Wednesday, July 27, 2011

ಬರಲೇ ನಾನಿನ್ನು...?


 ಬರಲೇ ನಾನಿನ್ನು...?
ಸಮಯವೂ ಮೀರಿತ್ತು.. ಬಯಸದ ಆ ಕ್ಷಣ
ಕರೆಯದೆ ಬಂದಿತ್ತು..
ಅಮ್ಮನ ಕಣ್ಣಲಿ ಹನಿ ಕಂಬನಿ ಮಿಡಿದಿತ್ತು..
ಅಪ್ಪನ ಮೊಗದಲ್ಲೂ, ಮೇಲಿನ ನಗುವಲ್ಲೂ
ದುಃಖವೊಂದು ನಿಂತಿತ್ತು, ಕೊರಗೊಂದು ಕಂಡಿತ್ತು..
ಬೀಸುತಾ ಕೈಯನು, ಕಳಿಸುವ ಆ ಹೆತ್ತ ಮನಗಳಲಿ,
ಉಕ್ಕೋ ಪ್ರೀತಿಯ ಪೂರ್ತಿಯ ಕಡಲಿತ್ತು..
ಹೊರಬರದ ಮನಸಲ್ಲೇ,
ಭಾರವಿದ್ದ ಎದೆಯಲ್ಲೇ,
ಹೊರ ನಿಂತು ನೆಡೆದು ನುಡಿದೆ..
ಬರಲೇ ನಾನಿನ್ನು..? ಅಮ್ಮಾ..
ಬರಲೇ ನಾನಿನ್ನು..?

- ರೋಹಿತ್

Monday, June 13, 2011

"ತೀರ"

ತೀರ...
ತೀರದೆಡೆ ಸಾಗುತಿದೆ ತೀರದಾ ನೆನಪುಗಳು...

ಈ ಒಂದು ಶ್ರೀರ್ಷಿಕೆ ಹೊತ್ತು ನಡೆದ 2010 -2011 ನೇ ಸಾಲಿನ ಹಿರಿಯ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದ ವಿಶೇಷವಾಗಿ ಮಾಡಲ್ಪಟ್ಟ "ತೀರ" ಎಂಬ ವೀಡಿಯೋ ತುಣುಕಿಗೆ ಸಂಭಂಧಪಟ್ಟ ನಿಮ್ಮ ಅನಿಸಿಕೆಗಳನ್ನು ಇಲ್ಲಿ ನೀಡಿರಿ.

ಧನ್ಯವಾದಗಳು,
ರೋಹಿತ್


Saturday, May 21, 2011

ಸರಿ ತಾನೇ ???




ನಾವು ಅರ್ಜೆಂಟ್ ನಲ್ಲಿದ್ದಾಗ ಇಡೀ ಲೋಕ slow motion ನಲ್ಲಿ ನಡೀತಿದೆ ಅನ್ಸೊತ್ತೆ..!
ಅದೇ ಸಮಾಧಾನವಾಗಿದ್ದಾಗ ಅದ್ಯಾಕೆ ಹಿಂಗೆ ಅರ್ಜೆಂಟ್ ಮಾಡ್ತಾರೋ ಅನ್ಸೊತ್ತೆ..
ನಾವು ಕಣ್ಣೀರಾದಾಗ ಊರೇ ನಮ್ಮನ್ನ ನೋಡಿ ನಗ್ತಿದೆ ಅನ್ಸೊತ್ತೆ..
ಓದುವಾಗ ಬರೋ ನಿದ್ದೆ exam ಆದ ಕೂಡಲೇ ಕಾಲು ಕಿತ್ತಿರೊತ್ತೆ..?!
ಮರಿಬೇಕು ಅಂತ ಇರೋ ವಿಷ್ಯ ತುಂಬಾ ನೆನಪಾಗೊತ್ತೆ,
ಅದೇ ಬಸ್ ಕಂಡಕ್ಟರ್ ಹತ್ರ ಉಳಿದಿದ್ದ ಚಿಲ್ಲರೆ ಮರ್ತೇ ಹೋಗೊತ್ತೆ... :(
ನಕ್ಕಿದ ದಿನಗಳನ್ನ ನೆನೆಸಿದಾಗ ಕಣ್ಣೇರು ಬರೊತ್ತೆ, ಅತ್ತಿದ್ದು ನೆನೆಪಾದಾಗ ನಗು ಬರೊತ್ತೆ.. :)
effort ಹಾಕೋ ಕಡೆ luck ಗೆ ಕಾಯ್ತಿರ್ತಿವಿ..
ನೋವನ್ನ ನೆನೆಸ್ಕೊಂಡು ಚಿಕ್ಕ ಚಿಕ್ಕ ನಗುನಾ ಮರ್ತಿರ್ತಿವಿ..
ದಿನಗಳಿಂದ ಕಾದಿದ್ದ favourite TV ಶೋ ಶುರು ಆದಾಗಲೇ power ಹೋಗಿರೊತ್ತೆ..!
ಬಾನುವಾರ ಮನೆಲಿದ್ದಾಗ್ಲೇ ಎಲ್ಲಾ ಚಾನೆಲ್ ಗಳು ಹಳಸಲು ಬಡಿಸ್ತಾ ಇರ್ತಾವೆ..
ಗಂಟೆ ಮುಂಚೆ railway ಸ್ಟೇಷನ್ ಗೆ ಹೋದಾಗ train ಅರ್ಧ ಗಂಟೆ late ಆಗಿ ಬರೊತ್ತೆ,
ಎರಡು ನಿಮಿಷ late ಆದಾಗ ON TIME  ಹೊರಟಿರೊತ್ತೆ...
ಬೇರೆಯವರ ತಪ್ಪುಗಳನ್ನ intentional ಅಂದ್ಕೊಳ್ತಿವಿ, ನಮ್ಮ ತಪ್ಪುಗಳಿಗೆ ಕ್ಷಮೆ ನಾ expect ಮಾಡ್ತಿವಿ..

ಹುಟ್ಟು ಆಕಸ್ಮಿಕ, ಸಾವು ನಿಶ್ಚಯ..
ಬದುಕು ಎಷ್ಟು ವಿಸ್ಮಯ..
-- ರೋಹಿತ್

Sunday, May 8, 2011

ವರ್ಷದ ನೆನಪು...



