ್ನು ಸಹ ಆವರಿಸಿತು. ೨೦೧೫ರ ಮೇ ಮತ್ತು ನವಂಬರ್ ತಿಂಗಳ ನಡುವೆ ಕೇವಲ ೭ ತಿಂಗಳ ಅವಧಿಯಲ್ಲಿ ೧೩ ಲಕ್ಷ ಜನರು ಝಿಕಾದಿಂದ ಸೋಂಕಿತರಾಗಿದ್ದು, ಸುಮಾರು ೪೦೦೦ ಝಿಕಾ ಸಂಬಂಧಿತ ಮೈಕ್ರೋಸೆಫಾಲಿ ಪ್ರಕರಣಗಳು ಬೆಳಕಿಗೆ ಬಂದಿವೆ. ೨೦೧೬ರ ನಂತರದಲ್ಲಿ ಝಿಕಾವು  ಬಾಂಗ್ಲಾದೇಶ, ಸಿಂಗಾಪುರ್, ತಾಂಜೇನಿಯಾ ಹಾಗೂ ಆಂಗೋಲದಲ್ಲೂ ಸಹ  ಹರಡುತ್ತಿರುವ ಖಚಿತ ಪ್ರಕರಣಗಳಿವೆ. 

ಈತನ್ಮಧ್ಯೆ, ೨೦೧೭ರ ಮೇ ೧೫ ರಂದು ಭಾರತ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ದೇಶದಲ್ಲಿ ಮೂರು ಝಿಕಾ ಪ್ರಕರಣಗಳು ಖಚಿತವಾಗಿವೆಯೆಂದು ವರದಿ ನೀಡಿದೆ. ಇದರಲ್ಲಿ ಎರಡು ಪ್ರಕರಣಗಳಲ್ಲಿ ಗರ್ಭಿಣಿಯರು ಸೋಂಕಿತರಾಗಿರುವುದು ಆತಂಕಕಾರಿ ವಿಷಯವಾಗಿದೆ. ಈ ನಿಟ್ಟಿನಲ್ಲಿ ತುರ್ತಾಗಿ ಕ್ರಮಕೈಗೊಳ್ಳುವ ಅವಶ್ಯಕತೆಯಿದ್ದು, ಈಗಾಗಲೇ ಭಾರತದ ಹಲವಾರು ವೈದ್ಯಕೀಯ ಸಂಶೋಧನಾ ಸಂಸ್ಥೆಗಳು, ರಕ್ತದ ಮಾದರಿ ಮತ್ತು ಸೊಳ್ಳೆಗಳಲ್ಲಿ ಝಿಕಾ ವೈರಾಣುವನ್ನು ಪತ್ತೆ ಮಾಡುವ ಕಾರ್ಯದಲ್ಲಿ ತೊಡಗಿವೆ. ಅಂತಾರಾಷ್ಟ್ರೀಯ ಮಟ್ಟದ ಕಂಪನಿಗಳು ಝಿಕಾಗೆ ಲಸಿಕೆಯನ್ನು ಅಭಿವೃದ್ಧಿಪಡಿಸುವಲ್ಲಿ ನಿರತವಾಗಿದ್ದು, ಜೂನ್ ೨೦೧೬ರಂದು ಎಫ್.ಡಿ.ಎ. ಪ್ರಥಮ ಝಿಕಾ ಲಸಿಕೆಯನ್ನು ಮಾನವನಲ್ಲಿ ಪರೀಕ್ಷಿಸಲು ಅನುಮೋದನೆ ನೀಡಿದೆ. ಇವುಗಳ ಯಶಸ್ಸಿನ ಕುರಿತು ಇನ್ನೂ ಹೆಚ್ಚಿನ ಸಂಶೋಧನೆಗಳ ನಂತರವಷ್ಟೇ ನಮಗೆ ವಿವರ ಲಭ್ಯವಾಗಲಿದೆ. 

