Friday, December 10, 2010

ಸೊಬಗು ನಿನ್ನ ಚೆಲುವು, ಹೂ ನಿನ್ನ ಮನವು,
ಮನ ತಣಿಸೋ ಮೊದಲ ಮಳೆಯ ಹನಿಯು ನಿನ್ನ ನಗುವು,
ಮಾತು ನುಡಿಮುತ್ತು, ಪ್ರತಿ ಕಣದಿ ಜೇನಮತ್ತು,
ನಮ್ಮ ಬಾಳಿನಲ್ಲಿ ನೀನು ಸಿಕ್ಕ "ಸ್ವಾತಿ ಮುತ್ತು"

Monday, October 25, 2010

ಚಿಗುರೆಲೆ..

ಭಿನ್ನ ಭಿನ್ನತೆಯ ಕನಸು..
ಭಿನ್ನವದು ದಾರಿ,
ಒಮ್ಮರದ ಎಲೆಗಳಾಗಿ ಒಂದೆಡೆಯೇ ಬೇರೂರಿ..
ಅರಿವಿನಲೆಗೆ ಮನದ ತೆನೆ-ತೆನೆಯು ಕುದುರಿ,
ಬನ್ನಿ ಚಿಗುರೆಲೆಗಳೇ, ಹೊಸತನದ ಕರೆಗೆ..
ಗುರುತುಳಿವ ಹೆಜ್ಜೆ ಇಡುವ,
ಮಾನವತೆ, ಸಮಾನತೆ, ಪರಿಪೂರ್ಣತೆಯ ಊರ ಕಡೆಗೆ...

Tuesday, August 17, 2010

ಮನದ ಎಲೆ.. ಪ್ರೀತಿ ಅಲೆ..


ಹಣ್ಣೆಲೆಯ ಮನಸು ಉದುರಿತು...
ಪ್ರೀತಿಯಲೆಯಲಿ, ನಿರ್ಭಾರತೆಯಲಿ ತೇಲುತಲಿ.. 
ನಿನ್ನ ತಲುಪೋ ಕನಸ ಕಂಡು ಸರಿಯುತಿರೆ ಬಳಿಗೆ..,
ಕಾಣದ ಕೈ ತಿರುಗಿಸಿ ವಾಯುಚಕ್ರವ, ಎಬ್ಬಿಸಿದ ಬಿರುಗಾಳಿಗೆ,
ದೂರಾಗಿ ಕಡೆಗೆ ಬಿದ್ದೆ ನಾ ನಿರಾಸೆಯ ಧೂಳಿಗೆ. 
 - ರೋಹಿತ್
 

Thursday, August 5, 2010

ನೆನಪ ನಡಿಗೆ

ತಂಪು ತಂಪು ತಂಗಾಳಿ, ಕಣ್ಣಳತೆ ದೂರಕ್ಕೂ ಚಾಚಿಕೊಂಡಿರೋ ಹಸಿರು, ತಿಂಗಳುದ್ದಕೂ ಧೋ..ಅಂತ ಸುರಿಯೋ ಮಳೆ... ಮಲೆನಾಡ ಮಳೆಗಳ ಕಾಡ ನಡುವೆ ಸಿಗುವ ಆ ಅನುಭವವೇ ಬೇರೆ. ನನ್ನ ಪ್ರೀತಿಯ ತೀರ್ಥಹಳ್ಳಿಗೆ.. ಅದರಲ್ಲೂ ನಮ್ಮ ಮನೆಗೆ ನಂಜೊತೆ ನಿಮ್ಮನ್ನೆಲ್ಲಾ ಕರೆದುಕೊಂಡು ಹೋಗ್ತಿದೀನಿ. ಭಾವ ಮಳೆಯಲ್ಲಿ ಮಿಂದರೇನೇ ಚೆನ್ನ. ಹಾಗಾಗಿ ಛತ್ರಿ-ಗಿತ್ರಿ ತರೋಕೆ ಹೋಗಬೇಡಿ..! ಹೀಗೊಂದು ಪಯಣ ನನ್ನೂರ ಕಡೆಗೆ. ಸವಿ ನೆನಪ ನಡಿಗೆ.

ಚಿತ್ರ ಕೃಪೆ: ಅಂತರ್ಜಾಲ
         
          ಹಾರ್ನ್ ಮೇಲಿಂದ ಕೈ ತಗೆಯದೇ  ಬಸ್ಸನ್ನ ಬಸ್ ಸ್ಟ್ಯಾಂಡ್ ನಿಂದ ಹೊರಗೆ ತರುತ್ತಾ ಇದ್ದ ಆ ಡ್ರೈವರ್. ದಾವಣಗೆರೆ ಬಸ್ ಸ್ಟ್ಯಾಂಡ್ ಗೆ ಬೆನ್ನು ಹಾಕಿ ಆ ಬಸ್ ಹೊರಟಿದ್ದು ಹರಿಹರದತ್ತ. ಶಿವಮೊಗ್ಗ ಕೆ ಹೋಗಲು ಡೈರೆಕ್ಟ್ ಬಸ್ ಸಿಗದೇ ಇದ್ದಿದ್ರಿಂದ ಹರಿಹರಕ್ಕೆ ಹೋಗಲು ತಕ್ಷಣಕ್ಕೆ ಸಿಕ್ಕ ಹೊಸಪೇಟೆ ಬಸ್ ಹತ್ತಿದ್ದೆ. ಅಂದ ಹಾಗೇ ನನ್ನ ಪ್ರಯಾಣದ ಬಂಡಿ ಚಕ್ರ ನಿಲ್ಲೋದು ತೀರ್ಥಹಳ್ಳಿಯಲ್ಲಿ. ಫುಟ್ ಬೋರ್ಡ್ ನ ಎರಡು ಮೆಟ್ಟಿಲು ಹತ್ತಿದ್ದೇ ತಡ ನನ್ನೆರಡೂ ಕಣ್ಣುಗಳು ಖಾಲಿ ಇದ್ದ window seat ನ ಹುಡುಕಾಟದಲ್ಲಿ ಬಿದ್ದಿತ್ತು. ದೊಗಲ-ದೊಗಲ ಪ್ಯಾಂಟು, ಚಿತ್ರ-ವಿಚಿತ್ರ T-ಶರ್ಟು, ಹೆಗಲಿಗೊಂದು ಬ್ಯಾಗು, ಕೈಗೊಂದು wrist band, ಜೀನ್ಸ್ ನ buckle ಗೆ ನೇತು ಹಾಕಿದ್ದ red cap... ನನ್ನ ಕೈಯಿಂದ ಬುಗುರಿ ಆಡಿಸಿಕೊಳ್ತಾ ಇದ್ದ ನನ್ನ ಮೊಬೈಲ್ ಫೋನ್... ನಾನು ನನ್ನ ಮಾಮೂಲಿ ಗೆಟಪ್ ನಲ್ಲಿದ್ದೆ. ಬಸ್ ಹತ್ತಿದ್ದೇ conductor ಹುಬ್ಬೇರಿಸಿ ನೋಡಿದ್ದ. ನಾನೋ IGNORANCE ತತ್ವಕ್ಕೆ ಮೊರೆ ಹೋಗಿದ್ದೆ. ಸಿಕ್ಕ window seat ಗೊಂದು ಹಾಯ್ ಹೇಳಿ, ಕಿಟಕಿಯನ್ನ ಅರ್ಧ ಸರಿಸಿ ಗಾಳಿಗೆ ಮುಖವೊಡ್ಡಿ ಕುಳಿತುಕೊಂಡಿದ್ದೆ.


