Tuesday, December 31, 2013

ಬದುಕು ಬದಲಾಗಲಿ

ಕಳೆದ ವರುಷ ಬರೆದ ಕವನ.. 
ಇನ್ನು ಅನ್ವಯವಾಗುವಂತಿದೆ ನಮ್ಮ ಜೀವನ.. 
ಮುಂದಿನ ವರುಷಕ್ಕಾದರೂ ಉಪಯೋಗವಾಗದಿರಲಿ ಈ ನನ್ನ ಕವನ... 

ಆಚರಿಸಲೇನಿದೆ ?? 
ಸಾಧಿಸಿಹುದೇನಿದೆ..?
ಕಣ್ಣೀರ ಹಿಡಿಯಲಿದ್ದ ಕರವು, ಕಣ್ಣೊಳಗೆ ಕೈ ಇಡುತಿರೆ.. 
ಹುಚ್ಚು ಬಯಕೆಗಳೇ ಹೆಚ್ಚಾಗಿ,
ಕೊಚ್ಚಿ ಹೋಗಿಹುದೇ ಮಾನವತೆ..?
ಜನರ ಸಂತೆಯಲ್ಲಿ ಮನುಜನೇ ಇಲ್ಲವೇ??
ಭರತೆ, ತಾಯಿ, ತಂಗಿಯರ ಸೆರಗ ಎಳೆವ ಸತ್-ಪ್ರಜೆಗಳಿರೆ,
ಹಬ್ಬದಲೂ ಮನೆಯೊಳಗೇ ಸೂತಕವೇ..
ಹಲವು ಮುಗ್ದ ಮೌನೆಯರ ನೋವ ತೊಟ್ಟಿಲಲಿ,
ಕಂಬನಿಯ ಕೂಸದು ಎದ್ದಿರಲು,
ಆಚರಿಸಲೇನಿದೆ??
ನಮ್ಮೊಳಗಿನ ರಕ್ಕಸನ ಕೊಲ್ಲುವ ಅಸ್ತ್ರವ ಹುಡುಕಲಾಗದೇ??
ಸಾಧಿಸುವುದಲ್ಲಿದೆ..
ಮಾನವನಾಗುವುದರಲ್ಲಿದೆ..
ಹೊಸ ಕರೆಯಿದು ಹಳೆಯ ಕಲೆಗಳ, ಕೊಳೆಗಳ
ಬುಡ ಪೂರ್ತಿ ತೊಳೆದು ಹಾಕಲಿ,
ಸುಖ ಶಾಂತಿ ತರಲಿ ಸರ್ವರಲಿ..

ಹೊಸ ವರುಷವು ನಾಡಿನ, ನಮ್ಮೊಳಗಿನ ಅಂಧಕಾರವನ್ನು ನೀಗಿಸಲಿ..
ಮನುಜಮತವ ಮೊಳಗಿಸಲಿ..

- ರೋಹಿತ್

www.facebook.com/rohitkumarhg1

Thursday, October 3, 2013

ಸಾವಿನ ಹುಟ್ಟು-ಗುಟ್ಟು


ಸಾವಿನಿಂದ ಬದುಕಿನ ಜನನವಾಗುತ್ತದೆ ಮತ್ತು ಬದುಕಿನೊಡನೆ ಸಾವಿನ ಜನನವಾಗುತ್ತದೆ..! ಆಶ್ಚರ್ಯವಾದರೂ ಇದು ಸತ್ಯ. ಸಾವಿಲ್ಲದ ಬದುಕನ್ನ ಊಹಿಸಲೂ ಕೂಡ ಅಸಾಧ್ಯ. ಸಾವಿಲ್ಲದಿದ್ದರೇ, ಸಾವು ಖಚಿತ ಮತ್ತು ಭಯಂಕರ!. ಸಾವಿನ ಸುತ್ತ ಮತ್ತು ಜೊತೆಯಲ್ಲೇ ಹೆಣೆದಿರುವ ಈ ಬದುಕು ಒಂದು ರೀತಿಯಲ್ಲಿ, ಸಾವು ತಾನು ಸತ್ತು ನಮಗೆ ನೀಡಿರುವ ಅವಕಾಶ. ಹಾಗಾಗೇ ಸಾವು ಪ್ರತಿ ಜೀವಕ್ಕೂ ಅತ್ಯವಶ್ಯಕ, ಜೀವವೀಯೊ ವಿದ್ಯಮಾನ.  ಏನಿದು!? ಸಾವಾದ ಮೇಲೆ ಬದುಕು ಹೇಗೆ ಸಾಧ್ಯ? ಅಷ್ಟಕ್ಕೂ ಬದುಕಲು ಬಿಡುವಂತಹ ಸಾವು ಅದು ಯಾವುದು ಅಂದಿರಾ? ಇಲ್ಲಿ ಹೇಳ ಹೊರಟಿರುವ ಸಾವು ನಾವು ದಿನನಿತ್ಯ ಕಾಣುವ ಬರಿಯ ಭೌತಿಕ ಸಾವು (physical death) ಅಲ್ಲ. ಬದಲಾಗಿ ಜೈವಿಕ ಸಾವು (Biological death). 