ಸೊಳ್ಳೆಗಳಿಂದ ಹರಡುವ ಎಲ್ಲ ಇತರ ಸೋಂಕುಗಳಂತೆ ಝಿಕಾವನ್ನು ಸಹ ಸೊಳ್ಳೆಗಳ ಬೆಳವಣಿಗೆಯನ್ನು ನಿಯಂತ್ರಿಸುವ ಮೂಲಕ ತಡೆಗಟ್ಟಬಹುದಾಗಿದೆ. ವಾಸಸ್ಥಳದ ಸುತ್ತಮುತ್ತ ನೀರು ನಿಲ್ಲದಂತೆ ಎಚ್ಚರ ವಹಿಸುವುದು ಇದಕ್ಕಿರುವ ಮಾರ್ಗವಾಗಿದೆ. ಅಲ್ಲದೇ, ಸೊಳ್ಳೆನಾಶಕ, ಸೊಳ್ಳೆ ಪರದೆಗಳನ್ನು ಬಳಸಿ, ಉದ್ದವಾದ ಬಟ್ಟೆಗಳನ್ನು ಧರಿಸುವುದರಿಂದಲೂ ಸಹ ಸೊಳ್ಳೆಗಳಿಂದ ಸೋಂಕು ಪಸರಿಸದಂತೆ ಮಾಡಬಹುದಾಗಿದೆ. ಆದರೆ, ಬದಲಾಗುತ್ತಿರುವ ಕಾಲದಲ್ಲಿ ವಾತಾವರಣದಲ್ಲಿ ಹೆಚ್ಚುತ್ತಿರುವ ಮಾಲಿನ್ಯ ಹಾಗೂ ತಾಪಮಾನ  ಏರಿಕೆಗಳು ಸಹ ಖಾಯಿಲೆಗಳನ್ನು ತರುವ ಜೀವಾಣುಗಳ ಶೀಘ್ರ ಹರಡುವಿಕೆಗೆ ಕಾರಣವಾಗಿದೆ. ಝಿಕಾ ೨೧ನೇ ಶತಮಾನದ ಅತಿ ದೊಡ್ಡ ಮಾರಕವಾಗುವ ಎಲ್ಲಾ ಸಾಧ್ಯತೆಗಳಿರುವುದರಿಂದ, ಇದರತ್ತ ನಾವು ಎಚ್ಚರವಹಿಸುವುದು ಅತ್ಯಗತ್ಯವಾಗಿದೆ. 


ಡಾ। ರೋಹಿತ್ ಕುಮಾರ್ ಎಚ್. ಜಿ.

ಬ್ಲಾಗ್ ಸೈಟ್: www.rohitkumarhg.blogspot.com
ಫೇಸ್ ಬುಕ್ ಪುಟ: www.facebook.com/rohitkumarhg1


ಈ ಅಂಕಣ ಕನ್ನಡ ಪ್ರಭ ಪತ್ರಿಕೆಯಲ್ಲಿ ದಿನಾಂಕ ೨೭-೦೬-೨೦೧೭ ರಂದು ಪುಟ ಸಂಖ್ಯೆ ೮ (ಇತರೆ ಸಂಚಿಕೆಗಳು) ಮತ್ತು ೧೨ (ಬೆಂಗಳೂರು ಸಂಚಿಕೆ)ರಲ್ಲಿ ಪ್ರಕಟಗೊಂಡಿದೆ. ಇ-ಪೇಪರ್ ಗಾಗಿ ಕೆಳಗಿನ ಲಿಂಕನ್ನು ಬಳಸಿರಿ. 




Friday, June 2, 2017

ಭಾರತೀಯರೊಂದಿಗೆ ಸಮರ ಸಾರಿರುವ ಅದೃಶ್ಯ ಅಣುಜೀವಿ!



ಭಾರತವು ಹಲವಾರು ಕ್ಷೇತ್ರಗಳಲ್ಲಿ ಸಾಧನೆಯ ಶಿಖರವನ್ನು ಏರುವಲ್ಲಿ ದಾಪುಗಾಲಿಡುತ್ತಿದೆ. ನಮ್ಮಲ್ಲಿನ ಅನ್ವೇಷಣೆಗಳು ಜಗತ್ತನ್ನೇ ಕೈ ಬೆರಳಿನಡಿ ತಂದು ನಿಲ್ಲಿಸುವಷ್ಟು ಮುಂದುವರೆದಿದೆ. ಎಂತಹ ದೊಡ್ಡ ಜೀವಿಯೇ ನಮ್ಮೆದುರು ಸಮರಕ್ಕೆ ನಿಂತರೂ ಹೊಡೆದುರುಳಿಸಬಲ್ಲ ತಂತ್ರಜ್ಞಾನಗಳು ನಮ್ಮೊಂದಿಗಿವೆ. ಇಂತಹ ಸಮಯದಲ್ಲಿ ಅಣುಜೀವಿಯೊಂದು ದೊಡ್ಡ ಯುದ್ಧ ಸಾರುವ ಸಂದೇಶ ನೀಡಿದೆ. ಕಾಣದ ಜೀವಕಣವೊಂದು ಊದಿರುವಂತಹ ರಣಕಹಳೆಯು ಆ ಜೀವಿಯ ಸಾಮರ್ಥ್ಯವನ್ನು ಅನುಮಾನಿಸಿ, ನೆಮ್ಮದಿಯಿಂದ ನಿದ್ರಿಸಿದ್ದ ಭಾರತೀಯರನ್ನು ಹೊಡೆದೆಬ್ಬಿಸಿರುವುದು ಮಾತ್ರ ನಿಜ. ಅಷ್ಟಾಗಿ ಇಲ್ಲಿ ಹೇಳ ಹೊರಟಿರುವ ಆ ಜೀವಿ ಯಾವುದು ಅಂತ ನೀವು ಯೋಚಿಸುತ್ತಿದ್ದರೆ, ಅದುವೇ ಮೈಕೋಬ್ಯಾಕ್ಟೀರಿಯಂ ಟ್ಯುಬೆರ್ಕ್ಯುಲೋಸಿಸ್. ಹೌದು. ನಾವು ಹಿಂದೆ ಒಂದು ಮಟ್ಟಿಗೆ ಸೋಲಿಸಲು ಯಶಸ್ವಿಯಾಗುತ್ತಿದ್ದೇವೆಂದು ಭ್ರಮಿಸಿದ್ದ ಅದೇ ಹಳೆಯ ಜೀವಿ, ಈಗ ಸರ್ವ ಸನ್ನದ್ಧವಾಗಿ ನಮ್ಮ ಮೇಲೆ ಸಮರ ಸಾರಿದೆ.