          ಹಾಗೇ ಹೊರಟ ಬಸ್ಸು ರೈಲ್ವೆ ಸ್ಟೇಷನ್  ಬಳಿ ಬಂದಾಗ ಮುಂದಿನ ಬಾಗಿಲಿನ ಕಡಯಿಂದ conductor ಟಿಕೆಟ್ ಕೊಡ್ತಾ ನನ್ನ ಬಳಿ ಬಂದು ನಿಂತು, ಕಣ್ಣೇರಿಸಿ 'ಎಲ್ಲಿಗೆ'  ಅನ್ನೋ ಪ್ರೆಶ್ನೆಯನ್ನ ಆಡದೆಯೇ ನನ್ನ ಮುಂದೆ ಇಟ್ಟ. ನಾನು ಮೊಗದಲ್ಲಿ ನಗು ತುಂಬ್ಕೊಂಡು, ಕೈನಲ್ಲಿ ನಗ್ತಾ ಇರೋ ಗಾಂದಿ ನೋಟು ಹಿಡ್ಕೊಂಡು "ಒಂದು ಸೀಟ್ ಹರಿಹರ, but ಚಿಲ್ಲರೆ ಇಲ್ಲ ಸರ್ ಬೈಬೇಡಿ ಪ್ಲೀಸ್" ಅಂದೆ. ಜಿಪುಣತನದ ನಗೆಯನ್ನ ಮೀಸೆ ತುದಿಯಲ್ಲಿ ಕಂಡು ಕಾಣದಂತೆ ತೋರಿಸಿ ರೂ 9 ರ ಟಿಕೆಟ್ ಹಿಂದೆ 91 ಅಂತ ವೃತ್ತದೊಳಗೆ ಬರೆದು "ಇಳಿಯುವಾಗ change ಇಸ್ಕೊಳ್ರಿ" ಅಂದ. ಜೀಬಿನಲ್ಲಿಟ್ಟರೆ ಮರೆತು ಬಿಡ್ತೀನಿ ಅಂತ ಅಂದ್ಕೊಂಡು ಟಿಕೆಟ್ ನ ಕೈನಲ್ಲೇ ಪುಟ್ಟ ಮಗು ಕೈ ಹಿಡಿದಂಗೆ ಹಿಡಿದು, ಇನ್ನೊಂದು ಕೈಯಿಂದ ನನ್ನ ಬ್ಯಾಗ್ ನ ತಬ್ಬಿಕೊಂಡು ಹಾಗೇ ಒರಗಿದೆ.. ಕಣ್ಣ ರೆಪ್ಪೆಗಳೂ ತಂತಾನೇ ಒಂದಕ್ಕೊಂದು ಅಪ್ಪಿಕೊಂಡವು.


          ನನಗೆ ಕನಸುಗಳು ಕಾಡೊಲ್ಲ.. ಬೀಳೋದೂ ಇಲ್ಲಾ... ಕಣ್ಮುಚ್ಚಿ ನಿಮಿಷದೊಳಗೆ ತಿಂಡಿ ಕಂಡು ಮೇಲೆ ಜಿಗಿಯೋ ನಾಯಿಯ ಹಾಗೇ ಸೀಟಿನಿಂದ ಅರ್ಧ ಅಡಿ ಮೇಲಕ್ಕೆ ಎಗರಿ ಧಪ್ಪೆಂದು ಬಿದ್ದೆ...!! ಸರ್ಕಾರದೋರು extra ಟಾರು, extra ಜಲ್ಲಿ ಹಾಕಿ ನಿರ್ಮಿಸಿರೋ speed breaker (Humps) ಅದು! ಆ ಊರಿನ ಹೆಸರು ದೊಡ್ಡ ಬಾತಿ. ದಾವಣಗೆರೆಯ Regional Forensic Science Laboratory (ಪ್ರಾದೇಶಿಕ ವಿಧಿ ವಿಜ್ಞಾನ ಪ್ರಯೋಗಾಲಯ) ಮತ್ತು ನಂದಿನಿ ಹಾಲು ಸಂಸ್ಕರಣ ಕೇಂದ್ರ ಇರೋ ಸ್ವಲ್ಪ ಮಟ್ಟಿಗಿನ ದೊಡ್ಡ ಹಳ್ಳಿ. ಈ ಊರಿನಲ್ಲಿ ಸಾಗೋ 200 ಮೀಟರ್ ರಸ್ತೆಯಲ್ಲಿ 8-9 speed breakers ಹಾಕಿದಾರೆ ಯಾರೋ ಪುಣ್ಯಾತ್ಮರು. ಹಾಗಾಗೆ M.Sc. ಮಾಡಲೆಂದು ಬಂದ ಮೊದ ಮೊದಲಿಗೆ ನಾನು ನನ್ನ ಗೆಳೆಯ ಈ ಊರಿಗೆ ಹಂಪ (HUMP) ನಗರ ಅಂತ ಹೆಸರಿಟ್ಟಿದ್ವಿ!


          ನನ್ನ ನಿದ್ದೆಯನ್ನ ಕೊಂದ ಹಂಪನಗರವನ್ನ ಶಪಿಸುತ್ತಲೇ ಹರಿಹರಕ್ಕೆ ಬಸ್ಸು ತನ್ನ ಯಥಾ ಹಾರ್ನ್ ನೊಂದಿಗೆ ಎಲ್ಲಾ ಪ್ರಯಾಣಿಕರನ್ನ ಎಬ್ಬಿಸುತ್ತ ಆಗಮಿಸಿತು. ಮರಿಯದೇ 9 ರೂಪಾಯಿಯ ಟಿಕೆಟ್ ಗೆ  91 ರೂಪಾಯಿ  ಹಿಡ್ಕೊಂಡಿದ್ದ ಭೂಪನ ಹತ್ತಿರ ಚಿಲ್ಲರೆಯನ್ನ ಪಡೆದು ಕೆಳಗಿಳಿದೆ. ಏನೋ ನೆನೆದು ನಕ್ಕವನಂತೆ ಕಂಡ ಆತ ನನ್ನ ಕಣ್ಣಿಗೆ. ಇಳಿದ ಕೂಡಲೇ ಅಲ್ಲೇ ಬಸ್ ಸ್ಟ್ಯಾಂಡ್ ನಲ್ಲಿದ್ದ ಅಂಗಡಿಯೊಂದರಲ್ಲಿ ಒಂದು ಬಾಳೇಹಣ್ಣು ತಿಂದು, ಒಂದು ಬಾಟಲಿ ನೀರು ತಕೊಂಡು ಅಂತೆಯೇ ದಾರಿ ಖರ್ಚಿಗಾಗಿ ತಲಾ ಒಂದು ಪ್ಯಾಕ್ ಚಿಪ್ಸ್ ಮತ್ತೆ ಬಿಸ್ಕೆಟ್ ನ ತಗೆದುಕೊಂಡೆ. ನೀರು, ಬಿಸ್ಕೆಟ್ ನ ಬ್ಯಾಗ್ ನಲ್ಲಿತ್ತು ಚಿಪ್ಸ್ ಪ್ಯಾಕ್ ತೆರೆದು ಮೊದಲ ಚಿಪ್ಸ್ ನ ಬಾಯಿಗೆ ಇಟ್ಟಿಕೊಳ್ಳುತ್ತಲೇ  ಹುಬ್ಬಳ್ಳಿಯಿಂದ ಬಂದ ಬಸ್ಸೊಂದು ಬರ್ರನೆ ಬಂದು ನಿಂತಿತು. ಜನರ ನಾಯಕನಂತೆ ಮೊದಲಿಳಿದ conductor 'ಶಿಮೊಗ, ಶಿಮೊಗ' ಎಂದಾಗ ಪ್ರೇಮಿ ತನ್ನ ಪ್ರೇಯಸಿಯ ಪತ್ರವನ್ನ ಮಡಚುವಂತೆ ಚಿಪ್ಸ್ ಪ್ಯಾಕ್ ನ ಮಡಚಿ ಬಸ್ಸನ್ನೇರಿದೆ. Rush ತುಂಬಾ ಇದ್ದಿದ್ರಿಂದ ಫುಟ್ ಬೋರ್ಡ್ ಮೇಲೆ ನಿಂತ್ಕೊಂಡು "ರೈಟ್.... ರೈಟ್... " ಅಂತ ಮನಸಲ್ಲೇ ಅಂದ್ಕೊಂಡೆ. ಸ್ವಲ್ಪ ಹೊತ್ತಿನಲ್ಲೇ ಬಸ್ಸು ಧೂಳೆಬ್ಬಿಸುತ ಹೊರಟಿತು ಶಿವಮೊಗ್ಗದ ಕಡೆಗೆ.. ಮಲೆನಾಡಿನತ್ತ ನಡಿಗೆ..