helping-hands-2.png
         


          ಈ ಕಂದಮ್ಮನಿಗೆ ಈಗ ಒಂದು ವರ್ಷ. "ABCD / AFTD - ಶಿವಗಂಗೋತ್ರಿ" ಹೆಸರಿನಲ್ಲಿ ನಾವು ಹುಟ್ಟು ಹಾಕಿದ ಈ ಗೂಡಿಗೆ ನಾವೆಲ್ಲಾ ಬಂದು ಸೇರಿ ಒಂದು ವರ್ಷವಾಗಿದೆ. ಚಿಗುರೆಲೆಯ ಮೇಲೆ ಇಬ್ಬನಿ ಸರಿದಂತೆ ಕಳೆದವು ದಿನಗಳು. ಒಟ್ಟಿಗೆ ಕಳೆದ ಆ ಒಂದು ದಿನದ ನೆನಪು ಇಂದಿಗೂ ದಟ್ಟವಾಗಿದೆ. ಮತ್ತೊಮ್ಮೆ ಒಂದಾಗೋ ಆ ದಿನಕ್ಕಾಗಿ ಇನ್ನೊಂದು ವಸಂತ ಕಾಯಬೇಕಿದೆ. ಪರಸ್ಪರರ ಒಳಿತಿಗೆ ಹಾಗೂ ಅದರೊಡನೆ ವಿಜ್ಞಾನದ ಬೆಳವಣಿಗೆಗೆ ಎಂದು ನಾವಿಟ್ಟ ಮೊದಲ ಹೆಜ್ಜೆಯ ದಾರಿ ನಮ್ಮನ್ನ ಉತ್ತಮೊತ್ತಮದೆಡೆಗೆ ಸಾಗಿಸುತ್ತದೆ ಎಂಬ ಬಲವಾದ ನಂಬಿಕೆ ನಮ್ಮೊಳಗಿದೆ. ಅದೇ ನಿಟ್ಟಿನಲ್ಲಿ ಎಲ್ಲರ ಕೈ ಸೇರಿಸೋ ಕೆಲಸ ಇನ್ನೂ ಸಾಗುತ್ತಲಿದೆ. ಈ ಒಂದು ಕೆಲಸದಲ್ಲಿ ಜೊತೆಗಿದ್ದು ಸಹಕರಿಸಿದವರೆಷ್ಟೋ? ಬೆನ್ನು ತಟ್ಟಿ ಪ್ರೋತ್ಸಾಹಿಸಿದವರೆಷ್ಟೋ? ಚಿಕ್ಕ-ಪುಟ್ಟ ತಪ್ಪುಗಳನ್ನು ಕಿವಿ ಹಿಂಡಿ ತಿದ್ದಿದವರೆಷ್ಟೋ??... ಮನೆಯೊಳಗಿನ ಬೆಳಕು ಮನ-ಮನಕೂ ಹರಿದು ನಮ್ಮೊಳಗೇ ಬೆಸೆದ ಭಾವಲಹರಿಯ ಪರಿ ಕಂಡು ಹಿಗ್ಗಿದವರೆಷ್ಟೋ???.. ಅಂತಹ ಎಲ್ಲಾ ಕೈಗಳಿಗೂ ಮನಃ ಪೂರ್ಣ ಧನ್ಯವಾದಗಳು.

          ಆದರೇ ಕೆಲವೊಂದು ವಿಚಾರಗಳು ಇನ್ನೂ ಹೊರಬೀಳಬೇಕಿದೆ. ಇದುವರೆಗಿನ ಪ್ರಯಾಣದಲ್ಲಿ ಬಹಳ ಜನರ ಸಹಕಾರದೊಂದಿಗೆ ನಮ್ಮ ಕ್ಷೇತ್ರದಲ್ಲಿನ ವಿವಿಧ ಸಂಶೋಧನಾ ಕೇಂದ್ರ, ಉಧ್ಯಮಗಳಲ್ಲಿನ ಶಿಷ್ಯವೇತನ ಹಾಗೂ ಉದ್ಯೋಗವಕಾಶಗಳನ್ನ ಎಲ್ಲರ ಗಮನಕ್ಕೆ ತರುವ ಕೆಲಸವು ನೆಡೆಯುತಿದ್ದು, ಹೀಗೆ ಮುಂದಿನ ದಿನಗಳಲ್ಲಿ ಹೆಚ್ಚು ಹೆಚ್ಚು ವಿಜ್ಞಾನ ಚಿಂತನೆಗಳು/ವಿಚಾರಗಳು ಎಲ್ಲರಿಂದ ಬರಲಿದೆಯೆಂದು ನಾವು ಅಪೇಕ್ಷಿಸುತ್ತೇವೆ. ಸಾಮಾಜಿಕ ಕಳಕಳಿಯುಕ್ತ ಕಾರ್ಯಗಳನ್ನ ಹೊತ್ತ ಸಲಹೆಗಳೂ ಕೂಡಾ ಸ್ವಾಗತಾರ್ಹ. ಆ ಮೂಲಕ ಎರಡು ವರ್ಷಕೊಮ್ಮೆ ಸೇರುವ ದಿನವಾಗಿ ಉಳಿಸದೆ, ಸಾಗೋ ಹಾದಿಯಲ್ಲಿ ಅಲ್ಲಲ್ಲಿ ಗುರುತುಳಿಸಿ ನಡೆಯುವಂತಹ ಯೋಜನೆಗಳಿಗೆ ರೂಪುರೇಷೆ ನೀಡಬೇಕಿದೆ. ವಿದ್ಯಾರ್ಥಿಗಳಿಗೆ ಉದ್ಯೋಗವಕಾಶಗಳನ್ನು ಹೆಚ್ಚಿಸುವ ದೆಸೆಯಿಂದ CAMPUS RECRUITMENT ನಂತಹುಗಳನ್ನು ಸಹ ಶುರುಮಾಡಲು ವಿವಿಧ ಉದ್ಯಮಗಳಲ್ಲಿರುವ ಎಲ್ಲರ ಸಹಾಯ ಹಸ್ತದ ಅವಶ್ಯಕತೆ ಇರುವುದು ಕೂಡಾ ಅಷ್ಟೇ ಸತ್ಯ.

ನಮ್ಮಿಂದ ಇನ್ನೊಬ್ಬರಿಗೆ, ನಮ್ಮ ವಿಭಾಗಕ್ಕೆ, ವಿಶ್ವವಿದ್ಯಾನಿಲಯಕ್ಕೆ, ವಿಜ್ಞಾನಕ್ಕೆ ಹಾಗೂ ಲೋಕಕ್ಕೆ ಆದ ಕೊಡುಗೆಯೇನು??
ಎಂಬ ಪ್ರೆಶ್ನೆಗೆ ಉತ್ತರಿಸುತ್ತಾ, ಪ್ರತ್ಯುತ್ತರವ ಬಯಸದೇ
ನಡೆಯೋಣ ಜೊತೆಯಾಗಿ ಕಂಡ  ಕನಸುಗಳ ದಿಕ್ಕಿನಲ್ಲಿ...

ಹೊಸ ಹೊಸ ಕಲ್ಪನೆಗಳು, ಬದುಕಾಗೋ ದೋಣಿಯಲಿ
ಒಂದಾಗುವ ನಾವು ಈ ನೆಪದಿ...

ನಾವ್ ನಕ್ಕಿ ನಗಿಸುತಾ, ಪ್ರತಿ ನೋವ ಮರೆಸುತಾ
ಜಗವನೇ ಹಿಡಿಯುವ ಈ ಕರದಿ...

       

ರೋಹಿತ್ ಕುಮಾರ್ ಹೆಚ್. ಜಿ.
ಸಂಶೋಧನಾ ವಿದ್ಯಾರ್ಥಿ
ಜೀವರಸಾಯನ ಶಾಸ್ತ್ರ ವಿಭಾಗ 
ದಾವಣಗೆರೆ ವಿಶ್ವವಿದ್ಯಾನಿಲಯ
ಶಿವಗಂಗೋತ್ರಿ - ದಾವಣಗೆರೆ

Mob: 9620496302

Sunday, March 27, 2011

ಕತ್ತಲಿಂದ...