ಮಾನವನ ಇಡೀ ದೇಹದೊಳಗೆ 10 trillion ನಿಂದ 10,000 trillion (1 trillion ಅಂದರೆ 1 ಲಕ್ಷ ಕೋಟಿ!!) ಜೀವಕೋಶ (cell) ಗಳಿವೆ. ವೀರ್ಯ (Sperm) ಮತ್ತು ಬೀಜಾಣು (Egg cell) ವಿನ ಸಂಯೋಜನೆ (Fertilization) ಯಿಂದ ರಚನೆಯಾಗುವ zygote ಎಂಬ ಒಂದೇ ಒಂದು ಜೀವಕೋಶದ ವಿಭಜನೆ (Cell division) ಯಿಂದ ಇಷ್ಟು ಸಂಖ್ಯೆಯ ಜೀವಕೋಶಗಳು ಕಾಲ ಕ್ರಮೇಣ ರಚಿಸಲ್ಪಟ್ಟಿರುತ್ತದೆ.  ಈ ರೀತಿಯ ದೇಹ/ಜೀವ ರಚನೆಯ ಬೆಳವಣಿಗೆಯಲ್ಲಿ ಹಲವು ಹಂತಗಳಲ್ಲಿ ಪ್ರತಿ ಜೀವಕೋಶದ ಹುಟ್ಟಿನ ಜೊತೆಯಲ್ಲೇ "ಸಾವು" ಎಂಬ ಪ್ರಕ್ರಿಯೆ ಕೂಡಾ ಭಾಗಿಯಾಗಿರುತ್ತದೆ. 


ಜೀವಕೋಶ (cell) ದಲ್ಲಿನ ಸಾವನ್ನು ಎರಡು ವಿಭಾಗಗಳಾಗಿ ವಿಂಗಡಿಸಬಹುದು. ಸಾಮಾನ್ಯ ಭಾಷೆಯಲ್ಲಿ ಹೇಳುವುದಾದರೆ ಒಂದು "ಆತ್ಮಹತ್ಯೆ" ಮತ್ತೊಂದು "ಕೊಲೆ". ಪೂರ್ವಯೋಜಿತವಲ್ಲದೆ ಹೊರಗಿನಿಂದ ತನ್ನ ಮೇಲಾಗೊ ವೈಪರೀತ್ಯದಿಂದ ಜೀವಕೋಶವು ಕೊಲೆಯಾಗಲ್ಪಟ್ಟರೆ ಅಂತಹ ಕ್ರಿಯೆಯನ್ನು Necrosis (ಉಚ್ಚಾರ: ನೆಕ್ರೊಸಿಸ್; ಮೂಲ: ಗ್ರೀಕ್; ಅರ್ಥ: ಗಾಯದಿಂದಾದ ಸಾವು) ಎಂದು ಕರೆಯುತ್ತಾರೆ. ಇಂತಹ ಸಾವಲ್ಲಿ ವಿಷಕಾರಕಗಳು (toxins), ಸೋಂಕು (infection) ಮತ್ತು ದೈಹಿಕ ಗಾಯ (trauma) ಗಳೇ ಕಾರಣೀಭೂತ ಕೊಲೆಗಾರರು. ಹಾಗೆ ಕೊಲೆಯಾಗುವಾಗ ಜೀವಕೋಶಗಳು ಉಬ್ಬಿ (cell swelling), ಒಡೆದುಕೊಂಡು (cell rupture), ತನ್ನೊಳಗಿನ ಕಣಗಳನ್ನೆಲ್ಲಾ ಹೊರಚೆಲ್ಲಿ ಜೀವಚೆಲ್ಲುತ್ತವೆ. ಹೊರಬಂದ ಜೀವಕೋಶದ ಕಣಗಳು (cell components) ಅಕ್ಕಪಕ್ಕದ ಜೀವಕೋಶಗಳಲ್ಲಿ ನಕಾರಾತ್ಮಕ ಪರಿಣಾಮ (inflammation) ವನ್ನು ಉಂಟುಮಾಡುವುದಲ್ಲದೆ, ಸತ್ತ ಜೀವಕೋಶಗಳ ಅವಶೇಷ (cell debris) ಗಳು ಅಲ್ಲೇ ಶೇಖರಗೊಳ್ಳುತ್ತವೆ (ಚಿತ್ರ. 1). ಅದ್ದರಿಂದ ಇದೊಂದು ಅನಿಯಂತ್ರಿತ, ಸ್ವೇಚ್ಚೆಯುತ  ಮತ್ತು ಹಾನಿಕಾರಕ ಮೃತ್ಯುಕ್ರಿಯೆ. Necrosis  ಗೆ ಒಂದು ಶ್ರೇಷ್ಠ ಉದಾಹರಣೆಯೆಂದರೆ ಗ್ಯಾಂಗ್ರಿನ್