          Main ಬಸ್ ಸ್ಟ್ಯಾಂಡ್ ನಿಂದ 2 ನೇ ಬಸ್ ಸ್ಟಾಪ್ ನ ಬಳಿ ಯಾರೋ ಒಬ್ಬ ರಸ್ತೆಯಲ್ಲಿ ನಿಂತುಕೊಂಡು ಕೈ ಬೀಸಿ ಡ್ರೈವರ್ ಸಾಹೇಬರಿಗೆ ನಿಲ್ಲಿಸುವ ಕೋರಿಕೆ ಸಲ್ಲಿಸಿದ. ಮುಂದಿನ ಬಾಗಿಲ ಬಳಿ ಜನ ಕಡಿಮೆ ಇದ್ದಿದನು ಅರಿತಿದ್ದ ಡ್ರೈವರ್, ಆತನಿಗೆ ಮುಂದಿನ ಬಾಗಿಲಿಂದ ಹತ್ತಲು ಅನುವಾಗುವಂತೆ ಗಾಡಿಯನ್ನ ನಿಲ್ಲಿಸಿದ. ಆತನೋ ಎದುರಿಗಿದ್ದ ಬಾಗಿಲು ಬಿಟ್ಟು ಓಡಿ ಬಂದು ತುಂಬಿ ತುಳುಕುತ್ತಿರೋ, ನಾನು ನಿಂತುಕೊಂಡಿರೋ ಹಿಂದಿನ ಬಾಗಿಲಿಂದ ಬಸ್ಸನ್ನ ಹತ್ತಿದ. ನಾನು ನಗುತ್ತಾ, "ಸರ್ ಆ door ಕೂಡಾ ಇದೆ ಬಸ್ಸಿಂದು" ಅಂದೆ. ಓರೆನೋಟ ಕೊಂಚ ಬಿನ್ನವಾಗಿತ್ತಾದರೂ ಕೊನೆಯಲ್ಲಿ ನಗು ಅವನ ಮುಖದಲ್ಲಿ ಸುಳಿದಿತ್ತು. ಎತ್ತರದಲ್ಲಿ ನನಗಿಂತ ಕೊಂಚ ಕುಳ್ಳಗಿದ್ದರೂ, ಮೈಕಟ್ಟಿನಲ್ಲಿ ತುಂಬಾ ಗಟ್ಟಿಮುಟ್ಟಾಗಿದ್ದ ಆತ ಸರಿಸುಮಾರು 30 ವರ್ಷ ವಯಸ್ಸಿನವನಿರಬಹುದು. ಗಾಳಿಗೆ ಕೂದಲು ಕೆದರಿತ್ತು. ಬಗುಲಲ್ಲಿ ಪುಟ್ಟ ಬ್ಯಾಗೊಂದರ ಕತ್ತು ಸಿಕ್ಕಿ ಹಾಕೊಂಡಿತ್ತು. ಹೀಗೆ ಸಾಗ್ತಾ ಆತ ನನ್ನ ನೋಡಿ ಕೇಳಿದ...


" ಏನು ಓದ್ತಿದ್ದೀರ?" 

"M.Sc. ಮುಗಿಸಿದ್ದೇನೆ... Ph.D. ಮಾಡ್ತಾ ಇದೀನಿ" 

"Ph.D. ನಾ?" ಅಂತ ಮೇಲಿಂದ ಕೆಳಗೆ ನೋಡಿದ ನನ್ನ...

"ಯಾಕೆ ಅನುಮಾನ ನಾ?" ಅಂತ ಅಂದು ಫುಟ್ ಬೋರ್ಡ್ ಪಕ್ಕದ ಕಂಬಿಯನ್ನ ಹಿಡಿದಿದ್ದ ಕೈಯನ್ನ ಬದಲಿಸಿದೆ.

"ಅಲ್ಲ Ph.D. ಮಾಡ್ತಿರೋರು ತುಂಬಾ casual ಆಗಿ, ಸಿಂಪಲ್ ಆಗಿರ್ತಾರೆ ಅಲ್ವಾ?" ಪ್ರೆಶ್ನೆಗೊಂದು ಪ್ರೆಶ್ನೆ ಉತ್ತರದ ರೂಪದಲ್ಲಿ ಬಂದಿತ್ತು...

"ನಾನು ನನ್ನ ಯೋಚನೆಗಳಲ್ಲಿ ತುಂಬಾ ಸಿಂಪಲ್ಲೇ...." ಅಂದೆ.

"ಯಾವ ಊರು ನಿಮ್ಮದು" ಅಂತ 'ಸಿಂಪಲ್' topic ಗೊಂದು full stop ಇಟ್ಟ.

"ತೀರ್ಥಹಳ್ಳಿ" 

"ಹೌದಾ!! ನಿಮ್ಮ ಮಾತು ಕೇಳೆ ಅಂದ್ಕೊಂಡೆ.. ಹುಟ್ಟಿದ್ರೆ ಅಂತ ಊರಲ್ಲಿ ಹುಟ್ಬೇಕು ನೋಡಿ" ಅಂದ...

ಮನಸಲ್ಲೇ ಅಹುದಹುದು ಅಂತ ಗರ್ವದಿಂದ ಅಂದುಕೊಂಡರೂ ಅವನ ಭಾವನೆಗಳನ್ನ ಹೊರ ತೆಗೆಯೋ ಕುತೂಹಲ ನನ್ನಲ್ಲಿ ತುಂಬಿಕೊಂಡಿತ್ತು.. ಹಾಗಾಗೇ...

"ಯಾಕೆ ಹೇಳಿ" ಅಂದೆ.

"ಜಿನುಜಿನುಗೋ ಮಳೆ, ಮುತ್ತಿನಂಥಾ ಜನ, ಯಾವ ದಿಕ್ಕಿನಲ್ಲಿ ನೋಡಿದರೂ ಕಾಣ ಸಿಗೋ ಪ್ರಕೃತಿ ಸೊಬಗು.. ಎಂಥವನೂ ಕವಿ ಆಗೋ ಅಂತ ಊರು ಸಾರ್ ಅದು.. ಹಾಗಾಗೆ ಕುವೆಂಪು, ಕೆ.ವಿ.ಪಿ ಅಂತ ಕವಿಗಳು ಸಿಕ್ಕಿರೋದು ಸಾರ್ ನಮಗೆ.. ಹುಟ್ಟಿದರೆ ಅಂಥಲ್ಲಿ ಹುಟ್ಟಬೇಕು". 

ಅವನ ಮಾತು ನನ್ನಲ್ಲಿ ಪುಟ್ಟ ಕಂಪನವನ್ನ ಉಂಟುಮಾಡಿತ್ತು.
"ನಿಜ ಸರ್ ನಿಮ್ಮ ಮಾತು" ಎಂದಷ್ಟೇ ಅಂದೆ..