ಬೆಳಕಿನಡಿಯಲಿ ಕತ್ತಲು, ಸೋಲಿನ ಮೆಟ್ಟಿಲ ತುದಿಯಲಿ ಗೆಲುವಿಹುದು,
ಕಾರ್ಮೋಡದ ಹಿಂದೆಯೇ ಮುಂಗಾರು, ನೋವಿನಾಚೆಗೆ ನಲಿವಿಹುದು...
ಕಣ್ಣಿರಿನ ಅಂಚಲಿ ನಗುವ ಗೆರೆಯು, ಇರಲಿ ಕೊಂಚ ತಾಳ್ಮೆಯು..
ಆತ್ಮಸಾಕ್ಷಿಗೆ ಬದುಕಿತ್ತು, ನಮಗಾಗಿ ಕಳೆಯುವ ಬಾಳುಗಳ..
ಕಲ್ಲ ಹಾದಿಯಲು ದೈರ್ಯದಲಿ, ಸೋಲಲಂಜದೆಯೇ ನಡೆಯುವ...
ಪುಟ್ಟ ಪುಟ್ಟ ಸಂತೋಷವನು, ಹಂಚುತ ಬದುಕನೇ ನಿರ್ಮಿಸುವ...

-ರೋಹಿತ್

Saturday, March 19, 2011

Holy ಹೋಳಿ

  

ಕನಸ ಕಾಮನಬಿಲ್ಲೊಳಗೆ ನೆಂದು
ಬದುಕ ಬಣ್ಣದಿ ಮೀಯೋಣ..
ನೋವ ಕಲೆಗಳಿಗೆ ಬಣ್ಣದ
ಮುಸುಕ ತೊಡಿಸಿ ನಗಿಸೋಣ,
ರಂಗಿನಾಟದ ರಂಗದೊಳಗೆ ನುಡಿಸೋ ಕಲಾವಿದರು ನಾವು..
ದ್ವೇಷ-ದುಃಖ-ದುಮ್ಮಾನಗಳ ಎಸೆಯುತಲಿ
ಸ್ನೇಹದೋಕುಳಿ  ಗೆ ಮುಖ ಚಾಚೋಣ...
ಬಣ್ಣ ಬಣ್ಣದ ಬದುಕು ಬದುಕಾಗಿ ಬರಲಿ.

- ರೋಹಿತ್   

ಚಿತ್ರ ಕೃಪೆ: www.santabanta.com

Thursday, March 3, 2011

ಅಬ್ಬಬ್ಬಾ ಹುಟ್ಟಿದಬ್ಬಾ...!!


ಒಂದು ಕೇಕು, ಅರ್ಧ ಡಜನ್ ಮೊಟ್ಟೆ, ಎತ್ತಿಕೊಂಡು ಆಕಾಶಕ್ಕೆ ಎಸಿಯುತ್ತಿದ್ದ ನನ್ನ ಹುಡುಗರು... ಕರಗದ ನಲಿವು.. ಕೂಗಿ-ಕಿರುಚಿ ತೆರೆದ ಮನದಂಗಳದ ಹಸಿವು.. ನನ್ನವರು ಜೊತೆಯಾಗಿ ತಂದಂತಹ ಭಾವ ಗೊಚ್ಚವು.. ಅಬ್ಬಬ್ಬಾ ಅನ್ನಿಸೋಕೆ ಇಷ್ಟು ಸಾಕಲ್ವೆ ಹುಟ್ಟಿದ ದಿನಕ್ಕೆ...!!?

           ಮೊದಲೇ ಹೇಳಿಬಿಡ್ತೀನಿ ನನಗೆ ಈ ದಿನಗಳ ಬಗ್ಗೆ ನಂಬಿಕೆ ಇಲ್ಲಾ! ಹುಟ್ಟಿದ ದಿನ, ಅಮ್ಮನ ದಿನ, ಅಪ್ಪನ ದಿನ, valentine ದಿನ... ಹೀಗೆ ಯಾವ ದಿನಗಳ ಮೇಲೂ ನನಗೆ ಮೊದಲಿನಿಂದಲೂ ಅಷ್ಟೊಂದು ಒಲವು ಇಲ್ಲಾ. ಇಂತಹ ಒಂದು ದಿನಗಳಲ್ಲಿ ಮಾತ್ರ ಅಪ್ಪ, ಅಮ್ಮಾ..., ಹೀಗೆ ಒಬ್ಬರ ಮೇಲೆ ಪ್ರೀತಿ ತೋರಿಸಬೇಕು, extra care, extra preference ನ ಕೊಡಬೇಕು ಅನ್ನೋದನ್ನ ಸುತಾರಾಂ ನಾನು ಒಪ್ಪೋದಿಲ್ಲಾ. ಯಾಕೆಂದರೆ ನನ್ನ ಒಬ್ಬ ಫ್ರೆಂಡ್, ಅಪ್ಪ, ಅಮ್ಮಾ ಎಲ್ಲಾ ಅವರವರ ದಿನಗಳ ಹೊರತಾಗಿ ಎಲ್ಲಾ ದಿನಗಳಲ್ಲೂ ನನಗೆ ಸ್ಪೆಷಲ್ ಆಗೇ ಇರ್ತಾರೆ... ಹಾಗಾಗಿ ಇಂತಹ ದಿನಗಳ ಬಗ್ಗೆ ನನ್ನಲ್ಲಿ ನನ್ನದೇ ಆದ ಅಭಿಪ್ರಾಯವಿದೆ. ಆದರೂ ನಾನೂ ಎಲ್ಲರ birthday ಗಳಲ್ಲಿ wish ಮಾಡ್ತೀನಿ ಅದಕ್ಕೆ ನಾನೂ ಬೇರೆಯದೇ explanation ಕೊಡ್ತೀನಿ. ಅದನ್ನ ಮುಂದೆ ಹೇಳ್ತೀನಿ. ಈಗ ಫೆಬ್ರವರಿ 27 , 2011 ಕ್ಕೆಹೋಗೋಣ. That's the day before My Day..  

           ಮಾಮೂಲಿನಂತೆ ನಾನೂ ಊರಿನಲ್ಲಿದ್ದೆ. ಮಾಮೂಲು ಅಂದರೆ ನಾನೂ ಎಲ್ಲೇ ಇದ್ದರೂ 27 ನೇ ಫೆಬ್ರವರಿಗೆ ಊರಿಗೆ ಹೋಗೋ ಅಭ್ಯಾಸ ಮಾಡ್ಕೊಂಡಿದೀನಿ. ತೀರ ಅನಿವಾರ್ಯ ಕಾರಣವೇಳದ ಹೊರತು ನಾನೂ ಈ ಅಭ್ಯಾಸದಿಂದ ಹೊರತಾಗೋನಲ್ಲ. ಅದೊಂತರ ನನಗೆ ನಾನೂ ಮಾಡಿಕೊಂಡ ಅಗ್ರೀಮೆಂಟು. ನನ್ನ ಅಪ್ಪ-ಅಮ್ಮನಿಗೆ ಆ ದಿನ ನಾನೂ ಅವರೊಂದಿಗೆ ಇರೋದು ಖುಷಿ ಕೊಡೊತ್ತೆ ಅನ್ನೋ ಒಂದು ಕಾರಣ ನನ್ನ ಈ ಅಭ್ಯಾಸಕ್ಕೆ ಹಚ್ಚಿದೆ. ಹಾಗಂತ ಮನೆಯಲ್ಲಿ ಹುಟ್ಟಿದಬ್ಬಾನಾ celebrate ಏನೂ ಮಾಡೋಲ್ಲಾ. ಆದರೇ ಮನೆಯಲ್ಲಿರೋದೇ ನನಗೆ real celebration . ಯಾವುದೇ ಹಬ್ಬ ಆಗಲಿ, ಮತ್ತೊಂದಾಗಲಿ ಅಪ್ಪ-ಅಮ್ಮಾ-ಮನೆಯವರೊಡನೆ ಇರೋ ಪ್ರತಿ ಕ್ಷಣ ನನಗೆ ಎಲ್ಲಾರು ಮಾಡೋ ದೀಪಾವಳಿ ತರ. ಆ ದೀಪಾವಳಿಗೆಂದೇ ನಾ ನನ್ನೋರ ನನ್ನೂರಿಗೆ ಹೋಗಿದ್ದು. 

