Tuesday, July 24, 2012

ಪಾದಕೆರಗುವ ಧೂಳೇ ಧನ್ಯ...


ಪಾದಕೆರಗುವ ಧೂಳೇ ಧನ್ಯ... 

ಪಾದಕೆರಗುವ ಧೂಳೇ ಧನ್ಯ
ನಿನ್ನಯ ಸ್ಪರ್ಶದೊಳಿರಲು,
ಆ ಮುಂಗುರುಳಿನದೇನೇ ಪುಣ್ಯ
ಕಣ್ಗಳೊಡನಾಡುತಿರಲು,
ನಿನ್ನ ಕಣ್ಗಳೊಡನಾಡುತಿರಲು...
ಪಾದಕೆರಗುವ ಧೂಳೇ ಧನ್ಯ ...

ಎಟುಕದ ಚಂದ್ರನು ಇಳಿವನು ಇಳೆಗೇ
ಮಿಟುಕಿಸಿ ಕಣ್ಣ ನಿನ್ನ ಚೆಲುವಿನ ಸಿರಿಗೆ,
ಸೂರ್ಯನೇ ಕರಗುವ ಮೆಲ್ಲನೆ ಧರೆಗೆ
ನಿನ್ನೊಡನೆ ಭುವಿ ಇರೋ ಒಡಲಿನ ಉರಿಗೆ,
ಒಡಲಿನ ಉರಿಗೇ...
ಪಾದಕೆರಗುವ ಧೂಳೇ ಧನ್ಯ ...

ಕವಿಯೇ ಹುಟ್ಟುವ ಪ್ರತಿ ಕಣ್ಣೊಳಗೆ..
ಕವಿಯೂ ಮೂಕನೆ ಬಣ್ಣಿಸ ಕೂತರೆ..
ತಿರುಗೋ ಭೂಮಿ ತಿರುಗಿ ನೋಡಿತು ಮೆಲ್ಲನೆ,
ನಿನ್ನನು ಕಾಣಲು ಒಂದು ಗಳಿಗೆ,
ತೆಗೆಯಲೇ ದೃಷ್ಟಿಯ ಒಮ್ಮೆ ನಿನಗೆ..
ಪಾದಕೆರಗುವ ಧೂಳೇ ಧನ್ಯ ...

ಪಾದಕೆರಗುವ ಧೂಳೇ ಧನ್ಯ
ನಿನ್ನಯ ಸ್ಪರ್ಶದೊಳಿರಲು,
ಆ ಮುಂಗುರುಳಿನದೇನೇ ಪುಣ್ಯ
ಕಣ್ಗಳೊಡನಾಡುತಿರಲು,
ನಿನ್ನ ಕಣ್ಗಳೊಡನಾಡುತಿರಲು...
ಪಾದಕೆರಗುವ ಧೂಳೇ ಧನ್ಯ ...
ಪಾದಕೆರಗುವ ಧೂಳೇ ಧನ್ಯ ...

- ರೋಹಿತ್..

