Tuesday, February 15, 2011

ದೇಶ ಕಾಯ್ತಾ ಇದೆ...


ಈ ದೇಶದ ಮೇಲೆ ನನಗೊಂಥರಹದ ವಿಚಿತ್ರ ಪ್ರೀತಿ ಇದೆ. ಆದರೆ ಅದೇ ಪ್ರೀತಿ ಈ ದೇಶದ ನನ್ನ ಜನರ ಮೇಲೆ ಇಲ್ಲಾ!! ಖಂಡಿತವಾಗಿಯೂ ಒಂದು ಕೆಟ್ಟ ನೋವು ಈ ಬಗ್ಗೆ ನನ್ನಲ್ಲಿದೆ. ನೂರು ಕೋಟಿ ಮಕ್ಕಳನ್ನ ಹೆತ್ತೂ ಕೂಡಾ ತಾಯಿ ಭಾರತಿ ಅನಾಥಳಾಗಿದ್ದಾಳೇನೋ ಅನ್ನೋ ಭಾವ. ತಾನು ತನ್ನ ಮನೆ ಅಂತ ಸ್ವ ಹಿತಾಸಕ್ತಿಗೆ ದೇಶವ ಮರೆತಿರುವ ಪ್ರತಿಯೊಬ್ಬ 'ಭಾರ'ತೀಯನಿಗೆ ಇಲ್ಲಿದೆ ದಿಕ್ಕಾರ..!

 
          ನಮ್ಮಲ್ಲೊಬ್ಬ ಹಿಂದೂ ಇದಾನೆ, ನಮ್ಮಲ್ಲೊಬ್ಬ ಕ್ರಿಶ್ಚಿಯನ್ ಇದಾನೆ.. ಮುಸ್ಲಿಂ, ಸಿಖ್, ಜೈನ್-ಬ್ಹುದ್ದ ನಿದಾನೆ... ಇನ್ನೊಂದೆಡೆ ಕನ್ನಡಿಗನಿದಾನೆ, ಪಂಜಾಬಿ, ತಮಿಳಿಗ, ಮಲಯಾಳಿ, ಬಿಹಾರಿ, ಮರಾಟಿಗನಿದಾನೆ... ಉತ್ತರ (ಭಾರತೀಯ) ದವನಿದಾನೆ, ದಕ್ಷಿಣ (ಭಾರತೀಯ) ದವನಿದಾನೆ... ಬಡವನಿದಾನೆ, ಧನವಂತನಿದಾನೆ. ಆದರೇ... ಭಾರತದಲ್ಲಿ ಭಾರತೀಯನನ್ನ ಎಷ್ಟು ಹುಡುಕಿದರೂ ಭೂತಗಾಜಿನೊಳಗೆ ಅವನ ಚಿತ್ರ ಮೂಡುತಾ ಇಲ್ಲವಲ್ಲಾ!!!? ರಾಷ್ಟ್ರೀಯ ಐಕ್ಯತೆಯ ಅಧಪತನಕ್ಕೆ ನಾಂಧಿ ಹಾಡಿ, ನಮ್ಮತನವ ಎಲ್ಲೋ ಕಳುಹಿಸಿ ಕೊಟ್ಟಿದೀವಲ್ಲಾ?? ಎಲ್ಲೋ ಒಂದು boundary ಹಾಕೊಂಡು ಬದುಕ್ತಾ ಇದಿವೇನೋ ಅಂತ ಅನ್ನಿಸೊತ್ತೆ. ಮನ-ಮನೆ ಗಳ ಮದ್ಯ ಗೆರೆ ಎಳೆದುಕೊಂಡು ಅಮ್ಮನನ್ನೇ ಪಾಲು ಮಾಡ್ಕೊಂಡು ಮಾಡುತಾ ಇರೋ ಈ ಪರಿಯ ಬದುಕು ಅದ್ಯಾವ ಸಾರ್ಥಕತೆಗೂ ಗೊತ್ತಾಗ್ತಾ ಇಲ್ಲಾ..