           ರಾತ್ರಿ 11.45 ಆಗುತ್ತಲೇ ಶುರುವಾದ ಕರೆ-ಸಂದೇಶಗಳ ಆತ್ಮೀಯ ಸೆರೆಗೆ ಸಿಕ್ಕಿ ಅಪರೂಪಕ್ಕೆ ಸ್ವಲ್ಪ busy ಆಗಿದ್ದೆ.. ಎಂದಿನಂತೆ ನಾನೂ ಮಲಗೋ 2 ಗಂಟೆಯೊಳಗೆ
ಇಪ್ಪತೈದು ಕರೆಗಳು ಜೊತೆಗೆ ಮೂವತ್ತೂ ಸಂದೇಶಗಳು ನನ್ನ ಬರಗಾಲದ ಮೊಬೈಲ್ ಗೆ ತಂಪೆಸದು ಹೋಗಿತ್ತು. Birthday resolution ಏನೂ ಅಂತ ಕೇಳಿದವರಿಗೆಲ್ಲಾ "to live without resolution " ಅನ್ನೋದು ನನ್ನ ಉತ್ತರ ಆಗಿತ್ತು. ನನ್ನ ಅಭಿಪ್ರಾಯದಲ್ಲಿ resolution ಎನ್ನುವುದು birthday ದಿನ ನಮ್ಮ ಮುಂದೊಂದು ಗೆರೆ ಎಳ್ಕೊಂಡು, ವರ್ಷ ಪೂರ್ತಿ ಗೆರೆಯಾಚೆಗೆ ಬದುಕಿ.. ಮುಂದಿನ birthday ಗೆ ಈ ಸಲನಾದ್ರೂ ಗೆರೆ ದಾಟಬಾರದು ಅಂತ ಅದೇ ಗೆರೆ ಮೇಲೊಂದು ಎಳೆಯುವ ಗೆರೆ... ಜೀವನಾನ ಅಷ್ಟೊಂದು ಸಂಕೀರ್ಣ ಮಾಡೋ ಅವಶ್ಯಕತೆ ಇಲ್ಲಾ ಅನ್ಸೊತ್ತೆ....

           ಬೆಳಗಾಗೆದ್ದು ದಾವಣಗೆರೆಗೆ ಹೊರಡೋ ಅಷ್ಟೊತ್ತಿಗೆ ಅಪ್ಪ ಕೈನಲ್ಲಿ ಮೈಸೂರ್ ಪಾಕ್ ಪ್ಯಾಕ್ ಹಿಡ್ಕೊಂಡಿದ್ರು, ಅಮ್ಮಾ ಎಂದಿನಥೆ ಕುಂಕುಮ ಇಟ್ಟ್ರು. ಮನೆಯವರೆಲ್ಲರ ಶುಭಾಷಯದ ಸಿಹಿ ತಿಂದು ಹೊರಟು ದಾವಣಗೆರೆ ತಲುಪೋ ಹೊತ್ತಿಗೆ ಮದ್ಯಾಹ್ನ 2.30 ಆಗಿತ್ತು. 1928, ಫೆಬ್ರವರಿ 28 ರಂದು ಸರ್ ಸಿ.ವಿ. ರಾಮನ್ ರವರು ಕಂಡುಹಿಡಿದ ನೊಬೆಲ್ ಪುರಸ್ಕೃತ ಆವಿಷ್ಕಾರವಾದ "ರಾಮನ್ ಎಫೆಕ್ಟ್" ನ ಗೌರವವಾಗಿ, ಸಿ.ವಿ.ರಾಮನ್ ರವರ ಗೌರವಾರ್ಥವಾಗಿ ಆಚರಿಸುವ "ರಾಷ್ಟ್ರೀಯ ವಿಜ್ಞಾನ ದಿನ" ದ ಕರ್ಯಕ್ರಾಮದಲ್ಲಿ ಪಾಲ್ಗೊಂಡು ಸಂಜೆ ರೂಂ ಸೇರೋ ವೇಳೆಗೆ ಮತ್ತೊಂದು ಸುತ್ತಿನ "ನಿಜವಾದ ಹುಟ್ಟು ಹಬ್ಬ"ಕ್ಕೆ ಮಾನಸಿಕವಾಗಿ ಸಿದ್ದನಾಗ್ತಾ ಇದ್ದೆ. 


           ಹುಡುಗರ ಹಾಸ್ಟೆಲ್ ನಲ್ಲಿ ಹುಟ್ಟಿದ ದಿನ ಆಚರಿಸೋಕೆ ಬೇರೆಯದೇ ಆದ ಕೆಲವು ನೀತಿ-ನಿಯಮಗಳಿವೆ. ನಾವೇ ಹುಟ್ಟು ಹಾಕಿದ ನೀತಿ-ನಿಯಮಗಳ ಪ್ರಕಾರವಾಗಿ ಒಂದು ಕೇಕು cut ಮಾಡಿ ಮುಗಿಸೋ ಮುಂಚೆಯೇ ಅರ್ಧ ಡಜನ್ ಮೊಟ್ಟೆ, ಅರ್ಧ ಕೇಕು ನನ್ನ ಮೇಲೆ ನೈವೇದ್ಯವಾಗಿತ್ತು. ಹಾಕಿದ್ದ ಬಟ್ಟೆಗಳು ಅಕ್ಷರಶಃ ಮೊಟ್ಟೆಯಲ್ಲಿ ನೆಂದಿತ್ತು. ಕೈ-ಕಾಲು ಹಿಡಿದ 6-8 ಜನ ನೆಲದಿಂದ ನನ್ನ terrace ಮುಟ್ಟಿಸೋ "MISSION TERRACE " ಗೆ ಚಾಲನೆ ಕೊಟ್ಟಿದ್ದರು. ಮಾರನೆ ದಿನವಿದ್ದ ದಾವಣಗೆರೆ ವಿಶ್ವವಿದ್ಯಾನಿಲಯ-ಶಿವಗಂಗೋತ್ರಿ ಕಪ್ ಕ್ರಿಕೆಟ್ ಮ್ಯಾಚ್ ನಿಂದ birthday bumps ಗಳ ಯೋಚನೆಯನ್ನ ಹುಡುಗರು ಕೈ ಬಿಟ್ಟಿದ್ದು ನನಗಾಗಿ ಒದಗಿ ಬಂದ ಪುಣ್ಯದ(?)ಫಲ ಇರಬೇಕು. ಮಜವ ಮುಗಿಸೋ ವೇಳೆಗೆ ನಡು ರಾತ್ರಿ ಸಮಯ ಮೀರಿತ್ತು. ಒಂದು ಗಂಟೆಯ ಸ್ನಾನದ ನಂತರ ನನಗೆ ಮತ್ತೆ ಮೊದಲಿನ ಸ್ತಿತಿಗೆ ಬರಲು ಸಾಧ್ಯವಾಗಿತ್ತು. 