 ಚಿತ್ರ ಕೃಪೆ: ಅಂತರ್ಜಾಲ

 
          ಅಷ್ಟರಲ್ಲಾಗಲೇ ಮಲೆಬೆನ್ನೂರು ದಾಟಿ ಹೊನ್ನಾಳಿಯೆಡೆಗೆ ಬಸ್ಸು ಹೊರಟಿತ್ತು. ಮಲೆಬೆನ್ನೂರಲ್ಲಿ ಬಹಳ ಜನ ಇಳಿದಿದ್ದರಿಂದ ಇಬ್ಬರಿಗೂ ಅಕ್ಕಪಕ್ಕದ ಸೀಟು ಸಿಕ್ಕಿತ್ತು. ದಾರಿ ಖರ್ಚಿನ ತಿಂಡಿ ಅರ್ಧ ಖಾಲಿ ಆಗಿತ್ತು. ಬಿಸಿಲ ನಡುವೆ ಜರಿ ಜರಿ ಮಳೆ ಕೂಡಾ ಹನಿಸುತ್ತಿತ್ತು.




"ಯಾಕಾಗಿ ಹೊಮ್ಮಿತೋ ಮಳೆಯೆಡೆಗೆ
ಆಗಸದಿಂದ ಹೊರಟ ಹೊಂಗನಸಿನ ಕಿರಣ??
ಭುವಿ-ನೇಸರರ ನಡುವಲ್ಲಿ ಕಟ್ಟಲು
ಪ್ರೀತಿಯೆಂಬ ಸವಿಭಾವದ ಮಳೆಬಿಲ್ಲ ತೋರಣ..!"



ಚಿತ್ರ ಕೃಪೆ: ಅಂತರ್ಜಾಲ


          ಹೊನ್ನಾಳಿ ತಲುಪಿ, ಇಳಿಯೋಕೆ ಹೊರಟಾಗಲೇ ನನಗೆ ತಿಳಿದಿದ್ದು ಆತ ಹೊನ್ನಾಳಿಯವನು ಅಂತ.

"ಹೊರಟ್ರಾ" ಕೇಳಿದೆ ಸೀಟಿನ ಹಿಂಬದಿಗೆ ಸರಿದು ಅವನಿಗೆ ಇಳಿಯಲು ದಾರಿ ಬಿಡುತ್ತಾ...

"ಹೌದು ಸಾರ್, ಬರ್ತೀನ್ರಿ.. ನಿಮ್ಮ ಜೊತೆ ಮಾತಾಡಿ ತುಂಬ ಸಂತೋಷ ಆಯ್ತು". ಮಾತು ಕೊಂಚ ನಾಟಕೀಯ ಅನ್ನಿಸಿದರೂ ಅದು ನೇರವಾಗಿ ಮನಸ್ಸಿಂದ ಬಂದಿದ್ದು ಅನ್ನಿಸ್ತು.

"ಸರ್ ಅಂತೆಲ್ಲಾ ಅನ್ಬೇಡಿ.. ನನ್ ಹೆಸರು ರೋಹಿತ್.. ಅಂದ ಹಾಗೇ ನಿಮ್ ಹೆಸರು?" ಒಂದು ಕಾಲು ಗಂಟೆಯ ಮಾತುಕತೆಯ ನಂತರ ಇಬ್ಬರು ಪರಸ್ಪರರ ಹೆಸರು ತಿಳ್ಕೊಳೋ ಸಮಯ ಬಂದಿತ್ತು...

"ಅಶೋಕ್" 

" OK Take care ...." ಅನ್ನುವಷ್ಟರಲ್ಲೇ ಹೊನ್ನಾಳಿ ನಿಲ್ದಾಣ ತಲುಪಿತ್ತು ಬಸ್ಸು.

"ಸರಿ ಬರ್ತೀನಿ" ಅಂದವನೇ ಮೊದಲ ನೋಟದ ನಗುವನ್ನೇ ಹೊತ್ತು ಬಸ್ಸಿಳಿದ.. ನನ್ನ ಮೊಗದಲ್ಲೂ ನಗುವಿನ ಗೆರೆ ಮೂಡಿತ್ತು.

ಚಿತ್ರ ಕೃಪೆ: ಅಂತರ್ಜಾಲ (ಆಗುಂಬೆಯಲಿ ಮೋಡದಾಟ)



          ಅಲ್ಲಿಂದ ಶಿವಮೊಗ್ಗ ತನಕ ಕಿಟಕಿ ಇಂದ ಆಚೀಚೆ ನೋಡುತ್ತಾ ಸುಮ್ಮನೆ ಕೂತಿದ್ದೆ. ಎಷ್ಟು ಮಾತಾಡ್ತಿನೋ, ಅಷ್ಟೇ ಒಂಟಿ ಆಗಿರೋಕೆ ಇಷ್ಟ ಪಡ್ತೀನಿ ನಾನು.. ಯಾಕಂದರೆ ನಾನು ನನ್ನೊಡನೆ ಹೆಚ್ಚು ಮಾತಾಡೋದು ಆಗಲೇ... ಶಿವಮೊಗ್ಗ ಸಮೀಪಿಸುತ್ತಲೇ ಮಳೆ ಸುರಿದು ಧರೆಯ ತಣಿಸಿದ ಸುದ್ದಿಯನ್ನ ತಂಪು ಗಾಳಿ ಮುಟ್ಟಿಸಿತು. ಮೆಲ್ಲನೆ ಶೂ ನೆನೆಯದಂತೆ ನೆಲದ ಮೇಲೆ ಕಾಲಿರಿಸಿ, cap ನ ಹಾಕೊಂಡು ಅಲ್ಲೇ ಎದುರಿದ್ದ private ಬಸ್ ಸ್ಟ್ಯಾಂಡ್ ಬಳಿ ಹೋದೆ. ಫೋನು ಗರ್ರನೆ ನಡುಗುತ್ತಾ ಬಂದ ಕರೆಯ ಸೂಚನೆ ಕೊಟ್ಟಿತು. "ಅಮ್ಮಾ ಇರಬೇಕು" ಅಂತ ನೋಡಿದಾಗ ನನ್ನ ಊಹೆ ನಿಜವಾಗಿತ್ತು.


"ಹಲೋ ಅಮ್ಮಾ.." 

"ಎಲ್ಲಿದಿಯಪ್ಪ?.." ಅತ್ತ ಕಡೇ ಇಂದ ಅಪ್ಪನ ದನಿ ಕೇಳಿಸಿತು...

"ಈಗ ಶಿವಮೊಗ್ಗ ಬಂದೆ ಅಪ್ಪ.. ತೀರ್ಥಹಳ್ಳಿ ಬಸ್ ಹತ್ತುತಾ ಇದೀನಿ" ಅಂತ ದುರ್ಗಾಂಬಾ ಬಸ್ಸೊಳಗೆ ನೆಡೆದು conductor ಬಳಿ ಟಿಕೆಟ್ ಪಡೆದೆ...

"ಸರಿ ಪುಟ್ಟು ಬೇಗ ಬಾ.. ತುಂಗಾ ಕಾಲೇಜ್ ಹತ್ರ ಬರ್ತಿದ್ದ ಹಾಗೇ ಕಾಲ್ ಮಾಡು ಗಾಡಿ ತಕೊಂಡು ಬರ್ತೀನಿ" ಅಂದ್ರು ನನ್ನಪ್ಪ.

"ಆಯ್ತಪ್ಪ" ಅಂದವನೇ ನನ್ನ ಮೊಬೈಲ್ ಗೆ ತಿರುಗಿ ತನ್ನ ಜಾಗವನ್ನ ತೋರಿಸಿದೆ.