ನಮ್ಮಲ್ಲಿ ಹೆಚ್ಚಿನವರಿಗೆ ತಿಳಿದಿರುವಂತೆ, ಮೈಕೋಬ್ಯಾಕ್ಟೀರಿಯಂ ಟ್ಯುಬೆರ್ಕ್ಯುಲೋಸಿಸ್ ಎಂಬ ಬ್ಯಾಕ್ಟೀರಿಯಾವು ಕ್ಷಯ ರೋಗವನ್ನು ಉಂಟುಮಾಡುತ್ತದೆ. ಶೇಕಡಾ ೮೦-೯೦ ರಷ್ಟು ಕ್ಷಯ ರೋಗವು ಶ್ವಾಸಕೋಶ ಸಂಬಂಧಿತವಾಗಿದ್ದರೂ, ಈ ರೋಗಾಣುವು ಕೇಂದ್ರ ನರಮಂಡಲ ವ್ಯವಸ್ಥೆ, ದುಗ್ದರಸ ವ್ಯವಸ್ಥೆ, ಜನನಾಂಗ ವ್ಯವಸ್ಥೆ, ಮೂಳೆ, ಕೀಲು ಹಾಗೂ ಜಠರಗರುಳಿನ ವ್ಯವಸ್ಥೆಗಳಿಗೂ ಸಹ ಸೋಂಕು ತರಬಲ್ಲದು. ಹೆಚ್ಚಿನ ಬಾರಿ ಈ ಬ್ಯಾಕ್ಟೀರಿಯಾದ ಸೋಂಕು ಯಾವುದೇ ರೀತಿಯ ರೋಗಲಕ್ಷಣಗಳನ್ನು ಹೊಂದಿರುವುದಿಲ್ಲ. ಇಂತಹ ಸೋಂಕನ್ನು ಸುಪ್ತ ಕ್ಷಯ ಎಂದು ಕರೆಯುತ್ತಾರೆ. ಶೇಕಡಾ ೧೦ ರಷ್ಟು ಸುಪ್ತ ಕ್ಷಯಗಳು ಮಾತ್ರ ಪೂರ್ಣ ರೋಗವಾಗಿ  ಬೆಳೆದು, ಜೀವಕ್ಕೆ ಮಾರಕವಾಗಿ ಪರಿಣಮಿಸುತ್ತವೆ. ಮೂರು ವಾರಗಳಿಗಿಂತಲೂ ಹೆಚ್ಚಿನ ಕಾಲದಿಂದ ಹಳದಿ/ಹಸಿರು ಅಥವಾ ರಕ್ತವಿರುವ ಕಫಾದೊಂದಿಗಿನ ಕೆಮ್ಮು, ದೇಹದ ತೂಕ ನಷ್ಟ, ಜ್ವರ, ಎದೆನೋವು,  ಆಯಾಸ, ಹಸಿವು ನಷ್ಟ ಹಾಗೂ ರಾತ್ರಿ ಬೆವರುವಿಕೆಗಳು ಶ್ವಾಸಕೋಶ ಸಂಬಂಧಿತ ಕ್ಷಯ ರೋಗದ ಗುಣಲಕ್ಷಣಗಳು. ರೋಗ ನಿರೋಧಕ ಸಾಮರ್ಥ್ಯವು ಕಡಿಮೆಯಿರುವ ಎಲ್ಲಾ ವಯೋಮಾನದವರೂ (ಹೆಚ್ಚಿನ ಪಾಲು ಮಕ್ಕಳು ಮತ್ತು ವೃದ್ದರು) ಈ ರೋಗಕ್ಕೆ ಸುಲಭವಾಗಿ ತುತ್ತಾಗಬಲ್ಲರು ಹಾಗೂ ಇಂತಹ ಸೋಂಕಿತರು ಉಸಿರಾಡುವ ಗಾಳಿಯ ಮೂಲಕ ರೋಗಾಣುಗಳು ಹರಡಬಲ್ಲವು.