 
          ಮೊದಲೆನೆಯದಾಗಿ ಇವೆಲ್ಲದರ ಅವಶ್ಯಕತೆ ಅನ್ನೋದು ಇದೆಯಾ? ನಾನು-ನನ್ನದು ಅನ್ನೋದನ್ನ ಬಿಟ್ಟು ಇರೋದು ಅಸಾದ್ಯಾನಾ?? ಬೆತ್ತಲಾಗಿ ಹುಟ್ಟೋ ಕಂದಮ್ಮನಿಗೂ ಜಾತಿ-ಧರ್ಮ ಅನ್ನೋ ಅಂಗಿ ತೊಡಿಸೋ ನೀಚ ಬುದ್ದಿ ನಮ್ಮಲ್ಲಿದೆ ಯಾಕೆ??? ಒಬ್ಬ ವ್ಯಕ್ತಿ ಇಂತಹ ಧರ್ಮದವನು, ಇಂತಹ ಜಾತಿಯವನು ಅಂತ ಹೇಳೋಕೆ ಬಳಸೋ criteria ಆದ್ರೂ ಏನು???? ಮನುಷ್ಯ ತಾನು ಹುಟ್ಟು ಹಾಕಿದ ಸುಳಿಯಲ್ಲಿ ತಾನೇ ಹುಟ್ಟು ಹಿಡಿದು ತನ್ನ ದೋಣಿ ನಡೆಸ್ತಾ ಇದಾನೆ.


          ಒಬ್ಬ ಮಾಡುತ್ತಿದ್ದ ಕೆಲಸಕ್ಕನುಗುಣವಾಗಿ ಶುರುವಾದ ಜಾತಿ ಪದ್ದತಿಯನ್ನು ಇದುವರೆಗೂ ಬೆಳೆಸಿಕೊಂಡು ಬಂದಿರೋದೆ ಒಂದು ಅಸಹ್ಯಕರ ಸಂಗತಿ. ಆಳುವವನು ಕ್ಷತ್ರಿಯ, ನಮ್ಮ-ದೇವರ ನಡುವಿನ ಕೊಂಡಿಯಾದವನು ಬ್ರಾಹ್ಮಣ, ಕೆಳವರ್ಗದ ಕೆಲಸ ಮಾಡುವವ ಕೇಳ ಜಾತಿಯವ ಎಂದು ಜಾರಿಯಾಲ್ಲಿ ತರಲ್ಪಟ್ಟ ಈ ಪದ್ದತಿ ಎಲ್ಲಾ ಧರ್ಮ-ಜಾತಿಯವರು ಎಲ್ಲೆಡೆ ಕೆಲಸ ಮಾಡ್ತಾ ಇರೋ ಈ ಶತಮಾನಕ್ಕೆ ಹೊಂದುತ್ತದೆಯೇ ಎನ್ನೋ ಪ್ರೆಶ್ನೆ ನಮ್ಮನ್ನ ನಾವು ಕೇಳಿಕೊಳ್ಳಬೇಕಾಗಿದೆ. ದೇವರು, ಧರ್ಮಗಳೆಲ್ಲವು ನಮ್ಮಿಂದ ಬಂದಂತಹವೇ ಹೊರತು ಅದರಿಂದ ನಾವು ಬಂದವರಲ್ಲ..