          ಶಿವಮೊಗ್ಗದಿಂದ ತೀರ್ಥಹಳ್ಳಿಗೆ ಹೋಗೋದೇ ಒಂದು ಸುಂದರ ಅನುಭವ... ಕಾಡ ನಡುವೆ ಸಿಗುವ  ಕೆಲವೇ ಕೆಲವು ಪುಟ್ಟ ಪುಟ್ಟ ಊರುಗಳು, ಒಂದೆಡೆ ತುಂಗಾ ನದಿ ಮತ್ತೊಂದೆಡೆ ಕಾಡನ್ನ ಬೇರ್ಪಡಿಸಲು ಎಳೆದ ಗೆರೆಯಂಥಾ ರಸ್ತೆಗಳು.. ಭೂತಾಯಿ ಹಸಿರು ಸೀರೆ ತೊಟ್ಟು ಇಬ್ಬನಿಗಳ ಜೊತೆ ಅಟಾಡ್ತಾ ಇದಾಳೇನೋ ಅನ್ನೋ ಹಾಗೇ ಕಾಣ್ತಾಳೆ... ಒಂದೂ ವರೆ ಗಂಟೆ ಕಳೆದಿದ್ದೆ ತಿಳಿಯೊಲ್ಲಾ.. ಹಾಗೇ ಬರ್ತಾ ಇರೋನಿಗೆ ಮಂಡಗದ್ದೆ ಬಳಿ ಸಣ್ಣ ನಿದ್ದೆ ಹತ್ತಿತು. ಮೊದಲೇ ಹೇಳಿದ ಹಾಗೇ ಯಾವ ಕನಸೂ ಕಾಡದ ಶಾಂತ ನಿದ್ದೆ ಅದು... ಕಣ್ಣು ತೆರೆದು ಎದುರು ನೋಡಲಾಗಿ, ರಸ್ತೆ ಅಪರಿಚಿತವಾಗಿ ಕಂಡಿತ್ತು. ಉದ್ದಕೂ ಕಾಡಿದ್ದರೂ, ಆ ಕಾಡು ಹೊಸದಾಗಿ ಕಾಣಿಸುತ್ತಿತ್ತು. ನಿಧಾನವಾಗಿ ಎದ್ದು ಬ್ಯಾಗ್ ನೊಂದಿಗೆ ಮುಂದೆ ನಡೆದೆ.


 ಚಿತ್ರ ಕೃಪೆ: ಅಂತರ್ಜಾಲ (ಶಿವಮೊಗ್ಗ -ತೀರ್ಥಹಳ್ಳಿ ರಸ್ತೆ )
 

"ಸರ್ ತೀರ್ಥಹಳ್ಳಿ ಬಂತಾ?" ಹುಟ್ಟಿದ ಊರನ್ನ ಯಾವದೋ ಹೊಸ ಊರು ಹೊಕ್ಕ ಆಸಾಮಿಯಂತೆ ಉದ್ಗರಿಸಿದ್ದೆ..!

"ಅಲ್ಲಾ ರೀ.. ಗಂಟಲು ಕಿತ್ತು ಹೋಗೋ ಹಾಗೇ ಕಿರುಚಿದ್ವಲ್ರೀ ತೀರ್ಥಹಳ್ಳಿ ಬಂದಾಗ... ತೀರ್ಥಹಳ್ಳಿ ಬಿಟ್ಟು 6 ಕಿ.ಮೀ. ಬಂದಾಯ್ತು" ಸಿಟ್ಟು ನೆತ್ತಿಗೇರಿತ್ತು ಡ್ರೈವರ್ ಅಂಕಲ್ ಗೆ...!!!

"ಇಲ್ಲೇ ಇಳಿಸಿ ಸರ್" ಅಂದೆ.. ಮುಗ್ದನಂತೆ..

ಗೇರ್ ಬದಲಿಸುತ್ತಾ ಸಿಟ್ಟನ್ನ ಬ್ರೇಕ್ ಮೇಲೆ apply ಮಾಡಿದ.. ಬಸ್ಸು ಗಕ್ಕನೆ ನಿಂತಿತ್ತು... "ಥ್ಯಾಂಕ್ಸ್" ಅನ್ನುತ್ತಾ ಕೆಳಗಿಳಿದೆ.

          ಅದು ರಂಜದಕಟ್ಟೆ ಅನ್ನೋ ಹಳ್ಳಿ. ಅಲ್ಲಿಂದ 6 ಕಿ.ಮೀ. ತೀರ್ಥಹಳ್ಳಿ ಆದರೂ ನಮ್ಮ ಮನೆಗೆ ಹೋಗೋಕೆ 4.5 ಕಿ.ಮೀ. ಹೋದರೂ ಸಾಕಿತ್ತು. ನನ್ನ ಮುಟ್ಟಾಳುತನವನ್ನ ನೆನೆಸಿ ನಗುತ್ತಾ, ಮಂಗಳೂರಿನಿಂದ ಬಂದ ಬಸ್ಸೊಂದಕ್ಕೆ ಕೈ ಒಡ್ಡಿದೆ. ಐದೇ ನಿಮಿಷದಲ್ಲಿ ಬಾಳೆಬೈಲು ಸ್ಟಾಪ್ ನಲ್ಲಿ ಇಳಿದೆ. ಅದು ನಮ್ಮ ಮನೆಯ ಸ್ಟಾಪ್. ತೀರ್ಥಹಳ್ಳಿಯ ತಾಲುಕ್ ಪಂಚಾಯತ್ ವ್ಯಾಪ್ತಿಯಲ್ಲಿ ಬರೋ ಒಂದು ವಾರ್ಡ್ ಆದ ಬಾಳೆಬೈಲು, town ನಿಂದ 1.5 ಕಿ.ಮೀ. ದೂರದಲ್ಲಿದೆ. ಬಸ್ಸು ಇಳಿದವನೇ ನೆಡೆದು ಮನೆಯೆಡೆಗೆ ಹೆಜ್ಜೆ ನಡೆಸಿದೆ. ಹತ್ತು ಹೆಜ್ಜೆಯೊಳಗೆ 3-4 ಮಂದಿ "ಪುಟ್ಟು ಈಗ ಬಂದ್ಯಾ" ಅಂತ ಕೇಳಿದ್ರು.. ನಮ್ಮ ಮನೆಯಲ್ಲೂ ಅಷ್ಟೇ ನನ್ನ ಅಪ್ಪ-ಅಮ್ಮನಿಂದ ಹಿಡಿದು ನನ್ನ ಕಣ್ಣ ಮುಂದೆ ಹುಟ್ಟಿದ ಮಕ್ಕಳೂ ಸಹ ನನ್ನ ಪುಟ್ಟು ಅಂತಲೇ ಕರಿಯೋದು. ಎಲ್ಲರಿಗೂ ಉತ್ತರಿಸುತಾ ಮನೆಯನ್ನ ಹೊಕ್ಕೆ.
 