ಕೊಲೆಗೆ ವಿರುದ್ದವೆಂಬಂತೆ ತನ್ನ(ಜೀವಕೋಶದ)ಲ್ಲಾಗಿರುವ ಸರಿಪಡಿಸಲಾಗದ ಮಾರಕ ಪರಿವರ್ತನೆಗಳು (DNA damage/mutation), ಸೋಂಕುಗಳು, ಎದುರಿಸುತ್ತಿರುವ ಆಹಾರ ಕೊರತೆಗಳು ಮತ್ತು ಅಂಗಾಂಗಗಳಲ್ಲಿ ನಿರ್ದಿಷ್ಟ ಹಾಗೂ ಅವಶ್ಯ ಸಂಖ್ಯೆಗಿಂತಲೂ ಹೆಚ್ಚುತ್ತಿರುವ ಜೀವಕೋಶಗಳು ಉಳಿದ ಅಂಗಾಂಗಗಳಿಗೆ ಮತ್ತು ಜೀವರಾಸಾಯನಿಕ ಕ್ರಿಯೆಗಳಿಗೆ ತೊಂದರೆಯುಂಟುಮಾಡಬಾರದು ಎಂಬ ಕಾರಣದಿಂದ ನಿಯಂತ್ರಿತ, ಪೂರ್ವಯೋಜಿತ ಆತ್ಮಹತ್ಯೆಯನ್ನು ಮಾಡಿಕೊಂಡು ಕೂಡ ಜೀವಕೋಶಗಳು ಸಾವನ್ನಪ್ಪಬಹುದು. ಇಂತಹ ಪೂರ್ವಯೋಜಿತ ಜೀವಕೋಶದ ಸಾವನ್ನು (programmed cell death) apoptosis  (ಉಚ್ಚಾರ: ಅಪಾಪ್-ಟೋಸಿಸ್ / ಅಪೊ-ಟೋಸಿಸ್; ಮೂಲ: ಗ್ರೀಕ್; ಅರ್ಥ: ಉದುರಿ ಹೋಗು) ಎಂದು ಕರೆಯುತ್ತಾರೆ. ಆಯಸ್ಸು ತೀರಿದ ಜೀವಕೋಶಗಳು ಸಹ ಇದೆ ಮಾದರಿಯ ಸಾವನ್ನಪ್ಪುತ್ತವೆ. ಹಾಗೆ ಸಾಯುವಾಗ ಜೀವಕೋಶಗಳು ಕುಗ್ಗಿ (cell shrinkage), ವರ್ಣತಂತುಗಳೆಲ್ಲ ಚೂರು ಚೂರಾಗಿ (Chromosomal DNA fragmentation) ಇಡೀ ಜೀವಕೋಶ ಚಿಕ್ಕ ಚಿಕ್ಕ ಗುಳ್ಳೆಗಳಾಗಿ (cell blebbing) ಬಿಳಿ ರಕ್ತಕಣಗಳಿಂದ ಭಕ್ಷಿಸಲ್ಪಡುತ್ತವೆ (phagocytosis). ಈ ಕ್ರಿಯೆಯಲ್ಲಿ ಯಾವುದೇ ಜೀವಕೋಶ ಕಣಗಳಾಗಲೀ, ಸತ್ತ ಜೀವಕೋಶಗಳ ಅವಶೇಷಗಳಾಗಲೀ ಉಳಿಯದಿರುವುದರಿಂದ ಇದು ನೆಕ್ರೊಸಿಸ್ ಗಿಂತ ಆರೋಗ್ಯಕರವಾದ ಮತ್ತು ಅತ್ಯವಶ್ಯಕವಾದ ಮೃತ್ಯು ಕ್ರಿಯೆ (ಚಿತ್ರ. 1)ಈ ರೀತಿಯ ಲಕ್ಷಾಂತರ ಆತ್ಮಹತ್ಯೆಗಳು ನಮ್ಮೊಳಗೆ ಬದುಕಿನುದ್ದಕ್ಕೂ ನೆಡೆದು ದಿನಂಪ್ರತಿಯ ಸಹಜ ಆರೋಗ್ಯಕರ ಬೆಳವಣಿಗೆಗೆ ಸಹಕಾರಿಯಾಗಿ ನಿಲ್ಲುವವು. 