          
          ನೀತಿಗಳಿಲ್ಲದ ನೂರು ಜಾತಿ. ಪ್ರತಿ ಜಾತಿಯಲ್ಲೂ ಹಲವು ಉಪಜಾತಿ, ಪ್ರಜಾತಿಗಳ ರೀತಿ. ಜಾತಿಗೊಂದು ಮಠ, ಎಲ್ಲಾ ಜನಾಂಗಕ್ಕೊಂದೊಂದು ಒಕ್ಕೂಟ.. ಅಬ್ಬಾ.. ಕಾಣದೆ ಇರೋ ದೇವರನ್ನೂ ನೂರು ಹೆಸರಲ್ಲಿ ಕರೆದು ಹಂಚಿಕೊಂಡು ಕುಳಿತುಕೊಂಡಿದಿವಿ. ನಿಜಕ್ಕೂ ಹಂಚಿಕೊಳ್ಳಬೇಕಾಗಿರೋದು ಪ್ರೀತಿ-ವಿಶ್ವಾಸಗಳನ್ನ ಅನ್ನೋದನ್ನ ಮರೆತುಬಿಟ್ಟಿದಿವಿ. ಪಾಲಿಸಬೇಕಾಗಿರೋ ದೊಡ್ಡ ಧರ್ಮ "ಮಾನವ ಧರ್ಮ" ಅಂತ ನಮ್ಮ ಚಿಂತನೆಗೆ ಬರುವಂತೆ ಮಾಡಲು ಅದಿನ್ಯಾವ ಮೆಶಿನ್ನುಗಳು ಹುಟ್ಟಿ ಬರಬೇಕೋ??

          
          'ಗುಡಿ-ಚರ್ಚು-ಮಸೀದಿಗಳ ಬಿಟ್ಟು ಹೊರ ಬನ್ನಿ' ಎಂದು ಎಂದೋ ಹೇಳಿದ ಮಾತುಗಳನ್ನ ಇಂದಿಗೂ ಅನ್ವಯವಾಗೋ ಹಾಗೇ ಜೀವಿಸುತ್ತಿದಿವಿ ಅಂದ್ರೆ ಪ್ರಗತಿಯ ಹಾದಿಯಲ್ಲಿ ನಾವಿಹೆವಾ ಅನ್ನೋ ಅನುಮಾನ ಮೂಡದೇ ಇರೋಲ್ಲ. ನಮ್ಮಲ್ಲೊಂದು ಸಹಬಾಳ್ವೆಯ ಯೋಚನೆಗೆ ಧಕ್ಕೆ ತರುವಂತಹ ಇಂತಹ ಹೀನ ವ್ಯವಸ್ಥೆ ನಮಗೆ ಬೇಕಾ??..


          ಭಾಷೆಗಳ ಬಗ್ಗೆ ಹೇಳಬೇಕಂದರೆ ನಮ್ಮದು ಸಂಸ್ಕೃತಿ-ಸುಧೆಯು ಸಮೃದ್ದವಾಗಿ ತುಂಬಿರುವಂತಹ ನಾಡು. ಭಾಷೆ ಅನ್ನೋದು ನಮ್ಮ ನಮ್ಮಗಳ ನಡುವಿನ ಭಾವಾಭಿನಯಕ್ಕೊಂದು ಅರ್ಥ ಕೊಟ್ಟು, ವ್ಯವಹರಿಸುವ ಸಲುವಾಗಿ ಹುಟ್ಟಿಕೊಂಡ ಮಾಧ್ಯಮ. ಭಾಷಾವಾರು ರಾಜ್ಯ ವಿಂಗಡಣೆಯಾಗಿರೋದೂ ಕೂಡಾ ಆಯಾ ರಾಜ್ಯಗಳ ಆಡಳಿತ ಯಾವುದೇ ಗೊಂದಲಗಳಿಲ್ಲದೆ ನಡೆಯುವ ಸಲುವಾಗಿಯೇ. ಆದರೆ ರಾಜ್ಯಾಡಳಿತದ ಹಿತಕ್ಕಾಗಿ ಎಳೆದ ರೇಖೆಯ ಮೇಲೆ ಬೇಲಿಎಬ್ಬಿಸಿ ಮನೆಯೊಳಗೇ ಪರರಂತೆ ಬದುಕುತ್ತಾ ಇರೋದು ಮಾತ್ರ ವಿಪರ್ಯಾಸವೇ ಸರಿ. ದೇಶದ ಹೊರಗಿನ ಕದನಕ್ಕಿಂತ ಹೆಚ್ಚಾಗಿ ಒಳಗೇ ಕಿತ್ತಾಡುತ್ತಾ ಇರೋದು ದೇಶಕ್ಕಂತೂ ಶೋಭೆ ಅಲ್ಲ.