 ಚಿತ್ರ ಕೃಪೆ: ಅಂತರ್ಜಾಲ (ತೀರ್ಥಹಳ್ಳಿ ತುಂಗಾ ನದಿ ಸೇತುವೆ)


          "ಪುಟ್ಟಪ್ಪ ಬಂದ್ರು......" ಚಿನ್ನು ನನ್ನ ಅಣ್ಣನ ಮಗಳು ಓಡಿ ಬಂದಳು ಕೂಗ್ತಾ. UKG ಓದ್ತಾ ಇರೋ ಸದ್ಯ ನಮ್ಮ ಮನೆಯಲ್ಲಿರೋ ಅತಿ ಚಿಕ್ಕವಳು. ಅವಳನ್ನ ಎತ್ತಿಕೊಂಡು ಒಳಗೆ ನಡೆದೆ. "phone ಯಾಕೆ ಮಾಡ್ಲಿಲ್ಲ" ಅಂತ ಅಪ್ಪ ಕೇಳಿದಾಗ ಸುಳ್ಳು ಹೇಳೋಕೆ ಅಂತ ಹೊರಟೋನು ಬಾಯಿ ಬರದೆ ನಡೆದ ಕತೆಯನ್ನ ಹೇಳಿದೆ.. ಮನೆ ತುಂಬ ನಗು ಹರಿದಾಡಿತ್ತು. ಸದ್ಯ ನಮ್ಮ ಮನೆಯಲ್ಲಿ ಇರೋರು ನನ್ನ ಅಪ್ಪ, ಅಮ್ಮಾ, ಅಣ್ಣ, ಅತ್ತಿಗೆ ಮತ್ತು ಚಿನ್ನು. ಅಪ್ಪ-ಅಮ್ಮಾ ಇಬ್ಬರೂ govt ಕೆಲಸದಲ್ಲಿ ಇದ್ದೋರು.. ಅಪ್ಪ ಪೋಲಿಸ್ intelligence ನಲ್ಲಿ ದಪೆದಾರ್ ಆಗಿದ್ದೊರು VR (Volunteer Retirement) ತಕೊಂಡಿದ್ರು. ಅಮ್ಮಾ nurse ಆಗಿದ್ದೋರು ನನ್ನ ನೆಪದಲ್ಲಿ ಕೆಲಸಕ್ಕೆ VR ಕೊಟ್ಟಿದ್ರು. ಅಣ್ಣ ಮುಂಚೆ ತಾಳುಗುಪ್ಪದ ಬಳಿ govt ಆಸ್ಪತ್ರೆ ಲಿ lab technician ಆಗಿ ಕೆಲಸ ಮಾಡ್ತಿದ್ದೋನು ಇತ್ತೀಚಿಗಷ್ಟೇ ನಮ್ಮೂರಿಗೆ transfer ಮಾಡಿಸ್ಕೊಂಡು ಬಂದಿದಾನೆ. ಅತ್ತಿಗೆ ಅಲ್ಲೇ ಸಮೀಪದ ದೇವಂಗಿ ಎಂಬಲ್ಲಿ ಪೋಸ್ಟ್ ಆಫೀಸ್ ನಲ್ಲಿ ಕೆಲಸ ಮಾಡ್ತಿದಾರೆ. ಇನ್ನೂ ನನ್ನಕ್ಕ ಭಾರತಿ ಮದ್ವೆ ಆಗಿ ಬೆಂಗಳೂರಲ್ಲಿ settle ಆಗಿದಾಳೆ. ಚಿನ್ಮಯೀ ಅನ್ನೋ ತುಂಟ ಮಗರಾಯನೊಬ್ಬನಿದಾನೆ. ಭಾವ KSRP ನಲ್ಲಿ ಕೆಲಸ ಮಾಡ್ತಿದಾರೆ. 


          ಅಂದು ಇಡೀ ಅದು ಇದು ಅಂತ ಮಾತಾಡ್ತಾನೆ ಸಮಯ ಕಳೆದೋಯ್ತು. ಬೆಳಗಾದರೆ ವಾಪಸ್ ಹೊರಡಬೇಕು ಅನ್ನೋ ನೋವು  ಅದಾಗಲೇ ಕಾಡೋಕೆ ಶುರುವಿಟ್ಟಿತ್ತು. ಬಹಳ ದಿನಗಳ ನಂತರ ಅಮ್ಮನ ಕೈ ಅಡುಗೆ ತಿನ್ನೋ ಖುಷಿಯೂ ಒಂದೆಡೆ. ಎಲ್ಲಾ ಕೂತು ಊಟಕ್ಕೆ ಅಣಿಯಾದ್ವಿ.


"ಅಮ್ಮಾ ಹಪ್ಪಳ ಖಾಲಿನಾ" ಅರ್ಧ ಊಟ ಮುಗಿಸಿ ಕೇಳಿದೆ.

"ಇಲ್ಲಿದೆ ತಕೋಳೋ" ಅನ್ನುತಾ ಅಪ್ಪ, ಅಮ್ಮಾ, ಅಣ್ಣ ಮತ್ತು ಅತ್ತಿಗೆ ಒಟ್ಟಿಗೆ ತಮ್ಮ ತಮ್ಮ ಹಪ್ಪಳಗಳನ್ನ ನನ್ನ ತಟ್ಟೆಗೆ ಹಾಕಿದ್ರು! ಖುಷಿಯಲ್ಲಿ ಮಾತು ಬರ್ಲಿಲ್ಲ ನನಗೆ... ಇಂಥಾ ಎಷ್ಟೋ ಘಟನೆ ನಡೆದಿದೆ ನನ್ನ ಮನೇಲಿ...

"ಪುಟ್ಟಪ್ಪ ಬರೀ ಹಪ್ಪಳ ತಿನ್ಬೇಕಾ" ಹಪ್ಪಳ ಮುರಿಯುತ್ತಾ ಅವಳದೇ ಶೈಲಿನಲ್ಲಿ ನಗುತ್ತಾ ಕೇಳಿದ್ಲು ಚಿನ್ನು.

ನಾನು ನಕ್ಕು, ಒಂದು ಹಪ್ಪಳ ಇಟ್ಕೊಂಡು ಉಳಿದವುಗಳನ್ನ ಖಾಲಿ ತಟ್ಟೆಯಲ್ಲಿ ಇಟ್ಟೆ. ಅಪ್ಪ-ಅಮ್ಮಾ ಅರ್ಧರ್ಧ ಹಂಚ್ಕೊಂಡು, ಒಂದೊಂದನ್ನ ಅಣ್ಣ-ಅತ್ತಿಗೆಗೆ ಕೊಟ್ರು. ಊಟ ಮುಗಿದಿದ್ದೇ ಮಲಗೋಕೆ ರೆಡಿ ಆದೆ. ಅಮ್ಮಾ ತಲೆಗೆ ಎಣ್ಣೆ ಹಚ್ಚಿ, ಹಾಸಿಗೆ ಹಾಸಿ ಕೊಟ್ಟು, TV ನೋಡೋಕೆ ಕೂತಳು. ಅಲ್ಲೇ ಅವಳ ಕಾಲ ಮೇಲೆ ಮಲಗಿ ನಾಳೆ ಹೊರಡೋ ಸಂಗತೀನ ಹತ್ತಿರ ಬಿಡದಂತೆ ಮನಕ್ಕೆ ಒತ್ತಾಯಿಸುತ್ತಿದ್ದೆ. ಅಪ್ಪ ಬಂದು ನನ್ನ ಮೇಲೆ ಬೆಡ್ ಶೀಟ್ ಹೊದಿಸಿ ಹೋಗಿ ಮಲಗಿದರು. 


          ಕ್ಷಣವೂ ಕಳೆದಂತೆ ಅನಿಸಿಲ್ಲ ಅದಾಗಲೇ ಬೆಳಗಾಗಿತ್ತು. ಒಲ್ಲದ ಮನಸಲ್ಲೇ ಎದ್ದು ಹೊರಡ್ತಾ ಇದ್ದೆ.

"ಮತ್ತೆ ಯಾವಾಗ ಬರೋದೋ" ಅಡುಗೆ ಮನೆಯಲಿ ದೋಸೆ ತಿರುವಿ ಹಾಕ್ತಾ ಅಮ್ಮಾ ಕೇಳಿದ್ಲು.

"ಕೆಲಸ ಇಲ್ಲದಿದ್ದಾಗ ಬರ್ತೀನಮ್ಮ" ಎನ್ನುತ್ತಾ ದೋಸೆ ತುತ್ತು ಬಾಯಿಗಿಳಿಸಿದೆ.