ಕ್ಷಯ ರೋಗಕ್ಕೆ ಹಲವಾರು ಔಷಧಗಳು ಈಗಾಗಲೇ ಲಭ್ಯವಿದ್ದು, ರೋಗದ ಪ್ರಮಾಣದ ಆಧಾರದಲ್ಲಿ ಇವುಗಳಲ್ಲಿ ಯಾವುದನ್ನು, ಎಷ್ಟು ಅವಧಿಯವರೆಗೆ ತೆಗೆದುಕೊಳ್ಳಬಹುದೆಂದು ವೈದ್ಯರು ನಿರ್ಧರಿಸುತ್ತಾರೆ. ಐಸೋನಿಯಾಜಿಡ್, ರಿಫಾಮ್ಪಿನ್, ಪೈರಾಜಿನಮೈಡ್, ಎಥಾಮ್ಬುಟಾಲ್, ಮುಂತಾದುವುಗಳು ಲಭ್ಯವಿರುವ ಔಷಧಗಳಲ್ಲಿ ಹೆಚ್ಚು ಸೂಚಿಸುವಂತವುಗಳು (ಪ್ರಥಮ ಆಧ್ಯತಾ ಔಷಧಗಳು). ಈ  ಔಷಧಗಳನ್ನು ಸಂಯೋಜನೆಯಲ್ಲಿ ಬಳಸಿ ಕ್ಷಯ ರೋಗವನ್ನು ತಕ್ಕಮಟ್ಟಿಗೆ ಹಿಮ್ಮೆಟ್ಟಿಸುವಲ್ಲಿ ನಾವು ಯಶಸ್ವಿಯಾಗಿದ್ದೆವು.


ಹಾಗಾದರೆ, ಈಗ ಯಾಕೆ ನಾವು ಚಿಂತಿಸುವ ಸಂದರ್ಭ ಬಂದೊದಗಿದೆ? ಹಿಮ್ಮೆಟ್ಟಿದ್ದ ಜೀವಾಣು ಹೇಗೆ ನಮ್ಮ ಮೇಲೆ ಆಕ್ರಮಣ ಮಾಡುವ ಸಾಮರ್ಥ್ಯ ಪಡೆದಿದೆ? ಇವುಗಳನ್ನರಿಯಲು ನಾವು ಕೆಲವು ಅಂಕಿ-ಅಂಶಗಳ ಮೇಲೆ ಗಮನಹರಿಸಬೇಕಾಗುತ್ತದೆ.


ಭಾರತವು ವಿಶ್ವದಲ್ಲೇ ಅತೀ ಹೆಚ್ಚು ಕ್ಷಯ ರೋಗ ಬಾಧಿತ ೩೦ ದೇಶಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ವಿಶ್ವ ಆರೋಗ್ಯ ಸಂಸ್ಥೆಯ ಅಂಕಿ-ಅಂಶಗಳ ಪ್ರಕಾರ ೨೦೧೫ ರಲ್ಲಿ ಕ್ಷಯ ರೋಗಕ್ಕೆ ಒಳಗಾದ ವಿಶ್ವದ ೧೦೪ ಲಕ್ಷ ಜನರಲ್ಲಿ ೨೮.೪೦ ಲಕ್ಷ ಜನರು ಭಾರತೀಯರಾಗಿದ್ದಾರೆ. ಅಂದರೆ, ವಿಶ್ವದ ಸುಮಾರು ಶೇಕಡಾ ೨೭ ರಷ್ಟು ಕ್ಷಯ ರೋಗಿಗಳು ಭಾರತೀಯರಾಗಿದ್ದಾರೆ. ೨೦೧೩ ಮತ್ತು ೨೦೧೪ ರಲ್ಲಿ ಭಾರತದಲ್ಲಿ ಈ ರೋಗಕ್ಕೆ ಒಳಗಾದವರ ಸಂಖ್ಯೆ ಕ್ರಮವಾಗಿ ಸುಮಾರು ೨೧ ಮತ್ತು ೨೨ ಲಕ್ಷವಿದೆ. ಅಂದರೆ, ಪ್ರತಿ ವರ್ಷ ಕ್ಷಯ ರೋಗಕ್ಕೆ ಒಳಗಾಗುತ್ತಿರುವವರ ಸಂಖ್ಯೆ ಏರಿಕೆಯಾಗುತ್ತಲೇ ಇದೆ. ಇನ್ನು ಈ ರೋಗದಿಂದ ಭಾರತದಲ್ಲಾಗುತ್ತಿರುವ ಪ್ರಾಣ ಹಾನಿಯ ಬಗ್ಗೆ ಹೇಳುವುದಾದರೇ, ೨೦೧೩ ರಲ್ಲಿ ಸುಮಾರು ೨.೪೦ ಲಕ್ಷ ಜನ ಮರಣ ಹೊಂದಿದ್ದರೆ, ೨೦೧೪ ರಲ್ಲಿ ಈ ಸಂಖ್ಯೆ ಸುಮಾರು ೨.೨೦ ಲಕ್ಷದಷ್ಟಿದೆ. ಈ ಸಾವಿನ ಸಂಖ್ಯೆ ೨೦೧೫ ರಲ್ಲಿ ಗಣನೀಯವಾಗಿ ಎರಡು ಪಟ್ಟಿಗೂ ಹೆಚ್ಚಿನ ಏರಿಕೆ ಕಂಡು ಸುಮಾರು ೪.೮೦ ಲಕ್ಷದಷ್ಟು ತಲುಪಿದೆ. ಈ ಎಲ್ಲಾ ಅಂಕಿ-ಅಂಶಗಳು ಭಾರತದಲ್ಲಿ ಕ್ಷಯ ರೋಗದ ಉಲ್ಭಣತೆಯನ್ನು ನಿರೂಪಿಸುತ್ತವೆ.