          ಇನ್ನ ಈವೆರಡು ದಾಳಗಳನ್ನ ಉಪಯೋಗಿಸಿಕೊಂಡು ಬ್ರಿಟೀಷರ 'ಒಡೆದು ಆಳೋ' ನೀತಿಯನ್ನ ಚಾಚೂ ತಪ್ಪದೆ ಪಾಲಿಸಿಕೊಂಡು, ನಮ್ಮೊಳಗೇ ಕಿಡಿ ಹಚ್ಚಿ ಆ ಬೆಂಕಿಯಲ್ಲೇ ಬೇಳೆ ಬೇಯಿಸಿ ಪಾಯಸವ ಮಾಡಿ ಹೀರ್ತಾ ಇರೋ ನಮ್ಮ ರಾಜಕಾರಣಿಗಳನ್ನ ಇಲ್ಲಿ ನೆನೆಯದಿದ್ದರೆ ಆದೀತೆ??  


           ರಾಜಕಾರಣ ಎಂಬ ಪದ ಹೇಗೆ ಬಂತೋ ಗೊತ್ತಿಲ್ಲ. ಆದರೆ ನಮ್ಮ 'ರಾಜ' ಬರೀ 'ಕಾರಣ' ಹೇಳ್ಕೊಂಡು ಕೂತಿರೋದು ಆ ಪದವನ್ನ ಬೇರೊಂದು ರೀತಿಯಲ್ಲಿ ಅರ್ಥೈಸೋಕೆ ಅನುವು ಮಾಡಿ ಕೊಡ್ತಾ ಇದೆ. ಪ್ರಜಾಪ್ರಭುತ್ವದ ಹೊಸ updated definition ಹೀಗೆ ಕೊಡಬಹುದೇನೋ...

"ಪ್ರಜೆಗಳಿಂದ (ವೋಟು ಲೂಟಿ), ಪ್ರಜೆಗಳಿಗಾಗಿ (ಅವರ ಹಣ, ಮನೆ, ಆಸ್ತಿಗಾಗಿ), ಪ್ರಜೆಗಳಿಗೋಸ್ಕರ (ಮಾಡಿದ್ದುಣ್ಣೋ ಮಹರಾಯ ಅನ್ನೋ ಹಾಗೇ ತಾ (ವೋಟು) ಮಾಡಿದ್ದು ತನ (ಅಳಿವಿ) ಗೊಸ್ಕರಾನೇ) ನಡೆಸೋ ರಾಜ್ಯ 'ಭಾರ' ".