Facebook Page: www.facebook.com/rohitkumarhg1

Friday, July 13, 2012

ನಕ್ಕು ಬಿಡು ಒಮ್ಮೆ.. ೩

ಮನುಷ್ಯ ತನ್ನ ತಾನು ಅತೀ ಬುದ್ದಿವಂತ ಅಂತ ನಿರೂಪಿಸಿಕೊಳ್ಳೋಕೆ ಸಾಕಷ್ಟು ಆವಿಷ್ಕಾರಗಳನ್ನ ಮಾಡಿದ್ದಾನೆ. ಪ್ರಕೃತಿಗೇ ಸವಾಲೆಸೆದು ಅವಶ್ಯಕತೆಯ ಗಡಿ ದಾಟಿ ಬೆಳೆದು ನಿಂತ ಅವನ ಚಿಂತನೆಗಳು ತನ್ನೊಳಗೆ ನೂರು ನೋವುಗಳಿಗೆ ಮನೆ ಮಾಡಿ ಕೊಟ್ಟಿದೆ. ಯಾವ ಹೊಸ ತಂತ್ರಜ್ಞಾನವೂ ಭಾಂಧವ್ಯದೊಳಗಿರುವ ಭಾವನೆಯನ್ನ ಹೊತ್ತು ತರಲಾರದು, ಅರಸಿ ಹೊರಟ ನಗುವನ್ನು ನೀಡುವುದಕ್ಕೂ ಅದರಿಂದಾಗದು.. ನಮ್ಮವರೊಡನೆ ಇರುವ ಬೆಚ್ಚಗಿನ ಬದುಕನ್ನ ಕಟ್ಟಿಕೊಡಲು, ನೆಮ್ಮದಿ-ಸಂತೋಷಗಳನ್ನು ಹುಟ್ಟಿ ಹಾಕಲು ಯಾವುದೇ ಯಂತ್ರ(ಮೆಶಿನ್ನು)ಗಳಿಂದಲೂ ಸಾದ್ಯವಿಲ್ಲ.. ಅಂತೆಯೇ ತಾ ಬಯಸಿ ನಿಂತವರು ನಮ್ಮೊಡನೆ ಬರದಾದಾಗ, ಎದ್ದು ನಿಂತ ನೋವಿಗೆ ಮದ್ದು ಕೇವಲ ಆ ಬಯಸಿದ ಮನಸಿನ ಸಿಹಿ ಇರುವಿಕೆಯಷ್ಟೇ.. ಅಪ್ಪ, ಅಮ್ಮನನ್ನೇ ಕಾಣದ ಲೋಕವರಿಯದ ಆ ಮಕ್ಕಳಿಗೂ, ಮಕ್ಕಳ ಕಳೆದುಕೊಂಡ ಪುಟ್ಟ ಮನಸಿನ ಹಿರಿಜೀವಗಳಿಗೂ ಕಾಡುವ ನೋವದು ಒಂದೇ.. ಕಂಬನಿಯ ರೂಪ ಒಂದೇ.. ಅದು ತರುವ ದುಗುಡದ ಭಾವವೊಂದೇ.. ಕಾರಣ ಮಾತ್ರ ಬೇರೆ... ತೊರೆದ ಜೀವವ ಕಾದು ಕುಳಿತ ಮನಗಳಿಗೆ...

ನಕ್ಕು ಬಿಡು ಒಮ್ಮೆ..
ಹುಟ್ಟುತಾ ಒಂಟಿಯೇ, ಹೊರಟಾಗಲೂ ಒಬ್ಬನೇ...
ನಡುವೆ ಜೊತೆಯಾದವಗೆ ನೆರಳಾಗಿ ನೆಡೆಯುತ್ತಿರೆ..
ನಮ್ಮವರ ನೆನಪ ಕಡೆವರೆಗೂ ಕದಲದಂತೆ ಬಚ್ಚಿಟ್ಟು..
ಆ ನೆನೆಪೂ ಕೂಡಾ ನಗುವಂತೆ..
ನಕ್ಕು ಬಿಡು ಒಮ್ಮೆ...

- ರೋಹಿತ್..

ನಕ್ಕು ಬಿಡು ಒಮ್ಮೆ.. ೨

ಎಷ್ಟು ವಿಚಿತ್ರ.. ಕೆಲವು ಸಲ ಕೆಲವುಗಳನ್ನ ಎಷ್ಟು ಜೋಪಾನವಾಗಿ ಎತ್ತಿ ಇಟ್ಟಿರ್ತಿವಿ ಅಂದ್ರೆ ಇಟ್ಟಿರೋ ವಸ್ತು ಎಲ್ಲಿದೆ ಅಂತ ಕೂಡಾ ನೆನಪಿರೋದಿಲ್ಲ.. ಅಂತೆಯೇ ಬದುಕು.. ಬದುಕನ್ನ ಜೋಪಾನ ಮಾಡೋದಕ್ಕಿಂತ ಅದರ ಪಾಡಿಗೆ ಅದನ್ನ ಬಿಟ್ಟಿದ್ರೆ ಸುಂದರವಾಗೇ ಸಾಗುತ್ತೆ.. 
ಹೆಚ್ಚು ಖುಷಿಯನ್ನ ಬಯಸಿ ಬಯಸಿ,
ಆ ಬದುಕಿಗೂ ಒಂದಿಷ್ಟು ಆಸೆ ತರಿಸಿ..
ಇರೋ ಪುಟ್ಟ ಪುಟ್ಟ ನಗುವನ್ನ ಆ ಆಸೆಗಾಗಿ ಮೀಸಲಿಟ್ಟು ನಗೋದನ್ನ ಮರೆತಿರುವ ನಾವುಗಳು, ಸಿಕ್ಕಾಪಟ್ಟೆ ನಗಬೇಕು ಅಂತ ಇಷ್ಟ ಪಡ್ತೀವಿ.. ನಗೋದಕ್ಕೆ ಕಾರಣ ಹುಡುಕಿ ಕುಳಿತಂತಹ ಅಂತವರಿಗೆ..