ಈ ಹೆಚ್ಚುತ್ತಿರುವ ಕ್ಷಯ ರೋಗಕ್ಕೆ ಪ್ರಮುಖ ಕಾರಣ, ರೋಗಕಾರಕ ಸೂಕ್ಷ್ಮಜೀವಿ ಮೈಕೋಬ್ಯಾಕ್ಟೀರಿಯಂ ಟ್ಯುಬೆರ್ಕ್ಯುಲೋಸಿಸ್ ನಲ್ಲಿ ಬೆಳೆಯುತ್ತಿರುವ ರೋಗ ನಿರೋಧಕ ಶಕ್ತಿ. ಸೂಕ್ತ ಔಷಧಗಳನ್ನು (ಉದಾ: ಸೂಕ್ತ ಸಾಮರ್ಥ್ಯವುಳ್ಳ ಔಷಧ) ಸೇವಿಸದಿರುವುದು ಹಾಗೂ ಸೂಚಿತ ಔಷಧಗಳನ್ನು ಪೂರ್ಣ ಅವಧಿಗೆ ನಿಯಮಿತವಾಗಿ ಸೇವಿಸದಿರುವುದು ರೋಗಾಣುಗಳಲ್ಲಿ ಈ ಔಷಧ ನಿರೋಧಕ ಶಕ್ತಿ ಬೆಳವಣಿಗೆಯಾಗಲು ಕಾರಣಗಳು. ಈ ರೀತಿಯಲ್ಲಿ ಬೆಳವಣಿಗೆಯಾದ ಔಷಧ ನಿರೋಧಕ ಶಕ್ತಿಯನ್ನು ಅರ್ಜಿಸಿಕೊಂಡ ಔಷಧ ನಿರೋಧಕ ಶಕ್ತಿ ಎಂದು ಕರೆಯುತ್ತಾರೆ. ಈ  ಔಷಧ ನಿರೋಧಕ ಕ್ಷಯ ರೋಗದಲ್ಲಿ ಮುಖ್ಯವಾಗಿ ಎರಡು ವಿಧಗಳು: ಬಹು ಔಷಧ ನಿರೋಧಕ ಕ್ಷಯ ಮತ್ತು ವ್ಯಾಪಕ ಔಷಧ ನಿರೋಧಕ ಕ್ಷಯ.