          ಅಧಿಕಾರಕ್ಕೆ ಬಂದ ಕೆಲವೇ ದಿನಗಳಲ್ಲಿ ಕೋಟಿಗಟ್ಟಲೆ ಹಣ ಮಾಡಿ. ಜಾತಿ ರಾಜಕಾರಣ, ವೋಟು ಬ್ಯಾಂಕ್ ಹೆಸರಲ್ಲಿ ನಮ್ಮೊಳಗೇ ದ್ವೇಷದ ಗೋಡೆ ಕಟ್ಟಿ, ತಾನು ನೆಮ್ಮದಿ ಇಂದ ಇರೋ ಇಂತಹ ರಾಜಕಾರಣ ಯಾವ ಪುರುಷಾರ್ಥಕ್ಕೆ ಬೇಕು? ಸಂಸತ್ತಿನಲ್ಲಿ, ವಿಧಾನಸಭೆಗಳಲ್ಲಿ ಇವರುಗಳು ಮಾಡ್ತಿರೋದಾದ್ರು ಏನು?? ಆಡಳಿತ ಪಕ್ಷ ಮಾಡೋ ಪ್ರತಿ ಕೆಲಸಕ್ಕೂ (ಒಳ್ಳೆಯದೋ, ಕೆಟ್ಟದ್ದೋ) ಅಡ್ಡಗಾಲು ಹಾಕೋದೆ ನಮ್ಮ ಕೆಲಸ ಅಂದ್ಕೊಂಡು ಕುಳಿತಿರೋ ವಿರೋಧ ಪಕ್ಷಗಳು ದೇಶದ ಏನು ಹಿತ ಕಾಯೋಕೆ ಸಾದ್ಯ??? ಎರಡೂ
(ಆಡಳಿತ ಮತ್ತು ವಿರೋಧ) ಪಕ್ಷಗಳು ದೇಶದ ಒಳಿತಿಗೆ ಒಗ್ಗೂಡಿ ದುಡಿಯೋದು ಬಿಟ್ಟು ಒಬ್ಬರ ಕಾಲನ್ನೊಬ್ಬರು ಎಳಿಯೋದೆ ಕೆಲಸ..., ಆಡಳಿತ, ಅಧಿಕಾರ ಇದ್ರೆ ಮಾತ್ರ ಸುಖವೆನ್ನೋ ಮನೋಭಾವನೆಯಲ್ಲಿದ್ದರೆ ದೇಶದ ಪ್ರಗತಿ ಎತ್ತಣ ಸಾಗೀತು?? ಒಂದು ಪಕ್ಷದ ಉತ್ತಮ ಕಾರ್ಯಗಳನ್ನ ಉಳಿದೆಲ್ಲ ಪಕ್ಷಗಳು ಎದ್ದು ನಿಂತು ಕೈಗೂಡಿಸಿ ಸಹಕರಿಸೋ ದಿನಗಳು ಬರುವುದಾದರೂ ಎಂದು??? ಪ್ರೆಶ್ನೆಗಳ ಮೇಲೆ ಪ್ರೆಶ್ನೆಗಳೇ ಕುಣಿದಾಡುತ್ತಾವೆ ಹೊರತು ಉತ್ತರಿಸೋರನ್ನ ಕೈಗೆ ಸಿಗದ ಜಾಗದಲ್ಲಿ ನಾವೇ ಹೊತ್ತು ಕುಳ್ಳರಿಸಿದ್ದೇವೆ.
          