ಏಕಕೋಶೀಯ (Unicellular) zygote ರಚನೆಯಾದ ಐದು ದಿನದಲ್ಲಿ ವಿಭಜಿತ (mitotic cell division, ಒಂದು ಜೀವಕೋಶ ಎರಡಾಗುವ ಕ್ರಿಯೆ) ಬೆಳವಣಿಗೆ ಕಂಡು 70 ರಿಂದ 100 ಜೀವಕೋಶ ಹೊಂದಿರುವ 'ಬ್ಲಾಸ್ಟೋಸಿಸ್ಟ್' (Blastocyst, ಅರ್ಥ: ಮೊಳಕೆ) ಆಗಿ ರೂಪಗೊಳ್ಳುತ್ತದೆ (ಚಿತ್ರ. 2).  ಈ ಬ್ಲಾಸ್ಟೋಸಿಸ್ಟ್ ಅನ್ನು ಆರನೇ ದಿನದಿಂದ ಭ್ರೂಣ ಎಂದು ಕರೆಯಲಾಗುತ್ತದೆ. ಭ್ರೂಣಾಂಕುರ (Embryogenesis) ಗೊಂಡ ಮೊದಲ ದಿನದಲ್ಲೇ (Day 6 of Post fertilizationಬ್ಲಾಸ್ಟೋಸಿಸ್ಟ್ ನಲ್ಲಿ ಅಪಾಪ್-ಟೋಸಿಸ್ ಮೂಲಕ ಕೆಲವಾರು ಜೀವಕೋಶಗಳು ಸಾವನ್ನಪ್ಪುತ್ತವೆ. ಈ ಸಾವು ಆಗದೇ ಹೋದರೆ ಭ್ರೂಣವು ಅಕಾಲಿಕ ಸಾವಿಗೀಡಾಗಬಹುದು ಅಥವಾ ಹಲವು ವೈಪರೀತ್ಯವುಳ್ಳ ಭ್ರೂಣವು ಬೆಳೆಯಬಹುದು. ಹಾಗಾಗಿ ಈ ಮೂಲಕ ಸಾವಿನಿಂದ ಭ್ರೂಣದ ಸಹಜ ಬೆಳವಣಿಗೆಯು ಸಾಧ್ಯವಾಗುತ್ತದೆ ಮತ್ತು ಈ ಪರಿಯಾಗಿ ಹುಟ್ಟಿನ ಜೊತೆ-ಜೊತೆಯಲ್ಲೇ 'ಸಾವು' ಕೂಡ ತನ್ನ ತಾನು ಜೀವರಚನೆಯಲ್ಲಿ ತೊಡಗಿಸಿಕೊಂಡುಬಿಡುತ್ತದೆ. 


ಸಾವು ಹೀಗೆ ಮುಂದುವರಿದು ಮಾನವನ ದೇಹದ ಕೇಂದ್ರ ಸಂಸ್ಕರಣಾ ಘಟಕ (CPU) ವಾದ ಮೆದುಳಿನ ಬೆಳವಣಿಗೆಯಲ್ಲೂ ಮುಖ್ಯ ಪಾತ್ರ ವಹಿಸುತ್ತದೆ. ಸಾಮಾನ್ಯವಾಗಿ ಭ್ರೂಣದ ಬೆಳವಣಿಗೆಯುದ್ದಕ್ಕೂ ನರವ್ಯೂಹ ರಚನೆ ಹಾಗು ಬೆಳವಣಿಗೆಯ ಕ್ರಿಯೆಗಳು ಸಾಗುತ್ತಿರುತ್ತವೆ. ಮೆದುಳಿನ ಬೆಳವಣಿಗೆಯ ಸಮಯದಲ್ಲಿರುವ ನರ ಜೀವಕೋಶ (neurons) ಗಳ ಸಂಖ್ಯೆ, ಪ್ರೌಢ ಮೆದುಳಿನಲ್ಲಿರುವ ನರ ಜೀವಕೋಶಗಳಿಗಿಂತ ಎರಡರಿಂದ ಮೂರು ಪಟ್ಟು ಹೆಚ್ಚಿರುತ್ತದೆ. ಹೀಗೆ ಭ್ರೂಣದ ಮೆದುಳು ಉತ್ಪಾದಿಸಿದ ನರಜೀವಕೋಶಗಳು ಒಂದಕ್ಕೊಂದು ಸಂಪರ್ಕ ಸಾಧಿಸಿ (ಅಂತಹ ಎರಡು ನರಜೀವಕೋಶದ ನಡುವಿನ ಸಂಪರ್ಕಕ್ಕೆ synaptic connection/synapse ಎಂದು ಕರೆಯುತ್ತಾರೆ) ನರವೂಹವನ್ನು ದೇಹಪೂರ್ತಿ ಚಾಚುವಂತೆ ಮಾಡುತ್ತದೆ.  ಆ ಮೂಲಕ ದೇಹದ ಎಲ್ಲಾ ಭಾಗಗಳಿಗೂ ವಿವಿಧ ಪ್ರಚೋಧನೆ (impulse) ಗಳನ್ನು ವಿದ್ಯುತ್ ಮತ್ತು ರಾಸಾಯನಿಕ ಪ್ರಸರಣ (electrical and chemical signal transmission) ಗಳ ಮೂಲಕ ತಲುಪಿಸಲು ಸಾಧ್ಯವಾಗುತ್ತದೆ. ಹಾಗೆ ಸಂಪರ್ಕಗಳು ಪೂರ್ಣಗೊಂಡ ನಂತರ ಸಂಪರ್ಕ ಸಾಧಿಸಲು ಉಪಯೋಗವಾಗದೇ ಉಳಿದ ಅರ್ಧದಿಂದ 2/3 ರಷ್ಟು ಜೀವಕೋಶಗಳನ್ನು ತೆಗೆದು ಹಾಕುವುದು ಅವಶ್ಯವಾಗುತ್ತದೆ. ಇದು ಅಪಾಪ್-ಟೋಸಿಸ್ ಮೃತ್ಯು ಕ್ರಿಯೆಯ ಮೂಲಕ ಸಾಧ್ಯವಾಗುತ್ತದೆ. 