           ಯಾವ ದಿನ ಏನೂ ಆಗೋತ್ತೋ ಗೊತ್ತಿಲ್ಲ ಇಂತದ್ದೊಂದು ದಿನ ನನ್ನನ್ನ ನೆನೆಸಿ ನೂರಕ್ಕೂ ಹೆಚ್ಚು ಜನ ಕರೆ,ಸಂದೇಶ ಮಾಡಿದ್ದು ಒಂತರದ ಖುಷಿಯನ್ನಂತು ಕೊಟ್ಟಿತ್ತು. ಆ ಮಟ್ಟಿಗಿನ wishes , celebration ನ expect ಕೂಡಾ ಮಾಡಿರಲಿಲ್ಲ ನಾನೂ. ನನ್ನವರು ಅಂತ ನನ್ನೊಡನೆ ಬಹಳ ಜನ ಇದಾರೆ ಅನ್ನೋ ಒಂದು ಭಾವನೆ ನಿಜವಾಗಿಯೂ ನನ್ನಲ್ಲಿ ಮೂಡಿತ್ತು. ಎದೆ ತುಂಬಿ ಬಂದಿತ್ತು. just a wish ತುಂಬಾನೆ ನಗು ಕೊಟ್ಟಿತ್ತು. ನಾನೂ ಕೂಡಾ ಎಲ್ಲರಿಗು wishes ಹೇಳೂದು ಈ ಕಾರಣಕ್ಕಾಗಿಯೇ... ನನ್ನ ಶುಭಾಷಯ ನನ್ನವರಲ್ಲಿ ಇಂತದ್ದೆ ಒಂದು ನಗು ಹರಿಸೊತ್ತೆಅನ್ನೋದಾದ್ರೆ WHY NOT ??

ಕೊನೆ ಹನಿ:

ಮನಸು ತುಂಬಿದೆ..
ನಿಮ್ಮ ಪ್ರೀತಿಯಿಂದಲೇ..
ನಗುವಿನಾಚೆಗೂ ಒಂದು ಬಯಕೆ ನನದಿದೆ..
ನೀವಿದ್ದರೆ.. ನಗುವು ನನಗೆ ಏತಕೆ??

ನಿಮ್ಮ ಸ್ನೇಹ-ಪ್ರೀತಿ-ವಿಶ್ವಾಸಕ್ಕೆ ಮಾತು ಬರದ ಹಕ್ಕಿಯಂತಾಗಿರುವ ನಿಮ್ಮವ....  
-- ರೋಹಿತ್ 
 
ಚಿತ್ರ ಕೃಪೆ: http://jsrschools.com/wp-content/uploads/2011/01/Happy_Birthday.jpg

Tuesday, February 15, 2011

ದೇಶ ಕಾಯ್ತಾ ಇದೆ...


ಈ ದೇಶದ ಮೇಲೆ ನನಗೊಂಥರಹದ ವಿಚಿತ್ರ ಪ್ರೀತಿ ಇದೆ. ಆದರೆ ಅದೇ ಪ್ರೀತಿ ಈ ದೇಶದ ನನ್ನ ಜನರ ಮೇಲೆ ಇಲ್ಲಾ!! ಖಂಡಿತವಾಗಿಯೂ ಒಂದು ಕೆಟ್ಟ ನೋವು ಈ ಬಗ್ಗೆ ನನ್ನಲ್ಲಿದೆ. ನೂರು ಕೋಟಿ ಮಕ್ಕಳನ್ನ ಹೆತ್ತೂ ಕೂಡಾ ತಾಯಿ ಭಾರತಿ ಅನಾಥಳಾಗಿದ್ದಾಳೇನೋ ಅನ್ನೋ ಭಾವ. ತಾನು ತನ್ನ ಮನೆ ಅಂತ ಸ್ವ ಹಿತಾಸಕ್ತಿಗೆ ದೇಶವ ಮರೆತಿರುವ ಪ್ರತಿಯೊಬ್ಬ 'ಭಾರ'ತೀಯನಿಗೆ ಇಲ್ಲಿದೆ ದಿಕ್ಕಾರ..!

 
          ನಮ್ಮಲ್ಲೊಬ್ಬ ಹಿಂದೂ ಇದಾನೆ, ನಮ್ಮಲ್ಲೊಬ್ಬ ಕ್ರಿಶ್ಚಿಯನ್ ಇದಾನೆ.. ಮುಸ್ಲಿಂ, ಸಿಖ್, ಜೈನ್-ಬ್ಹುದ್ದ ನಿದಾನೆ... ಇನ್ನೊಂದೆಡೆ ಕನ್ನಡಿಗನಿದಾನೆ, ಪಂಜಾಬಿ, ತಮಿಳಿಗ, ಮಲಯಾಳಿ, ಬಿಹಾರಿ, ಮರಾಟಿಗನಿದಾನೆ... ಉತ್ತರ (ಭಾರತೀಯ) ದವನಿದಾನೆ, ದಕ್ಷಿಣ (ಭಾರತೀಯ) ದವನಿದಾನೆ... ಬಡವನಿದಾನೆ, ಧನವಂತನಿದಾನೆ. ಆದರೇ... ಭಾರತದಲ್ಲಿ ಭಾರತೀಯನನ್ನ ಎಷ್ಟು ಹುಡುಕಿದರೂ ಭೂತಗಾಜಿನೊಳಗೆ ಅವನ ಚಿತ್ರ ಮೂಡುತಾ ಇಲ್ಲವಲ್ಲಾ!!!? ರಾಷ್ಟ್ರೀಯ ಐಕ್ಯತೆಯ ಅಧಪತನಕ್ಕೆ ನಾಂಧಿ ಹಾಡಿ, ನಮ್ಮತನವ ಎಲ್ಲೋ ಕಳುಹಿಸಿ ಕೊಟ್ಟಿದೀವಲ್ಲಾ?? ಎಲ್ಲೋ ಒಂದು boundary ಹಾಕೊಂಡು ಬದುಕ್ತಾ ಇದಿವೇನೋ ಅಂತ ಅನ್ನಿಸೊತ್ತೆ. ಮನ-ಮನೆ ಗಳ ಮದ್ಯ ಗೆರೆ ಎಳೆದುಕೊಂಡು ಅಮ್ಮನನ್ನೇ ಪಾಲು ಮಾಡ್ಕೊಂಡು ಮಾಡುತಾ ಇರೋ ಈ ಪರಿಯ ಬದುಕು ಅದ್ಯಾವ ಸಾರ್ಥಕತೆಗೂ ಗೊತ್ತಾಗ್ತಾ ಇಲ್ಲಾ..

 
          ಮೊದಲೆನೆಯದಾಗಿ ಇವೆಲ್ಲದರ ಅವಶ್ಯಕತೆ ಅನ್ನೋದು ಇದೆಯಾ? ನಾನು-ನನ್ನದು ಅನ್ನೋದನ್ನ ಬಿಟ್ಟು ಇರೋದು ಅಸಾದ್ಯಾನಾ?? ಬೆತ್ತಲಾಗಿ ಹುಟ್ಟೋ ಕಂದಮ್ಮನಿಗೂ ಜಾತಿ-ಧರ್ಮ ಅನ್ನೋ ಅಂಗಿ ತೊಡಿಸೋ ನೀಚ ಬುದ್ದಿ ನಮ್ಮಲ್ಲಿದೆ ಯಾಕೆ??? ಒಬ್ಬ ವ್ಯಕ್ತಿ ಇಂತಹ ಧರ್ಮದವನು, ಇಂತಹ ಜಾತಿಯವನು ಅಂತ ಹೇಳೋಕೆ ಬಳಸೋ criteria ಆದ್ರೂ ಏನು???? ಮನುಷ್ಯ ತಾನು ಹುಟ್ಟು ಹಾಕಿದ ಸುಳಿಯಲ್ಲಿ ತಾನೇ ಹುಟ್ಟು ಹಿಡಿದು ತನ್ನ ದೋಣಿ ನಡೆಸ್ತಾ ಇದಾನೆ.