ಬಹು ಔಷಧ ನಿರೋಧಕ ಕ್ಷಯವು ಒಂದಕ್ಕಿಂತ ಹೆಚ್ಚು ಪ್ರಥಮ ಆಧ್ಯತಾ ಔಷಧಗಳ (ಉದಾ: ಐಸೋನಿಯಾಜಿಡ್, ರಿಫಾಮ್ಪಿನ್, ಪೈರಾಜಿನಮೈಡ್, ಎಥಾಮ್ಬುಟಾಲ್ ಮತ್ತು ಸ್ಟ್ರೆಪ್ಟೋಮೈಸಿನ್) ವಿರುದ್ಧ ಪ್ರತಿರೋಧವನ್ನು ತೋರಬಲ್ಲದಾಗಿರುತ್ತದೆ. ಇಂತಹ ಕ್ಷಯವನ್ನು ಎರಡನೇ ಆಧ್ಯತಾ ಔಷಧಗಳ (ಉದಾ: ಫ್ಲ್ಯೂರೋಕ್ವಿನೊಲೋನ್ಸ್, ಕಾನಾಮೈಸಿನ್, ಇತರೆ) ಮೂಲಕ ಚಿಕಿತ್ಸೆ ನೀಡಬಹುದಾದರೂ, ಈ ವಿಧದ ಕ್ಷಯ ಹೊಂದಿದ ಶೇಕಡಾ ೪೦ ರಷ್ಟು ರೋಗಿಗಳು ತಮ್ಮ ಪ್ರಾಣವನ್ನು ಕಳೆದುಕೊಳ್ಳುತ್ತಿದ್ದಾರೆ! ಅದೇ ರೀತಿ ವ್ಯಾಪಕ ಔಷಧ ನಿರೋಧಕ ಕ್ಷಯವು ಬಹು ಔಷಧ ನಿರೋಧಕ ಕ್ಷಯವು ಪ್ರತಿರೋಧವನ್ನು ಹೊಂದಿರುವ ಔಷಧಗಳ ಜೊತೆಯಲ್ಲಿ ಫ್ಲ್ಯೂರೋಕ್ವಿನೊಲೋನ್ಸ್ ಮತ್ತು ಕನಿಷ್ಠ ಒಂದು ಇತರೆ ಎರಡನೇ ಆಧ್ಯತಾ ಔಷಧಕ್ಕೆ ನಿರೋಧಕತೆಯನ್ನು ಹೊಂದಿರುತ್ತದೆ. ಇಂತಹ ಕ್ಷಯವನ್ನು ಗುಣಪಡಿಸಲು ೨ ವರ್ಷಗಳವರೆಗೂ ಚಿಕಿತ್ಸೆಯನ್ನು ನೀಡಬೇಕಾಗಬಹುದು ಹಾಗೂ ಇದರ ಚಿಕಿತ್ಸೆಗೆ ಬಳಸುವ ವಿಷಕಾರಿ ಔಷಧಗಳು ತಲೆಗೂದಲು ಉದುರುವಿಕೆ ಮತ್ತು ಸೈಕೋಸಿಸ್ ಸೇರಿದಂತೆ ಹಲವು ಅಡ್ಡ ಪರಿಣಾಮಗಳನ್ನು ಬೀರುತ್ತವೆ. ಈ ವಿಧದ ಕ್ಷಯವನ್ನು ಹೊಂದಿರುವ ಶೇಕಡಾ ೬೦ ರಷ್ಟು ರೋಗಿಗಳು ಪ್ರಾಣವನ್ನು ಕಳೆದುಕೊಳ್ಳುತ್ತಿದ್ದಾರೆ!


ಈ ವಿಷಯದ ಕುರಿತಾಗಿ ಮೇ ೦೯, ೨೦೧೭ ರಂದು 'ದಿ ಲ್ಯಾನ್ಸೆಟ್ ಇನ್ಫೆಕ್ಷಿಯಸ್ ಡಿಸೀಸಸ್' ಎಂಬ ಅಂತಾರಾಷ್ಟ್ರೀಯ ವಿಜ್ಞಾನ ಸಂಶೋಧನಾ ಪತ್ರಿಕೆಯಲ್ಲಿ ಯು.ಎಸ್.ಎ., ದಕ್ಷಿಣ ಆಫ್ರಿಕಾ, ರಷ್ಯಾ ಸೇರಿದಂತೆ ವಿವಿಧ ದೇಶಗಳ ಸಂಶೋಧಕರು ಆತಂಕಕಾರಿ ವಿಷಯವೊಂದನ್ನು ತಮ್ಮ ಅಧ್ಯಯನದ ಮೂಲಕ ಹೊರಹಾಕಿದ್ದಾರೆ. ಈ ವರದಿಯಲ್ಲಿ ಕ್ಷಯ ರೋಗದಿಂದ ಹೆಚ್ಚು ಬಾಧಿತ ರಾಷ್ಟ್ರಗಳಾದ ಭಾರತ, ಫಿಲಿಪೈನ್ಸ್, ರಷ್ಯಾ ಮತ್ತು ದಕ್ಷಿಣ ಆಫ್ರಿಕಾಗಳಲ್ಲಿ ಭವಿಷ್ಯದಲ್ಲಿ ಔಷಧ ನಿರೋಧಕ ಕ್ಷಯದಿಂದಾಗುವ ಹೊರೆಯನ್ನು ವಿಜ್ಞಾನಿಗಳು ವಿವರಿಸಿದ್ದಾರೆ. ಇದರ ಪ್ರಕಾರ ೨೦೧೫ರಲ್ಲಿ ಭಾರತದಲ್ಲಿ ಒಳಗಾಗಿರುವ ಒಟ್ಟು ಕ್ಷಯ ರೋಗದಲ್ಲಿ ಶೇಕಡಾ ೨.೫೦ ರಷ್ಟಿರುವ ಔಷಧ ನಿರೋಧಕ ಕ್ಷಯದ ಪ್ರಮಾಣವು ೨೦೪೦ ರ್ ವೇಳೆಗೆ ಶೇಕಡಾ ೧೨.೪೦ ರಷ್ಟಾಗಲಿದೆ! ೨೦೪೦ರಲ್ಲಿ ವಾರ್ಷಿಕ ಒಳಗಾಗಲಿರುವ ಒಟ್ಟು ಔಷಧ ನಿರೋಧಕ ಕ್ಷಯದಲ್ಲಿ ಶೇಕಡಾ ೮.೯೦ ರಷ್ಟು ವ್ಯಾಪಕ ಔಷಧ ನಿರೋಧಕ ಕ್ಷಯವಾಗಿರಲಿದೆ. ಅಂದರೆ, ಭಾರತವು ದೊಡ್ಡ ಮಟ್ಟದ ಅಪಾಯದೆಡೆಗೆ ಸಾಗುತ್ತಿದ್ದು, ಮುಂದಿನ ೨ ದಶಕಗಳಲ್ಲಿ ಉಳಿದೆಲ್ಲಾ ರೋಗಗಳಿಗಿಂತ ಕ್ಷಯ ರೋಗವು ನಮ್ಮನ್ನು ಇನ್ನಿಲ್ಲದಂತೆ ಕಾಡದಿರುವುದಂತು ಸತ್ಯ.