ಅದೇ ರೀತಿಯಲ್ಲಿ ಭ್ರೂಣದಿಂದ ಮಗುವಿನ ಬೆಳವಣಿಗೆಯ ಹಾದಿಯಲ್ಲಿ ಕೈ-ಕಾಲು ಬೆರಳುಗಳ ಆಕಾರ ರೂಪಿಸುವಲ್ಲಿ ಸಹ "ಸಾವು" ಭಾಗಿಯಾಗಿದೆ. ಭ್ರೂಣದಲ್ಲಿ ಬೆಳೆದ ಬೆರಳುಗಳ ನಡುವೆ ಹಲವು ಜೀವಕೋಶಗಳಿಂದಾದ ಪದರವು ರಚನೆಯಾಗಿರುತ್ತದೆ. ಬಾತುಕೋಳಿಯ ಪಾದಗಳ ಆಕಾರದಲ್ಲಿರುವ ಕೈ-ಕಾಲುಗಳ ಬೆರಳ ನಡುವಿನ ಜೀವಕೋಶಗಳು zygote ರಚನೆಗೊಂಡ 41 ನೇ ದಿನದಿಂದ 56 ನೇ ದಿನಗಳ ನಡುವೆ (41 to 56th day of embryonic development) ಅಪಾಪ್-ಟೋಸಿಸ್ ಕ್ರಿಯೆಯ ಮೂಲಕ ಸಾವನ್ನಪ್ಪುತ್ತವೆ (ಚಿತ್ರ. 3). ಸಾವೇ ಇರದಿದ್ದರೆ ನಮ್ಮ ಹಣೆಬರಹ ತಿಳಿಸೋ ಹಸ್ತರೇಖೆಗಳು ಹೇಗಿರುತ್ತಿದ್ದವು ಎಂಬುದನ್ನು ಯೋಚಿಸಲು ಕೂಡಾ ಆಸಾಧ್ಯ