          ಹಿಂದೊಮ್ಮೆ ಎಲ್ಲೋ ಕೇಳಿದ ಸಾಲುಗಳಿವು..
ಅಮೆರಿಕಾಗೆ ಹೋದರೆ ಅಮೆರಿಕನ್ ಸಿಗುವನಂತೆ..
ಆಫ್ರಿಕಾಗೆ ಹೋದ್ರೆ african ಸಿಗುವನಂತೆ..
ಚೀನಾ ಗೆ ಹೋದ್ರೆ ಚೀನೀ ಸಿಗ್ತಾನಂತೆ...  ಆದ್ರೆ...
ಭಾರತಕ್ಕೆ ಬಂದ್ರೆ ಒಬ್ಬ ಕನ್ನಡಿಗ, ಒಬ್ಬ ಪಂಜಾಬಿ, ಒಬ್ಬ ಬಿಹಾರಿ, ಒಬ್ಬ ಮಲಯಾಳಿ ಸಿಗ್ತಾನಂತೆ.. ಅಂದ್ರೆ ನಮ್ಮಲ್ಲಿ ನಾವು ಭಾರತೀಯನನ್ನ ಹುಡುಕೋದು ಯಾವಾಗ??.. ಭಾಷಾ ಪ್ರೇಮ ಇರಲಿ.. ಭಾಷಾಂದತೆ ಬೇಡ. ನಮ್ಮ ಭಾಷೆಯ ಪ್ರೀತ್ಸೋಣ. ಇತರ ಭಾಷೆಗಳನ್ನೂ ಗೌರವಿಸೋಣ. ಭಾಷೆಗಳ ಹೆಸರಲ್ಲಿ ಕಿತ್ತಾಟ ತರವಲ್ಲಾ. ಕಲೆ-ಸಂಸ್ಕೃತಿಯ ಗುರುತಾದ ಭಾಷೆಯು ನಮ್ಮಲ್ಲಿನ ವೈವಿದ್ಯಥೆಯ ಸಿರಿಯಾಗಿರಲಿ ಹೊರತು ನಮ್ಮಗಳನ್ನ ವಿಧ ವಿಧವಾಗಿ ವಿಭಾಗಿಸೋ ಹೊರೆಯಾಗಲ್ಲ.. ಗಡಿ-ಗೆರೆಗಳ ನೆಪದಲ್ಲಿ ತಾಯಿ ಭರತೆಯನ್ನ ಚೂರು ಚೂರು ಮಾಡೋ ಮನಸ್ಯಾಕೆ...?? ಹಾಗೆಯೇ ಜಾತೀಯತೆಯನ್ನ ಮರೆತು ಮೆರೆಯೋ ಕಾಲವನ್ನ ಭಾರತಕ್ಕೆ ತಂದುಕೊಡಬಾರದ್ಯಾಕೆ?? ದೇಶದಂತಹ ದೇಶವೇ ಮಕ್ಕಳನ್ನ ಜಾತಿ-ಭಾಷೆಗಳ ಹೆಸರಲ್ಲಿ ಮುಳುಗಿಸದೆ ಸಲಹುತ್ತಿರೋವಾಗ ನಾವುಗಳೇಕೆ ನಮ್ಮಲ್ಲಿನ ಅಭಿಮಾನಗಳನ್ನ ಈ ಅಂದತೆಯೊಳಗೆ ಹೂತಿಡ್ತಾ ಇದೀವಿ..?


ದೇಶಕ್ಕಾಗಿ ನನ್ನ ಕೊಡುಗೆ ಏನು ಎಂಬುದರ ಉತ್ತರವನ್ನ ಕಾರ್ಯೋನ್ಮುಖರಾಗಿ ನೀಡಬೇಕಾಗಿದೆ... ದೇಶ  ಬಯಸೋದು ಇದನ್ನೇ.. ಉತ್ತರಕ್ಕಾಗಿ ದೇಶ ಕೂಡಾ ಕಾಯ್ತಾ ಇದೆ...


ಭಿನ್ನ ಭಿನ್ನತೆಯ ಕನಸು..
ಭಿನ್ನವದು ದಾರಿ,
ಒಮ್ಮರದ ಎಲೆಗಳಾಗಿ ಒಂದೆಡೆಯೇ ಬೇರೂರಿ..
ಅರಿವಿನಲೆಗೆ ಮನದ ತೆನೆ-ತೆನೆಯು ಕುದುರಿ,
ಬನ್ನಿ ಚಿಗುರೆಲೆಗಳೇ, ಹೊಸತನದ ಕರೆಗೆ..
ಗುರುತುಳಿವ ಹೆಜ್ಜೆ ಇಡುವ,
ಮಾನವತೆ, ಸಮಾನತೆ, ಪರಿಪೂರ್ಣತೆಯ ಊರ ಕಡೆಗೆ...
ವಂದೇ ಮಾತರಂ 


- ರೋಹಿತ್

ಚಿತ್ರಕೃಪೆ: 
೧. http://media.photobucket.com/image/india+flag+/masseybros/india-flag.jpg
೨. https://blogger.googleusercontent.com/img/b/R29vZ2xl/AVvXsEhmzER1DNujuNeEGqLfkAXH7aqI4GgE07hl7PYEVyhtX932vH2RG0J5scKr_TmTiD8g4AlrE0zJ7RNt-Cwb10U5XM5YwNLP6sThmc10dQIwsn8KJMgnnI68vXeKbc1-2Z5Qi6Ls7VC05uJs/s1600/26170.jpg
೩. http://www.vandeindia.com/wp-content/uploads/2008/08/the-proud-indian-flag.jpg

Wednesday, February 9, 2011

SOME- ಶೋಧಕರಿಗೆ..