ನಕ್ಕು ಬಿಡು ಒಮ್ಮೆ..
ಸಿಕ್ಕೂ-ಸಿಗದ ಕಾರಣಗಳು,
ತೊರೆದ ಬೂತಕಾಲದ ಕನಸುಗಳೂ..
ನೀನೇ ಸಹ್ಯ ನಮಗೆನ್ನುತಾ ತಿರುಗಿ ಬರುವಂತೆ..
ನಕ್ಕು ಬಿಡು ಒಮ್ಮೆ..

- ರೋಹಿತ್ 

ನಕ್ಕು ಬಿಡು ಒಮ್ಮೆ.. ೧



ಎಂಥಾ ಮನಸೊಳಗೂ, ಎಷ್ಟೇ ನಗುವಿನಾ ನೆರಳಲ್ಲೂ ಒಂದಿಷ್ಟು ನೋವುಗಳು ಮೈಮುರಿದು ನಿಂತಿರೊತ್ತೆ... ಪ್ರತಿಯೊಬ್ಬರಿಗೂ ಇನ್ನೊಬ್ಬರ ಬದುಕು ಸುಖಮಯವಾಗಿ ಕಾಣೊತ್ತೆ.. ಅವರವರ ನೋವುಗಳು ಮಾತ್ರ ಅವರಿಗೆ ಬೆಟ್ಟವಾಗಿ ಕಾಣೊತ್ತೆ.. ಮತ್ತ್ಯಾರ ಕಂಬನಿಯ ಅರಿವೂ ಸಹ ಇನ್ನೊಬ್ಬರಿಗೆ ಇರೋಲ್ಲಾ..!


ನಕ್ಕು ಬಿಡು ಒಮ್ಮೆ.. 
ನಿನ್ನೆಲ್ಲಾ ನೋವುಗಳು, ಭಯ ಮಾಡೋ ಭೀತಿಗಳೂ 
ನಿನ್ನ ಕಂಡು ದೂರ ಓಡುವಂತೆ..
ನಕ್ಕು ಬಿಡು ಒಮ್ಮೆ..


- ರೋಹಿತ್..

ಕಾದು ನೋಡಿ

ಹೊಸ ಅಂಕಣ...

"ತೀರ"


ಆತ್ಮೀಯ ಒಡನಾಡಿಗಳೇ,


೨೦೧೦-೨೦೧೧ ನೇ ಸಾಲಿನ ಹಿರಿಯ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದ ವಿಶೇಷವಾಗಿ ಮಾಡಲ್ಪಟ್ಟ "ತೀರ" ಎಂಬ ವೀಡಿಯೋ ತುಣುಕನ್ನು ಈ ಮೂಲಕ ನಮ್ಮ ಬ್ಲಾಗ್ ನಲ್ಲಿ upload ಮಾಡುತ್ತಿದ್ದೇವೆ. ನಮ್ಮ ವಿಭಾಗದಲ್ಲಿನ ದಿನಗಳ ನೆನಪನ್ನ ಮತ್ತೆ ನಿಮ್ಮಲ್ಲಿಗೆ ತರುವಂತಹ ಒಂದು ಪುಟ್ಟ ಪ್ರಯತ್ನವು ಇದಾಗಿದ್ದು, ನಿಮ್ಮೆಲ್ಲರ ಮೆಚ್ಚುಗೆಗೆ ಪಾತ್ರವಾಗುತ್ತದೆ ಎಂದು ನಂಬಿದ್ದೇವೆ.


ನಿಮ್ಮ ಪ್ರತಿಯೊಂದು ಅನಿಸಿಕೆಗಳಿಗೂ ಆದರದ ಸ್ವಾಗತ.



ಈ ವೀಡಿಯೊ ತುಣುಕನ್ನು ತಯಾರಿಸಲು ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಸಹಕರಿಸಿದ ಪ್ರತಿಯೋರ್ವರಿಗೂ ಈ ಮೂಲಕ ಧನ್ಯವಾದವನ್ನು ಅರ್ಪಿಸುತ್ತೇವೆ.


- ರೋಹಿತ್

ತೀರ ಭಾಗ - 1

ತೀರ ಭಾಗ - 2

ತೀರ ಭಾಗ - 3

ನನ್ನ ಬೆರಳಿನೊಡನೆ ಆಡಿದ ಕನಯ್ಯ...

ನನ್ನ ಬೆರಳಿನೊಡನೆ ಆಡಿದ ಕನಯ್ಯ...