ಶಿಶುವಿನ ಜನನಕೂ ಮುನ್ನದಲ್ಲಿ ಸಾವಿನ ಪಾತ್ರವು ಇಷ್ಟಾದರೇ, ಇನ್ನು ಜನನದ ನಂತರವೂ ಈ ಸಾವಿನ ಕ್ರಿಯೆ ಜೀವವನ್ನ, ಜೀವಿಸಲಿಕ್ಕೆ ಯೋಗ್ಯವಾಗಿ ರೂಪಿಸುತ್ತದೆ. ದೇಹ ಮತ್ತು  ದೇಹದಲ್ಲಿನ ಪ್ರತಿಯೊಂದು ಅಂಗವು ತನ್ನ ನಿರ್ದಿಷ್ಟ ಆಕಾರ ಮತ್ತು ಅಳತೆಯನ್ನ ಹೊಂದುವುದಕ್ಕೆ ಅಪಾಪ್-ಟೋಸಿಸ್ ಮೃತ್ಯು ಕ್ರಿಯೆಯೇ ಮುಖ್ಯ ಕಾರಣ. ಪ್ರತಿ ಅಂಗದಲ್ಲೂ ಜೀವಕೋಶಗಳ ಬೆಳವಣಿಗೆ (cell growth) ಮತ್ತು ಸಾವು (cell death) ಸಮತೋಲಿತವಾಗಿದ್ದರೆ ಮಾತ್ರವೇ ಇದು ಸಾಧ್ಯವಾಗುತ್ತದೆ.ಈ ಸಮತೋಲನದಲ್ಲಾಗುವ ವೈಪರೀತ್ಯವು ಹಲವು ಅಸ್ವಸ್ಥತೆಗೆ ಕೂಡಾ ಕಾರಣವಾಗುತ್ತದೆ. ಅದೇ ರೀತಿ ದಿನ ನಿತ್ಯದ ನಮ್ಮ ಬದುಕಲ್ಲಿ ಹಲವು ಭೌತಿಕ, ರಾಸಾಯನಿಕ ಅಥವಾ ಜೈವಿಕ ವಿಷಕಾರಕಗಳು (physical, chemical or biological toxicants) ನಮ್ಮ ಜೀವ ವ್ಯವಸ್ಥೆಯೊಳಗೆ ಸೇರಿ ಜೀವಕೋಶದಲ್ಲಿ ಅಹಿತಕರ ಬೆಳವಣಿಗೆಗಳನ್ನು ಉಂಟುಮಾಡುತ್ತವೆ. ಉದಾಹರಣೆಗೆ ಸೂರ್ಯನಿಂದ ಬರುವ UV ವಿಕಿರಣಗಳು (UV-Radiation, a physical toxicant), ತಂಬಾಕಿನಲ್ಲಿರುವ ನಿಕೋಟಿನ್ (nicotine, a chemical toxicant) ತರಹದ ರಾಸಾಯನಿಕಗಳು ಮತ್ತು ಹಲವು ರೋಗಕಾರಕ ವೈರಸ್ ಗಳು (biological toxicant) ಜೀವಕೋಶದಲ್ಲಿನ DNA ಗಳನ್ನು ವಿಕೃತಗೊಳಿಸುತ್ತವೆ (DNA damage or mutation). ಅಂತಹ ಜೀವಕೋಶಗಳು ಹಾಗೆ ಉಳಿದುಕೊಂಡಲ್ಲಿ ಅನೇಕ ವಿಭಜನೆಗಳಲ್ಲಿ (cell division) ಒಳಗೊಂಡು ವಿರೂಪಗೊಂಡ ಜೀವಕೋಶಗಳ ಸಂಖ್ಯೆ ಹೆಚ್ಚಾಗಿ ಮಾರಕವಾಗಿ ಪರಿಣಮಿಸುತ್ತದೆ. ಹಾಗಾಗಿ ಇವುಗಳನ್ನು ತೆಗೆದು ಹಾಕುವ ಕೆಲಸವು ಅತ್ಯವಶ್ಯವಾದುದು ಮತ್ತು ಇದು ಅಪಾಪ್-ಟೋಸಿಸ್ ನಿಂದ ಪೂರ್ಣವಾಗುತ್ತದೆ. ಇನ್ನೂ ಮುಂದುವರಿದು ಸೋಂಕಿತ ಜೀವಕೋಶಗಳು (infected cells) ಮತ್ತು ಅವುಗಳನ್ನು ನಾಶಪಡಿಸಲು ಉಪಯೋಗವಾದಂತಹ ರೋಗ ನಿರೋಧಕ ಜೀವಕೋಶ (immune cells) ಗಳನ್ನು ಸಹ ತೆಗೆದು ಹಾಕುವ ಕೆಲಸವನ್ನು ಅಪಾಪ್-ಟೋಸಿಸ್ ಮೃತ್ಯು ಕ್ರಿಯೆ ನಿರ್ವಹಿಸುತ್ತದೆ. 


ನಮ್ಮೊಳಗಿನ ಕೋಟ್ಯಂತರ ಜೀವಕೋಶಗಳಲ್ಲಿ ಯಾವುದೇ ಜೀವಕೋಶವು ಸಾಯುವ ಸಾಮರ್ಥ್ಯವನ್ನು ಕಳೆದುಕೊಂಡು ಅಮರವಾದದ್ದೇ ಆದರೆ, ನಮ್ಮ ಸಾವು ಖಚಿತ. ಈ ರೀತಿ ಜೀವಕೋಶದ ಅಮರತ್ವದಿಂದ ಬರುವ ಒಂದು ಭಯಾನಕ ಅಸ್ವಸ್ಥತೆಯೇ ಕ್ಯಾನ್ಸರ್. ಹುಟ್ಟಿನಷ್ಟೇ ಮುಖ್ಯವಾದುದು ಈ ಸಾವು. ಬೇರಾವುದೇ ಕ್ರಿಯೆಗಳಿಗೂ ಮಿಗಿಲಾಗಿ ಸಹಜ ಬೆಳವಣಿಗೆಗೆ ಹೆಗಲು ಕೊಟ್ಟು, ಉಸಿರುಳಿಸಲು ಉಸಿರ ತೆಗೆಯಲು ಜೀವದೊಳಗೆ ನಡೆವ ವ್ಯವಹಾರವೇ ಈ ಸಾವು. ಜೀವದಲ್ಲಿನ ಜೀವಕ್ಕೆ ಜೀವವಿಯೋ ವಿದ್ಯಮಾನ ಈ ಸಾವು. ಈಗ ಯೋಚಿಸಿ, ಸಾವಿಲ್ಲದಿದ್ದರೇ ಹುಟ್ಟು ಸಾಧ್ಯವೇ??  


-ರೋಹಿತ್ 
Email: rohit.biogem@gmail.com
Mob: 9620496302

ಗ್ರಂಥಋಣ:

Samejima, K., and Earnshaw, W. C. (2005). Trashing the genome: the role of nucleases during apoptosis. Nature Reviews: Molecular cell biology 6: 677-688.