ಹಾಗಾದರೆ, ಈ ಕಾಣದಿರುವ ಜೀವಿಯೆದುರು ಹೋರಾಡಲು ಇರುವ ಮಾರ್ಗಗಳು ಯಾವುವು? ಸದ್ಯಕ್ಕೆ ನಮಗೆ ತಿಳಿದಿರುವ ಮಾರ್ಗಗಳು ಹೀಗಿವೆ. ಪ್ರತಿ ರೋಗಿಯು ಪೂರ್ಣ ಪ್ರಮಾಣದ ಚಿಕಿತ್ಸೆಯನ್ನು ಪಡೆಯುವಂತೆ ಮಾಡಿ, ಔಷಧ ನಿರೋಧಕ ಕ್ಷಯವು ಅಭಿವೃದ್ಧಿಯಾಗದಂತೆ ತಡೆಯುವುದು. ವ್ಯಕ್ತಿಯಿಂದ ವ್ಯಕ್ತಿಗೆ ರೋಗಾಣುಗಳು ಹರಡುವುದನ್ನು ತಡೆಗಟ್ಟಲು ಕ್ರಮಕೈಗೊಳ್ಳುವುದು. ರೋಗಾಣುವಿನ ಔಷಧ ನಿರೋಧಕ ಸಾಮರ್ಥ್ಯವನ್ನು ಅರಿತು ಚಿಕಿತ್ಸೆ ಒದಗಿಸುವುದು. ಚಿಕಿತ್ಸೆಯೊಂದಿಗೆ ರೋಗವನ್ನು ತಡೆಗಟ್ಟುವಿಕೆಗೂ ಹೆಚ್ಚಿನ ಆಧ್ಯತೆಯನ್ನು ನೀಡುವುದು. ರೋಗದ ಕುರಿತಾಗಿ  ಜನಸಾಮಾನ್ಯರಲ್ಲಿ,ಅದರಲ್ಲು ಪ್ರಮುಖವಾಗಿ ಗ್ರಾಮೀಣ ಭಾಗದ ಜನರಲ್ಲಿ ಅರಿವು ಮುಡಿಸುವುದು.