"ಸ್ನಾನ ಮಾಡಿದೋನು ದೇವರಿಗೆ ನಮಸ್ಕಾರ ಮಾಡಿದ್ಯಾ?" 

"ಅಮ್ಮಾ".... ಅಂದೆ ಇಲ್ಲಾ ಅನ್ನುವುದರ ಬದಲಾಗಿ.


          ಹೊರಟವನೆ ಮಲಗಿದ್ದ ಚಿನ್ನುಗೊಂದು ಮುತ್ತು ಕೊಟ್ಟು, ಅಪ್ಪ-ಅಮ್ಮನ್ನ ಕರೆದು ಆಶೀರ್ವಾದ ತೆಗೆದುಕೊಂಡೆ. "ಒಂದ್ನಿಮಿಷ" ಅಂತ ಒಳಹೋದ ಅಮ್ಮಾ ಕುಂಕುಮದೊಂದಿಗೆ ಹಿಂದಿರುಗಿದಳು... ಯಾವಾಗಲೂ ನಾನು ಹೊರ ಹೋಗುವಾಗ ಕುಂಕುಮ ಹಚ್ಚಿ ಕಳಿಸೋದು ಅಮ್ಮನ ಅಭ್ಯಾಸ. ನಾನು ನಾನಾಗೆ ದೇವರು-ದೇವಸ್ತಾನ ಅಂತ ಹೋಗೋಲ್ಲಾ ಅಂತ ಅವಳಿಗೆ ಗೊತ್ತು. ನಾನೂ ಕೂಡಾ ಅವಳ ಇಚ್ಚೆಯಂತೆ ಕುಂಕುಮವನ್ನ ನಾನಾಗೇ ಅಳಿಸದೆ ಅಮ್ಮನಿಂದ ಇಟ್ಟಿಸಿಕೊಂಡು ಹೊರಡ್ತೀನಿ. ಅಂತೆಯೇ ಹೊರಬಂದರೆ ಅಪ್ಪನ TVS ರೆಡಿ ಆಗಿ ನಿಂತಿತ್ತು.  


          ಶೂ ಧರಿಸಿ "ಬರ್ತೀನಮ್ಮ" ಅಂದು ಅಪ್ಪನ ಹಿಂದೆ ಕುಳಿತೆ. ಸಮಯ ಅಲ್ಲೇ ನಿಲ್ಲಬಾರದಾ ಅಂತ ಅನ್ನಿಸ್ತಾ ಇತ್ತು ಮನಸಿಗೆ. ಅಪ್ಪ ಗಾಡಿ start ಮಾಡಿದ್ದೇ ಅಮ್ಮಾ ಕೈ ಬೀಸಿ ಟಾ ಟಾ ಮಾಡಿದ್ಲು... ಕಣ್ಣ ಹನಿ ತುದಿಯಲ್ಲಿ ನಿಂತು ನನ್ನ ನೋಡ್ತಾ ಇತ್ತು. ಮುಂದೆ ಗಾಡಿ ತಿರುಗಿ ಅಮ್ಮಾ ಕಾಣಿಸೋ ಅಷ್ಟು ದೂರಾನೂ ಕೈ ಬೀಸ್ತಾ ಇದ್ದೆ. ಬಸ್ ಸ್ಟ್ಯಾಂಡ್ ಗೆ ಬಂದಿದ್ದೇ ಗಾಡಿ ನಿಲ್ಲಿಸಿ ನಿಂತ್ವಿ ನಾನೂ ಅಪ್ಪ.


"ಹುಷಾರು, ಟೈಮ್ ಟೈಮ್ ಗೆ ಊಟ-ತಿಂಡಿ ಮಾಡು, ಜಾಸ್ತಿ ನಿದ್ದೆ ಕೆಡಬೇಡ" ಅಪ್ಪ ಹೇಳಿದ್ರು.

"ಆಯ್ತಪ್ಪ, ನೀವು ಹುಷಾರು ಆರೋಗ್ಯದ ಕಡೇ ಗಮನ ಕೊಡಿ" ಅಂದೆ.. ಬಸ್ಸು ಹೊರಡೋಕೆ ಸಿದ್ದವಾಯ್ತು... ಜೊತೆಗೆ ನಾನೂ...   

"ಬರ್ತೀನಪ, ಸಂಜೆ ಕಾಲ್ ಮಾಡ್ತೀನಿ" ಅಂತ ಹೇಳಿ ಹೊರಟೆ. ಬಸ್ಸು ನಿಧಾನವಾಗಿ ಹೊರಡಿತು.. ಕಿಟಕಿಯಿಂದ ಅಪ್ಪನಿಗೆ ಕೈಬೀಸಿದೆ.. ಬಸ್ಸು ಮರೆಯಾಗೋ ತನಕ ನಿಂತಲ್ಲೇ ನಿಂತಿದ್ರು ಅಪ್ಪ...ನನ್ನಪ್ಪ...


          ನೂರಾರು ಬಾರಿ ಹೋಗಿದೀನಿ ಬಂದಿದೀನಿ .... ಪ್ರತಿ ಬಾರಿ ಕೂಡಾ ಮನೆಯಿಂದ ಬರೋವಾಗ ಎದೆ ಭಾರವಾಗಿರೊತ್ತೆ.. ಒಬ್ನೇ ವಾಪಾಸಾದರೂ ನೂರಾರು ನೆನಪುಗಳು, ಭಾವನೆಗಳು ತುಂಬ್ಕೊಂಡು ತಗೊಂಡು ಬರ್ತೀನಿ... ಮನೆ ಎದುರಲ್ಲಿ ಕಂಬನಿಯೊಡನೆ ನಿಂತಿದ್ದ ಅಮ್ಮಾ, ದಾರಿಯಲ್ಲಿ ನಿಂತಿದ್ದ ಅಪ್ಪನ್ನ ನೆನೆಸ್ತಾ ಎದೆ ಬಡಿತ ಜೋರಾಗುತ್ತಲೇ... ಕಿಟಕಿಯಿಂದ ಮಳೆ ಹನಿ ಮುಖಕ್ಕೆ ಸಿಡಿದು ನನ್ನ ದಿಗಿಲನ್ನ ತಣಿಸಿತು. ಕಿಟಕಿ ಹಾಕಿ ಎರಡೂ ಕಾಲನ್ನ ಮುಂದಿನ ಸೀಟಿಗೆ ಒತ್ತಿ ಕೂತೆ. ತಿರುಗಿ ನೋಡಿದ್ರೆ conductor ಎದುರು ಬಂದು ನಿಂತಿದ್ದ ಅದೇ "ಎಲ್ಲಿಗೆ" ಅನ್ನೋ ಪ್ರೆಶ್ನೆನಾ ಹೊತ್ಕೊಂಡು....

ರೋಹಿತ್..
Email: rohit.biogem@gmail.com
Mob: +91-9620496302

Tuesday, July 13, 2010

ಎತ್ತಿ ಬಾ ಮತ್ತೆ ಅವತಾರವ....