          ಒಬ್ಬ ಮಾಡುತ್ತಿದ್ದ ಕೆಲಸಕ್ಕನುಗುಣವಾಗಿ ಶುರುವಾದ ಜಾತಿ ಪದ್ದತಿಯನ್ನು ಇದುವರೆಗೂ ಬೆಳೆಸಿಕೊಂಡು ಬಂದಿರೋದೆ ಒಂದು ಅಸಹ್ಯಕರ ಸಂಗತಿ. ಆಳುವವನು ಕ್ಷತ್ರಿಯ, ನಮ್ಮ-ದೇವರ ನಡುವಿನ ಕೊಂಡಿಯಾದವನು ಬ್ರಾಹ್ಮಣ, ಕೆಳವರ್ಗದ ಕೆಲಸ ಮಾಡುವವ ಕೇಳ ಜಾತಿಯವ ಎಂದು ಜಾರಿಯಾಲ್ಲಿ ತರಲ್ಪಟ್ಟ ಈ ಪದ್ದತಿ ಎಲ್ಲಾ ಧರ್ಮ-ಜಾತಿಯವರು ಎಲ್ಲೆಡೆ ಕೆಲಸ ಮಾಡ್ತಾ ಇರೋ ಈ ಶತಮಾನಕ್ಕೆ ಹೊಂದುತ್ತದೆಯೇ ಎನ್ನೋ ಪ್ರೆಶ್ನೆ ನಮ್ಮನ್ನ ನಾವು ಕೇಳಿಕೊಳ್ಳಬೇಕಾಗಿದೆ. ದೇವರು, ಧರ್ಮಗಳೆಲ್ಲವು ನಮ್ಮಿಂದ ಬಂದಂತಹವೇ ಹೊರತು ಅದರಿಂದ ನಾವು ಬಂದವರಲ್ಲ..

          
          ನೀತಿಗಳಿಲ್ಲದ ನೂರು ಜಾತಿ. ಪ್ರತಿ ಜಾತಿಯಲ್ಲೂ ಹಲವು ಉಪಜಾತಿ, ಪ್ರಜಾತಿಗಳ ರೀತಿ. ಜಾತಿಗೊಂದು ಮಠ, ಎಲ್ಲಾ ಜನಾಂಗಕ್ಕೊಂದೊಂದು ಒಕ್ಕೂಟ.. ಅಬ್ಬಾ.. ಕಾಣದೆ ಇರೋ ದೇವರನ್ನೂ ನೂರು ಹೆಸರಲ್ಲಿ ಕರೆದು ಹಂಚಿಕೊಂಡು ಕುಳಿತುಕೊಂಡಿದಿವಿ. ನಿಜಕ್ಕೂ ಹಂಚಿಕೊಳ್ಳಬೇಕಾಗಿರೋದು ಪ್ರೀತಿ-ವಿಶ್ವಾಸಗಳನ್ನ ಅನ್ನೋದನ್ನ ಮರೆತುಬಿಟ್ಟಿದಿವಿ. ಪಾಲಿಸಬೇಕಾಗಿರೋ ದೊಡ್ಡ ಧರ್ಮ "ಮಾನವ ಧರ್ಮ" ಅಂತ ನಮ್ಮ ಚಿಂತನೆಗೆ ಬರುವಂತೆ ಮಾಡಲು ಅದಿನ್ಯಾವ ಮೆಶಿನ್ನುಗಳು ಹುಟ್ಟಿ ಬರಬೇಕೋ??

          
          'ಗುಡಿ-ಚರ್ಚು-ಮಸೀದಿಗಳ ಬಿಟ್ಟು ಹೊರ ಬನ್ನಿ' ಎಂದು ಎಂದೋ ಹೇಳಿದ ಮಾತುಗಳನ್ನ ಇಂದಿಗೂ ಅನ್ವಯವಾಗೋ ಹಾಗೇ ಜೀವಿಸುತ್ತಿದಿವಿ ಅಂದ್ರೆ ಪ್ರಗತಿಯ ಹಾದಿಯಲ್ಲಿ ನಾವಿಹೆವಾ ಅನ್ನೋ ಅನುಮಾನ ಮೂಡದೇ ಇರೋಲ್ಲ. ನಮ್ಮಲ್ಲೊಂದು ಸಹಬಾಳ್ವೆಯ ಯೋಚನೆಗೆ ಧಕ್ಕೆ ತರುವಂತಹ ಇಂತಹ ಹೀನ ವ್ಯವಸ್ಥೆ ನಮಗೆ ಬೇಕಾ??..


          ಭಾಷೆಗಳ ಬಗ್ಗೆ ಹೇಳಬೇಕಂದರೆ ನಮ್ಮದು ಸಂಸ್ಕೃತಿ-ಸುಧೆಯು ಸಮೃದ್ದವಾಗಿ ತುಂಬಿರುವಂತಹ ನಾಡು. ಭಾಷೆ ಅನ್ನೋದು ನಮ್ಮ ನಮ್ಮಗಳ ನಡುವಿನ ಭಾವಾಭಿನಯಕ್ಕೊಂದು ಅರ್ಥ ಕೊಟ್ಟು, ವ್ಯವಹರಿಸುವ ಸಲುವಾಗಿ ಹುಟ್ಟಿಕೊಂಡ ಮಾಧ್ಯಮ. ಭಾಷಾವಾರು ರಾಜ್ಯ ವಿಂಗಡಣೆಯಾಗಿರೋದೂ ಕೂಡಾ ಆಯಾ ರಾಜ್ಯಗಳ ಆಡಳಿತ ಯಾವುದೇ ಗೊಂದಲಗಳಿಲ್ಲದೆ ನಡೆಯುವ ಸಲುವಾಗಿಯೇ. ಆದರೆ ರಾಜ್ಯಾಡಳಿತದ ಹಿತಕ್ಕಾಗಿ ಎಳೆದ ರೇಖೆಯ ಮೇಲೆ ಬೇಲಿಎಬ್ಬಿಸಿ ಮನೆಯೊಳಗೇ ಪರರಂತೆ ಬದುಕುತ್ತಾ ಇರೋದು ಮಾತ್ರ ವಿಪರ್ಯಾಸವೇ ಸರಿ. ದೇಶದ ಹೊರಗಿನ ಕದನಕ್ಕಿಂತ ಹೆಚ್ಚಾಗಿ ಒಳಗೇ ಕಿತ್ತಾಡುತ್ತಾ ಇರೋದು ದೇಶಕ್ಕಂತೂ ಶೋಭೆ ಅಲ್ಲ.