ಮೇಲೆ ಉಲ್ಲೇಖಿಸಿರುವ ಎಲ್ಲಾ ಕ್ರಮಗಳನ್ನು ಈ ಹಿಂದಿನಿಂದಲೂ ಕೈಗೊಳ್ಳುತ್ತಿದ್ದರೂ ಸಹ ಇವುಗಳಿಗೆ ಹೆಚ್ಚಿನ ಆಧ್ಯತೆ ನೀಡಿ, ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಅವಶ್ಯಕತೆಯಿದೆ. ಈಗಾಗಲೇ ಭಾರತವು ಪ್ರತಿ ವರ್ಷ ಕೋಟ್ಯಂತರ ರೂಪಾಯಿಗಳನ್ನು ಇದಕ್ಕಾಗಿ ವ್ಯಯಿಸುತ್ತಿದೆ. ಇನ್ನೂ ಹೆಚ್ಚಿನ ಪ್ರಯತ್ನವು ನಮ್ಮಿಂದ ಆಗಬೇಕಾಗಿದೆ. ಇಲ್ಲದೆ ಹೋದರೇ, ಕೋಟ್ಯಂತರ ಜನರ ಪ್ರಾಣ ಹಾನಿಗೆ ನಾವು ಸಾಕ್ಷಿಯಾಗಬೇಕಾಗುತ್ತದೆ. 'ಆರೋಗ್ಯವೇ ಭಾಗ್ಯ' ಎಂಬ ನಾಣ್ನುಡಿಯ ಅರ್ಥವು ಅರಿವಾಗುವ ಸಮಯ ಬಂದಿದೆ. ಅದೇ ಸಮಯವೂ ಬಹಳಷ್ಟು ವೇಗವಾಗಿ ಸಾಗುತ್ತಿದೆ. ಅದರ ವೇಗದಲ್ಲಿ ನಾವು ಸಾಗಬಲ್ಲೆವಾ ಎಂಬುದೇ ಪ್ರೆಶ್ನೆಯಾಗಿದೆ.


- ಡಾ| ರೋಹಿತ್ ಕುಮಾರ್ ಎಚ್. ಜಿ.  


ಇಮೇಲ್: rohitkumarhg@outlook.com
ಬ್ಲಾಗ್ ಪುಟ:www.rohitkumarhg.blogspot.com
ಫೇಸ್-ಬುಕ್ ಪುಟ: www.facebook.com/rohitkumarhg1

ಈ ಅಂಕಣ ಕನ್ನಡ ಪ್ರಭ ಪತ್ರಿಕೆಯಲ್ಲಿ ದಿನಾಂಕ ೦೨-೦೫-೨೦೧೭ ರಂದು ಪುಟ ಸಂಖ್ಯೆ ೮ (ಇತರೆ ಸಂಚಿಕೆಗಳು) ಮತ್ತು ೧೦ (ಬೆಂಗಳೂರು ಸಂಚಿಕೆ)ರಲ್ಲಿ ಪ್ರಕಟಗೊಂಡಿದೆ. ಇ-ಪೇಪರ್ ಗಾಗಿ ಕೆಳಗಿನ ಲಿಂಕನ್ನು ಬಳಸಿರಿ. 

http://epaper.kannadaprabha.in/epaper_1_1_71_2017-06-02_.ht…



ಕಾದು ನೋಡಿ

ಹೊಸ ಅಂಕಣ...

"ತೀರ"


ಆತ್ಮೀಯ ಒಡನಾಡಿಗಳೇ,


೨೦೧೦-೨೦೧೧ ನೇ ಸಾಲಿನ ಹಿರಿಯ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದ ವಿಶೇಷವಾಗಿ ಮಾಡಲ್ಪಟ್ಟ "ತೀರ" ಎಂಬ ವೀಡಿಯೋ ತುಣುಕನ್ನು ಈ ಮೂಲಕ ನಮ್ಮ ಬ್ಲಾಗ್ ನಲ್ಲಿ upload ಮಾಡುತ್ತಿದ್ದೇವೆ. ನಮ್ಮ ವಿಭಾಗದಲ್ಲಿನ ದಿನಗಳ ನೆನಪನ್ನ ಮತ್ತೆ ನಿಮ್ಮಲ್ಲಿಗೆ ತರುವಂತಹ ಒಂದು ಪುಟ್ಟ ಪ್ರಯತ್ನವು ಇದಾಗಿದ್ದು, ನಿಮ್ಮೆಲ್ಲರ ಮೆಚ್ಚುಗೆಗೆ ಪಾತ್ರವಾಗುತ್ತದೆ ಎಂದು ನಂಬಿದ್ದೇವೆ.


ನಿಮ್ಮ ಪ್ರತಿಯೊಂದು ಅನಿಸಿಕೆಗಳಿಗೂ ಆದರದ ಸ್ವಾಗತ.



ಈ ವೀಡಿಯೊ ತುಣುಕನ್ನು ತಯಾರಿಸಲು ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಸಹಕರಿಸಿದ ಪ್ರತಿಯೋರ್ವರಿಗೂ ಈ ಮೂಲಕ ಧನ್ಯವಾದವನ್ನು ಅರ್ಪಿಸುತ್ತೇವೆ.


- ರೋಹಿತ್

ತೀರ ಭಾಗ - 1

ತೀರ ಭಾಗ - 2

ತೀರ ಭಾಗ - 3

ನನ್ನ ಬೆರಳಿನೊಡನೆ ಆಡಿದ ಕನಯ್ಯ...

ನನ್ನ ಬೆರಳಿನೊಡನೆ ಆಡಿದ ಕನಯ್ಯ...