Brill, A., Torchinsky, A., Carp, H., and Toder, V. (1999). The role of apoptosis in normal and abnormal embryonic development.  Journal of Assisted Reproduction and Genetics 16(10): 512-519.

Hardy, K. (1999). Apoptosis in the human embryo. Reviews of Reproduction 4: 125-134.

University of New South Wales. (2012). UNSW Embryology. Retrieved from: http://php.med.unsw.edu.au/embryology/index.php?title=BGDA_Lecture_-_Development_of_the_Embryo/Fetus_2.

Saturday, August 3, 2013

ಜೀವ ಪ್ರಕೃತಿ

ಬೆಟ್ಟದಾಚೆಗಿನ ಮೇಘದೂರಿನ ಬದಿಗೆ ಒಂದಿತ್ತು 
ದೊಡ್ಡ ಅಗಸನ ಊರು. 
ಅಲ್ಲೊಬ್ಬನಿದ್ದ ದುಂಡು ಮುಖದ, 
ಕೆಂಪು ಹೊಳಪು ಕಂಗಳ ಯುವಕ.. 
ಹಸಿರು ಸೀರೆಯುಟ್ಟವಳ ಮೇಲಿತ್ತು ಮನ ಆತನ.. 
ಮಿಟುಕಿಸಿದ ಕಣ್ಣ, 
ಮೇಘಧೂತರಿಂದ ತಲುಪಿತ್ತು 
ಪ್ರೀತಿಯ ಹನಿ ಕವನ.. 
ಇಂತಿಪ್ಪ ಮಳೆಗಾಲದ ಮದುವೆಗೆ
ಮಿಂಚಿನಂತೆ ಬಂದವನದ್ದೇ ಚಿತ್ರೀಕರಣ..
ಮೊದಲ ಮೈತ್ರಿ,
ಪ್ರಥಮ ಚುಂಬನ..
ಹರಿದಿದ್ದ ಹಸಿರು ಪತ್ರದಿಂದ
ಅವಳಿ ಜನನವಾಯ್ತು ಆಮ್ಲದಿಂದ..
ಬೆಳೆದು ನಾಸಿಕಕ್ಕೆ ಹೊರಟ ಅವಳಿಗಳು,
ಗಾಳಿಚೀಲದಲ್ಲಿ ಕಬ್ಬಿಣ ಸಾಗಿಸುವವನ ಜೊತೆಕೂಡಿ,
ಗಣಿಗಾರಿಕೆಯಲೂ ಸಮ ಪಾಲಿತ್ತು,
ತನ್ನೇ ತನ್ಮಯಗೊಳಿಸಿ,
ತನ್ನೊಳಗಿನ ಕೆಟ್ಟತನವ
ತಾ ನೆಡೆದು ಬಂದ ದಾರಿಯಲೇ ಹಿಂದಿರುಗಿಸಿ ಹೊರಹಾಕಿ
ನಿಟ್ಟುಸಿರಿಟ್ಟನು..

ನಿಬ್ಬೆರಗಾಗಿ ಎಲ್ಲವ ಪಡೆದಿತ್ತು ಮನುಕುಲವು..!!


-ರೋಹಿತ್

Monday, May 20, 2013

ತಾಯಿ ಧರತಿ..

ಮಿಂಚಿನಾಟಕೆ ಹೆದರಿ,
ನಡುಗಿದೆಯ ಗುಡುಗೆ?
ಮರುಗಿದೆಯ ಮೋಡ?
ಆ ನಿನ್ನ ಕಣ್ ಹನಿಯ ಭೋರ್ಗೆರೆತಕೆ,
ಭುವಿಯಿತ್ತಳು ಮಡಿಲು,
ಎತ್ತೆತ್ತಲಿರಲು ಬರಿ ಕತ್ತಲು.. 
ತನ್ನೊಡಲಲಿಳಿಸಿ 
ಮೋಡದ ಆ ತಲ್ಲಣ,
ಭಯದ ದುಗುಡ ಕಾರ್ಮೊಡವ 
ಸರಿಸಿ ನೀಡಿತು ಸಾಂತ್ವಾನವ..
ಬೆಳಕು ಹರಿಯಿತು,
ಭಯದ ಗುಡಿಯಲಿ ನಗುವು ಅರಳಿತ್ತು..
ಭುವಿಯ ಪ್ರೀತಿಯ ಪ್ರತಿಯಾಗಿ,
ನೆರಳಾಗಿ ನಿಂತನು ಮೋಡ..
ತನ್ನವರ ನೋವ ನುಂಗುತ
ಮನುಕುಲಕೆ ನೆರಳಿತ್ತು,
ಹಸಿರುಣಿಸಿ ಉಸಿರಿತ್ತಳು ತಾಯಿ ಧರತಿ..