          ಇನ್ನ ಈವೆರಡು ದಾಳಗಳನ್ನ ಉಪಯೋಗಿಸಿಕೊಂಡು ಬ್ರಿಟೀಷರ 'ಒಡೆದು ಆಳೋ' ನೀತಿಯನ್ನ ಚಾಚೂ ತಪ್ಪದೆ ಪಾಲಿಸಿಕೊಂಡು, ನಮ್ಮೊಳಗೇ ಕಿಡಿ ಹಚ್ಚಿ ಆ ಬೆಂಕಿಯಲ್ಲೇ ಬೇಳೆ ಬೇಯಿಸಿ ಪಾಯಸವ ಮಾಡಿ ಹೀರ್ತಾ ಇರೋ ನಮ್ಮ ರಾಜಕಾರಣಿಗಳನ್ನ ಇಲ್ಲಿ ನೆನೆಯದಿದ್ದರೆ ಆದೀತೆ??  


           ರಾಜಕಾರಣ ಎಂಬ ಪದ ಹೇಗೆ ಬಂತೋ ಗೊತ್ತಿಲ್ಲ. ಆದರೆ ನಮ್ಮ 'ರಾಜ' ಬರೀ 'ಕಾರಣ' ಹೇಳ್ಕೊಂಡು ಕೂತಿರೋದು ಆ ಪದವನ್ನ ಬೇರೊಂದು ರೀತಿಯಲ್ಲಿ ಅರ್ಥೈಸೋಕೆ ಅನುವು ಮಾಡಿ ಕೊಡ್ತಾ ಇದೆ. ಪ್ರಜಾಪ್ರಭುತ್ವದ ಹೊಸ updated definition ಹೀಗೆ ಕೊಡಬಹುದೇನೋ...

"ಪ್ರಜೆಗಳಿಂದ (ವೋಟು ಲೂಟಿ), ಪ್ರಜೆಗಳಿಗಾಗಿ (ಅವರ ಹಣ, ಮನೆ, ಆಸ್ತಿಗಾಗಿ), ಪ್ರಜೆಗಳಿಗೋಸ್ಕರ (ಮಾಡಿದ್ದುಣ್ಣೋ ಮಹರಾಯ ಅನ್ನೋ ಹಾಗೇ ತಾ (ವೋಟು) ಮಾಡಿದ್ದು ತನ (ಅಳಿವಿ) ಗೊಸ್ಕರಾನೇ) ನಡೆಸೋ ರಾಜ್ಯ 'ಭಾರ' ".

          ಅಧಿಕಾರಕ್ಕೆ ಬಂದ ಕೆಲವೇ ದಿನಗಳಲ್ಲಿ ಕೋಟಿಗಟ್ಟಲೆ ಹಣ ಮಾಡಿ. ಜಾತಿ ರಾಜಕಾರಣ, ವೋಟು ಬ್ಯಾಂಕ್ ಹೆಸರಲ್ಲಿ ನಮ್ಮೊಳಗೇ ದ್ವೇಷದ ಗೋಡೆ ಕಟ್ಟಿ, ತಾನು ನೆಮ್ಮದಿ ಇಂದ ಇರೋ ಇಂತಹ ರಾಜಕಾರಣ ಯಾವ ಪುರುಷಾರ್ಥಕ್ಕೆ ಬೇಕು? ಸಂಸತ್ತಿನಲ್ಲಿ, ವಿಧಾನಸಭೆಗಳಲ್ಲಿ ಇವರುಗಳು ಮಾಡ್ತಿರೋದಾದ್ರು ಏನು?? ಆಡಳಿತ ಪಕ್ಷ ಮಾಡೋ ಪ್ರತಿ ಕೆಲಸಕ್ಕೂ (ಒಳ್ಳೆಯದೋ, ಕೆಟ್ಟದ್ದೋ) ಅಡ್ಡಗಾಲು ಹಾಕೋದೆ ನಮ್ಮ ಕೆಲಸ ಅಂದ್ಕೊಂಡು ಕುಳಿತಿರೋ ವಿರೋಧ ಪಕ್ಷಗಳು ದೇಶದ ಏನು ಹಿತ ಕಾಯೋಕೆ ಸಾದ್ಯ??? ಎರಡೂ
(ಆಡಳಿತ ಮತ್ತು ವಿರೋಧ) ಪಕ್ಷಗಳು ದೇಶದ ಒಳಿತಿಗೆ ಒಗ್ಗೂಡಿ ದುಡಿಯೋದು ಬಿಟ್ಟು ಒಬ್ಬರ ಕಾಲನ್ನೊಬ್ಬರು ಎಳಿಯೋದೆ ಕೆಲಸ..., ಆಡಳಿತ, ಅಧಿಕಾರ ಇದ್ರೆ ಮಾತ್ರ ಸುಖವೆನ್ನೋ ಮನೋಭಾವನೆಯಲ್ಲಿದ್ದರೆ ದೇಶದ ಪ್ರಗತಿ ಎತ್ತಣ ಸಾಗೀತು?? ಒಂದು ಪಕ್ಷದ ಉತ್ತಮ ಕಾರ್ಯಗಳನ್ನ ಉಳಿದೆಲ್ಲ ಪಕ್ಷಗಳು ಎದ್ದು ನಿಂತು ಕೈಗೂಡಿಸಿ ಸಹಕರಿಸೋ ದಿನಗಳು ಬರುವುದಾದರೂ ಎಂದು??? ಪ್ರೆಶ್ನೆಗಳ ಮೇಲೆ ಪ್ರೆಶ್ನೆಗಳೇ ಕುಣಿದಾಡುತ್ತಾವೆ ಹೊರತು ಉತ್ತರಿಸೋರನ್ನ ಕೈಗೆ ಸಿಗದ ಜಾಗದಲ್ಲಿ ನಾವೇ ಹೊತ್ತು ಕುಳ್ಳರಿಸಿದ್ದೇವೆ.
          
          ಹಿಂದೊಮ್ಮೆ ಎಲ್ಲೋ ಕೇಳಿದ ಸಾಲುಗಳಿವು..
ಅಮೆರಿಕಾಗೆ ಹೋದರೆ ಅಮೆರಿಕನ್ ಸಿಗುವನಂತೆ..
ಆಫ್ರಿಕಾಗೆ ಹೋದ್ರೆ african ಸಿಗುವನಂತೆ..
ಚೀನಾ ಗೆ ಹೋದ್ರೆ ಚೀನೀ ಸಿಗ್ತಾನಂತೆ...  ಆದ್ರೆ...
ಭಾರತಕ್ಕೆ ಬಂದ್ರೆ ಒಬ್ಬ ಕನ್ನಡಿಗ, ಒಬ್ಬ ಪಂಜಾಬಿ, ಒಬ್ಬ ಬಿಹಾರಿ, ಒಬ್ಬ ಮಲಯಾಳಿ ಸಿಗ್ತಾನಂತೆ.. ಅಂದ್ರೆ ನಮ್ಮಲ್ಲಿ ನಾವು ಭಾರತೀಯನನ್ನ ಹುಡುಕೋದು ಯಾವಾಗ??.. ಭಾಷಾ ಪ್ರೇಮ ಇರಲಿ.. ಭಾಷಾಂದತೆ ಬೇಡ. ನಮ್ಮ ಭಾಷೆಯ ಪ್ರೀತ್ಸೋಣ. ಇತರ ಭಾಷೆಗಳನ್ನೂ ಗೌರವಿಸೋಣ. ಭಾಷೆಗಳ ಹೆಸರಲ್ಲಿ ಕಿತ್ತಾಟ ತರವಲ್ಲಾ. ಕಲೆ-ಸಂಸ್ಕೃತಿಯ ಗುರುತಾದ ಭಾಷೆಯು ನಮ್ಮಲ್ಲಿನ ವೈವಿದ್ಯಥೆಯ ಸಿರಿಯಾಗಿರಲಿ ಹೊರತು ನಮ್ಮಗಳನ್ನ ವಿಧ ವಿಧವಾಗಿ ವಿಭಾಗಿಸೋ ಹೊರೆಯಾಗಲ್ಲ.. ಗಡಿ-ಗೆರೆಗಳ ನೆಪದಲ್ಲಿ ತಾಯಿ ಭರತೆಯನ್ನ ಚೂರು ಚೂರು ಮಾಡೋ ಮನಸ್ಯಾಕೆ...?? ಹಾಗೆಯೇ ಜಾತೀಯತೆಯನ್ನ ಮರೆತು ಮೆರೆಯೋ ಕಾಲವನ್ನ ಭಾರತಕ್ಕೆ ತಂದುಕೊಡಬಾರದ್ಯಾಕೆ?? ದೇಶದಂತಹ ದೇಶವೇ ಮಕ್ಕಳನ್ನ ಜಾತಿ-ಭಾಷೆಗಳ ಹೆಸರಲ್ಲಿ ಮುಳುಗಿಸದೆ ಸಲಹುತ್ತಿರೋವಾಗ ನಾವುಗಳೇಕೆ ನಮ್ಮಲ್ಲಿನ ಅಭಿಮಾನಗಳನ್ನ ಈ ಅಂದತೆಯೊಳಗೆ ಹೂತಿಡ್ತಾ ಇದೀವಿ..?