ಹಗಲೆಂಬುದಿಲ್ಲ, ಇರುಳೆ೦ಬುದಿಲ್ಲ ..
ಸಮಯಕ್ಕೆ ಊಟ-ತಿಂಡಿ ಮೊದಲೇ ಇಲ್ಲ..
ಸ್ವಂತ ಬದುಕನ್ನಾ ಮರೆತೇ ಬಿಟ್ಟೆವಲ್ಲಾ...??!
SMS - ಫೇಸ್ ಬುಕ್ ಒಳಗೆ ಅಡಗಿ ಕೂತವರೆಲ್ಲ... ಇಂದು ಬೆನ್ನು ತಿರುಗಿಸಿ ನೋಡಲಿಕ್ಕೂ ಪುರುಸೊತ್ತಿಲ್ಲವಲ್ಲಾ?..
SOME -ಶೋಧಿಸೋ ಸನ್ಯಾಸಿ ಮಹಾವರ್ಯರೆಲ್ಲ,
ನಿಮಗೂ ಬದುಕಿದೆ ವಸಿ ಬದುಕಿ ನೋಡಿರಲ್ಲಾ...?


                                                          - ರೋಹಿತ್ 
ಚಿತ್ರ ಕೃಪೆ: http://yay-jj.blogspot.com/2009/10/my-woot-shirt-collection.html
 

ಕಾದು ನೋಡಿ

ಹೊಸ ಅಂಕಣ...

"ತೀರ"


ಆತ್ಮೀಯ ಒಡನಾಡಿಗಳೇ,


೨೦೧೦-೨೦೧೧ ನೇ ಸಾಲಿನ ಹಿರಿಯ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದ ವಿಶೇಷವಾಗಿ ಮಾಡಲ್ಪಟ್ಟ "ತೀರ" ಎಂಬ ವೀಡಿಯೋ ತುಣುಕನ್ನು ಈ ಮೂಲಕ ನಮ್ಮ ಬ್ಲಾಗ್ ನಲ್ಲಿ upload ಮಾಡುತ್ತಿದ್ದೇವೆ. ನಮ್ಮ ವಿಭಾಗದಲ್ಲಿನ ದಿನಗಳ ನೆನಪನ್ನ ಮತ್ತೆ ನಿಮ್ಮಲ್ಲಿಗೆ ತರುವಂತಹ ಒಂದು ಪುಟ್ಟ ಪ್ರಯತ್ನವು ಇದಾಗಿದ್ದು, ನಿಮ್ಮೆಲ್ಲರ ಮೆಚ್ಚುಗೆಗೆ ಪಾತ್ರವಾಗುತ್ತದೆ ಎಂದು ನಂಬಿದ್ದೇವೆ.


ನಿಮ್ಮ ಪ್ರತಿಯೊಂದು ಅನಿಸಿಕೆಗಳಿಗೂ ಆದರದ ಸ್ವಾಗತ.



ಈ ವೀಡಿಯೊ ತುಣುಕನ್ನು ತಯಾರಿಸಲು ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಸಹಕರಿಸಿದ ಪ್ರತಿಯೋರ್ವರಿಗೂ ಈ ಮೂಲಕ ಧನ್ಯವಾದವನ್ನು ಅರ್ಪಿಸುತ್ತೇವೆ.


- ರೋಹಿತ್

ತೀರ ಭಾಗ - 1

ತೀರ ಭಾಗ - 2

ತೀರ ಭಾಗ - 3

ನನ್ನ ಬೆರಳಿನೊಡನೆ ಆಡಿದ ಕನಯ್ಯ...

ನನ್ನ ಬೆರಳಿನೊಡನೆ ಆಡಿದ ಕನಯ್ಯ...