ಸದ್ದಿಲ್ಲದೇ ಹೊಸದಿನದ ಜನ್ಮ ಪಡೆಯಿತು ಸರ್ವ ಜೀವ..

- ರೋಹಿತ್

Monday, April 8, 2013

ನನ್ನ ಅಮ್ಮ..


ಬದುಕನೀದು ಬದುಕುತಾಳೆ..
ತನ್ನದೆಂಬೊ ಬದುಕಿಲ್ಲಾ ಆಕೆಗೆ..
ಭುವಿಯ ಪ್ರೀತಿ ಅವಳೊಳಗೆ,
ಬಯಸಿಲ್ಲಾ ಒಂದಿಷ್ಟು ಕೂಡಾ, ತನ್ನ ತನಗೆ.. 

ಸೃಷ್ಟಿಯಲ್ಲಾ, ಸೃಷ್ಟಿಯ ಸೃಷ್ಟಿಕರ್ತೆ,
ಪರಿಚಯಿಸಿದಳು ಜಗವ ನಮಗೆ.. 
ಮಾಮನಾದ ಚಂದಿರ, ಕೃಷ್ಣ ನಮ್ಮ ಸೋದರ, 
ಮಲಗುವ ಮುನ್ನದಾ ಕಥೆಯೊಳಗೆ..

ನಗೆಯ ಹಬ್ಬದಡಿಗೆ, ಮನೆಯ ಮನದೊಳಗೆ,
ದಣಿಸದವಳ, ಒಳಗೊಳಗೇ ತಾನೇರುತಿಹ ನೋವ ಬೆಟ್ಟ.. 
ಸಹಿಸಲಾರಳು ಎನಗೆ ಒಣ ಹುಲ್ಲು ತಾಕಿದರೂ,
ಕಂಡು ಭಗವಂತನೇ ನಮ್ಮ ಮರೆತು ಬಿಟ್ಟ.. 

ಅಬ್ಬಬ್ಬಾ ಹೂ-ಹೃದಯ, ಮನಸು ಮಹಾ-ಕಾವ್ಯ , 
ಪದ ಹೇಗೆ ಮುಗಿಸೀತೋ? ಇವಳ ವಿವರಿಸೋ ಕಾರ್ಯ..
ಪೊರೆದ ಮರಕೆ ಬೀಸುವಂತೆ ಕುಡಿ ಎಲೆಯು ತಂಗಾಳಿ,
ನನ್ನ ಮುದ್ದು ಅಮ್ಮನಿಗೊಂದು ಪುಟ್ಟ ಕಾವ್ಯ.. 

- ರೋಹಿತ್ 

ಕಾದು ನೋಡಿ

ಹೊಸ ಅಂಕಣ...

"ತೀರ"


ಆತ್ಮೀಯ ಒಡನಾಡಿಗಳೇ,


೨೦೧೦-೨೦೧೧ ನೇ ಸಾಲಿನ ಹಿರಿಯ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದ ವಿಶೇಷವಾಗಿ ಮಾಡಲ್ಪಟ್ಟ "ತೀರ" ಎಂಬ ವೀಡಿಯೋ ತುಣುಕನ್ನು ಈ ಮೂಲಕ ನಮ್ಮ ಬ್ಲಾಗ್ ನಲ್ಲಿ upload ಮಾಡುತ್ತಿದ್ದೇವೆ. ನಮ್ಮ ವಿಭಾಗದಲ್ಲಿನ ದಿನಗಳ ನೆನಪನ್ನ ಮತ್ತೆ ನಿಮ್ಮಲ್ಲಿಗೆ ತರುವಂತಹ ಒಂದು ಪುಟ್ಟ ಪ್ರಯತ್ನವು ಇದಾಗಿದ್ದು, ನಿಮ್ಮೆಲ್ಲರ ಮೆಚ್ಚುಗೆಗೆ ಪಾತ್ರವಾಗುತ್ತದೆ ಎಂದು ನಂಬಿದ್ದೇವೆ.


ನಿಮ್ಮ ಪ್ರತಿಯೊಂದು ಅನಿಸಿಕೆಗಳಿಗೂ ಆದರದ ಸ್ವಾಗತ.



ಈ ವೀಡಿಯೊ ತುಣುಕನ್ನು ತಯಾರಿಸಲು ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಸಹಕರಿಸಿದ ಪ್ರತಿಯೋರ್ವರಿಗೂ ಈ ಮೂಲಕ ಧನ್ಯವಾದವನ್ನು ಅರ್ಪಿಸುತ್ತೇವೆ.


- ರೋಹಿತ್

ತೀರ ಭಾಗ - 1

ತೀರ ಭಾಗ - 2

ತೀರ ಭಾಗ - 3

ನನ್ನ ಬೆರಳಿನೊಡನೆ ಆಡಿದ ಕನಯ್ಯ...

ನನ್ನ ಬೆರಳಿನೊಡನೆ ಆಡಿದ ಕನಯ್ಯ...