ದೇಶಕ್ಕಾಗಿ ನನ್ನ ಕೊಡುಗೆ ಏನು ಎಂಬುದರ ಉತ್ತರವನ್ನ ಕಾರ್ಯೋನ್ಮುಖರಾಗಿ ನೀಡಬೇಕಾಗಿದೆ... ದೇಶ  ಬಯಸೋದು ಇದನ್ನೇ.. ಉತ್ತರಕ್ಕಾಗಿ ದೇಶ ಕೂಡಾ ಕಾಯ್ತಾ ಇದೆ...


ಭಿನ್ನ ಭಿನ್ನತೆಯ ಕನಸು..
ಭಿನ್ನವದು ದಾರಿ,
ಒಮ್ಮರದ ಎಲೆಗಳಾಗಿ ಒಂದೆಡೆಯೇ ಬೇರೂರಿ..
ಅರಿವಿನಲೆಗೆ ಮನದ ತೆನೆ-ತೆನೆಯು ಕುದುರಿ,
ಬನ್ನಿ ಚಿಗುರೆಲೆಗಳೇ, ಹೊಸತನದ ಕರೆಗೆ..
ಗುರುತುಳಿವ ಹೆಜ್ಜೆ ಇಡುವ,
ಮಾನವತೆ, ಸಮಾನತೆ, ಪರಿಪೂರ್ಣತೆಯ ಊರ ಕಡೆಗೆ...
ವಂದೇ ಮಾತರಂ 


- ರೋಹಿತ್

ಚಿತ್ರಕೃಪೆ: 
೧. http://media.photobucket.com/image/india+flag+/masseybros/india-flag.jpg
೨. https://blogger.googleusercontent.com/img/b/R29vZ2xl/AVvXsEhmzER1DNujuNeEGqLfkAXH7aqI4GgE07hl7PYEVyhtX932vH2RG0J5scKr_TmTiD8g4AlrE0zJ7RNt-Cwb10U5XM5YwNLP6sThmc10dQIwsn8KJMgnnI68vXeKbc1-2Z5Qi6Ls7VC05uJs/s1600/26170.jpg
೩. http://www.vandeindia.com/wp-content/uploads/2008/08/the-proud-indian-flag.jpg

Wednesday, February 9, 2011

SOME- ಶೋಧಕರಿಗೆ..


ಹಗಲೆಂಬುದಿಲ್ಲ, ಇರುಳೆ೦ಬುದಿಲ್ಲ ..
ಸಮಯಕ್ಕೆ ಊಟ-ತಿಂಡಿ ಮೊದಲೇ ಇಲ್ಲ..
ಸ್ವಂತ ಬದುಕನ್ನಾ ಮರೆತೇ ಬಿಟ್ಟೆವಲ್ಲಾ...??!
SMS - ಫೇಸ್ ಬುಕ್ ಒಳಗೆ ಅಡಗಿ ಕೂತವರೆಲ್ಲ... ಇಂದು ಬೆನ್ನು ತಿರುಗಿಸಿ ನೋಡಲಿಕ್ಕೂ ಪುರುಸೊತ್ತಿಲ್ಲವಲ್ಲಾ?..
SOME -ಶೋಧಿಸೋ ಸನ್ಯಾಸಿ ಮಹಾವರ್ಯರೆಲ್ಲ,
ನಿಮಗೂ ಬದುಕಿದೆ ವಸಿ ಬದುಕಿ ನೋಡಿರಲ್ಲಾ...?


                                                          - ರೋಹಿತ್ 
ಚಿತ್ರ ಕೃಪೆ: http://yay-jj.blogspot.com/2009/10/my-woot-shirt-collection.html
 

ಕಾದು ನೋಡಿ

ಹೊಸ ಅಂಕಣ...

"ತೀರ"


ಆತ್ಮೀಯ ಒಡನಾಡಿಗಳೇ,


೨೦೧೦-೨೦೧೧ ನೇ ಸಾಲಿನ ಹಿರಿಯ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದ ವಿಶೇಷವಾಗಿ ಮಾಡಲ್ಪಟ್ಟ "ತೀರ" ಎಂಬ ವೀಡಿಯೋ ತುಣುಕನ್ನು ಈ ಮೂಲಕ ನಮ್ಮ ಬ್ಲಾಗ್ ನಲ್ಲಿ upload ಮಾಡುತ್ತಿದ್ದೇವೆ. ನಮ್ಮ ವಿಭಾಗದಲ್ಲಿನ ದಿನಗಳ ನೆನಪನ್ನ ಮತ್ತೆ ನಿಮ್ಮಲ್ಲಿಗೆ ತರುವಂತಹ ಒಂದು ಪುಟ್ಟ ಪ್ರಯತ್ನವು ಇದಾಗಿದ್ದು, ನಿಮ್ಮೆಲ್ಲರ ಮೆಚ್ಚುಗೆಗೆ ಪಾತ್ರವಾಗುತ್ತದೆ ಎಂದು ನಂಬಿದ್ದೇವೆ.


ನಿಮ್ಮ ಪ್ರತಿಯೊಂದು ಅನಿಸಿಕೆಗಳಿಗೂ ಆದರದ ಸ್ವಾಗತ.



ಈ ವೀಡಿಯೊ ತುಣುಕನ್ನು ತಯಾರಿಸಲು ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಸಹಕರಿಸಿದ ಪ್ರತಿಯೋರ್ವರಿಗೂ ಈ ಮೂಲಕ ಧನ್ಯವಾದವನ್ನು ಅರ್ಪಿಸುತ್ತೇವೆ.


- ರೋಹಿತ್

ತೀರ ಭಾಗ - 1

ತೀರ ಭಾಗ - 2

ತೀರ ಭಾಗ - 3

ನನ್ನ ಬೆರಳಿನೊಡನೆ ಆಡಿದ ಕನಯ್ಯ...

ನನ್ನ ಬೆರಳಿನೊಡನೆ ಆಡಿದ ಕನಯ್ಯ...