 ಈ ದೇಶ ಉದ್ದಾರ ಆಗೋಲ್ಲ...! ಜಗತ್ತಿನಲ್ಲಿ ಏನೇ ಆದರೂ, ಮನುಷ್ಯ ಮಾತ್ರ ತಾನು ಬುದ್ದಿ ಕಲಿಯೋ ಯಾವ ಲಕ್ಷಣನೂ ತೋರಿಸ್ತಿಲ್ಲ... ನಡುದಾರಿಯಲ್ಲಿ ನಿಂತುಕೊಂಡು ಹಗಲು ದರೋಡೆ ಮಾಡ್ತಿದ್ರೂ, ವಿರೋದವಾಗಿ ಏಳ್ತಾ ಇರೋ ಯಾವ ದನಿಯೂ ಕೇಳುಗನ ಹತ್ತಿರ ಸಹ ಸುಳಿತಾ ಇಲ್ಲ.. ಸಾಯೋವಾಗ ಜೊತೆಗೆ ಹೊತ್ಕೊಂಡು ಹೋಗೋದು ನಾವೇ ಕಂಡು ಹಿಡಿದ 'ಶೂನ್ಯ'ವನ್ನಾ ಅಂತ ತಿಳಿದಿದ್ದರೂ, ಕೆಲವರ ಆಸೆಗಳಿಗೆ ಮಾತ್ರ ಮಿತಿ ಎಂಬುದು ಇಲ್ವೇ ಇಲ್ಲ. ತಾನೇ ತನ್ನೊಳಿತಿಗೆ ಸಂಶೋಧಿಸಿದ ಯಾವ ಆವಿಷ್ಕಾರಗಳೂ, ಆಟಂ ಬಾಂಬ್ ಗಳೂ, ತನ್ನೊಳಗಿನ ನೀಚ ಬುದ್ದಿಯನ್ನ ಸುಟ್ಟಿ ಹಾಕ್ತಾ ಇಲ್ಲ.. ಸಮಾಜದಲ್ಲಿ ಆಗ್ತಾ ಇರೋ ಪ್ರತಿ ಏರುಪೇರನ್ನ ಸರಿಪಡಿಸಲು ದೇವರು ಅವತಾರ ಎತ್ತಿ ಬರ್ತಾನೆ ಅಂತ ನಂಬ್ಕೊಂಡು ಕಾಯೋ ಜನ ಇರೋ ತನಕ ಈ ದೇಶ ಉದ್ದಾರ ಆಗೋಲ್ಲಾ... ಖಂಡಿತವಾಗಲೂ ಆಗೋಲ್ಲಾ...

          ಒಂದು ಮಗು ಹುಟ್ಟಿದಾಗ ಮಾಡಿಸೋ ಅದರ Birth Certificate ಇಂದ ಹಿಡಿದು, ಸತ್ತಾಗಿನ Death Certificate ವರೆಗೂ.., ಗಾಡಿ ಓಡಿಸೋಕೆ ಇರೋ D.L (Driving License) ಇಂದ ಹಿಡಿದು, ಓದಿಸೋಕೆ ಇರೋ ನಮ್ಮ "University (ವಿಶ್ವವಿದ್ಯಾನಿಲಯ)" ವರೆಗೂ.., ಪ್ರತಿಯೊಂದೂ ನಿಮಗೆ ಸುಲಭದಲ್ಲಿ ದಕ್ಕಬೇಕು ಅಂದ್ರೆ ನಿಮ್ಮಲ್ಲಿ Vitamin-M ಇರಲೇಬೇಕು! ಭಾರತದಲ್ಲಿ ಒಂದು ವ್ಯವಹಾರ (Bussiness)ಕ್ಕೆ ಕೈ ಹಾಕಬೇಕು ಅಂದ್ರೆ ಕೇವಲ ಒಂದು ಒಳ್ಳೆಯ ಯೋಚನೆಯ ಯೋಜನೆ ಇದ್ರೆ ಸಾಲದು..! ವಿಳಾಸ ಇಲ್ಲದೇ ಇರೋ ಒಂದು ತುಂಬು ನೋಟುಗಳ ಎನ್ವೆಲೋಪ್ (Envelop) ಕೂಡಾ ಬೇಕು- ಲಂಚ!. ಆಗ ಮಾತ್ರ ಯಾವುದೇ ತೊಂದರೆ ಇಲ್ಲದೆ ಪರವಾನಗಿ ಎನ್ನೋದು ಸಿಕ್ಕಿಬಿಡತ್ತೆ ನಿಮಗೆ. ಭಾರತದಲ್ಲಿನ ಭ್ರಷ್ಟಾಚಾರದ ತೀವ್ರತೆ ಬಗ್ಗೆ ಗಮನ ಸೆಳೆವಂತಹ ಒಂದು ಕಥೆಯನ್ನ ಅಗಸ್ಟ್ 1997 ರಲ್ಲೇ Hinduism Today ನಲ್ಲಿ ಪ್ರಕಟಗೊಂಡ "Bribery in India" ಎಂಬ ಲೇಖನದಲ್ಲಿ ಲೇಖಕ ಹೇಳ್ತಾನೆ.

          ಒಬ್ಬ Income Tax Commissioner, ಉದ್ಯಮಿಯಾದ ತನ್ನ ಗೆಳೆಯನ ತೆರಿಗೆ ಪಾವತಿಯ ವಿಚಾರವಾಗಿ ಸಲಹೆ ನೀಡುತ್ತಿರುತ್ತಾನೆ. ಹಾಗಿದ್ದಾಗ ಅವನು ತನ್ನ ಗೆಳೆಯ 1,00,000/- ರೂ ಗಳನ್ನ ನಾಯಿಗಾಗಿ ವೆಚ್ಚ (Dog Account) ಮಾಡಿದನ್ನ ಕಂಡು ಆಶ್ಚರ್ಯಗೊಳ್ಳುತ್ತಾನೆ. ಇರುವ ನಾಲ್ಕು ನಾಯಿಗಳಿಗಾಗಿ ಒಂದು ಲಕ್ಷ ರೂಪಾಯಿಗಳನ್ನ ಖರ್ಚು ಮಾಡಿದ ರೀತಿಯನ್ನ ಕೇಳಲಾಗಿ, "ಅಯ್ಯೋ, ನನ್ನ ನಾಲ್ಕು ನಾಯಿಗಳ ಹೊರತಾಗಿ, ನಾನು ಕಡೇ ಪಕ್ಷ 50 ನಾಯಿಗಳನ್ನ ಉದ್ಯಮದ ಒಳಿತಿಗಾಗಿ ಸಾಕಬೇಕು. ಬೇರೆ ಬೇರೆ ಸರ್ಕಾರಿ ಅಧಿಕಾರಿಗಳಿಗೆ ಕೊಟ್ಟ ಲಂಚದ ಅಕೌಂಟ್ ನ ಯಾವ ಹೆಸರಲ್ಲಿ ತೋರಿಸೋದು ಗೆಳೆಯ??.. ಹಾಗಾಗಿ ಅವುಗಳನ್ನ Dog Account ನಲ್ಲಿ ತೋರಿಸೋದು ಇದಕ್ಕಾಗಿ ನಾನು ಕಂಡುಕೊಂಡ ಪರಿಹಾರ" ಅಂತ ಹೇಳ್ತಾನೆ... ಹೇಗಿದೆ ನೋಡಿ...!!?



           ಅಂಕಿ ಅಂಶಗಳ ಪ್ರಕಾರ ಭಾರತದಲ್ಲಿ ಕೇಳಲಾಗುತ್ತಿರುವ ಲಂಚದಲ್ಲಿ 91% ಡಿಮಾಂಡ್ ಮಾಡುತ್ತಿರುವವರು ಸರ್ಕಾರಿ ನೌಕರರು. ಇದರಲ್ಲಿ ಅರ್ಧದಷ್ಟು ಮಂದಿ ಲಂಚ ಪಡೆಯುತ್ತಿರುವುದು ಸರಿಯಾದ ಸಮಯದಲ್ಲಿ ನಮ್ಮ ಕೆಲಸ ಮಾಡಿ ಕೊಡುವುದಕ್ಕೆ..!. ಎಂತಹ ವಿಪರ್ಯಾಸ ಇದು...? ಪ್ರತಿಯೊಂದು ಸವಲತ್ತುಗಳೂ, ತಿಂಗಳು ತಿಂಗಳು ತಪ್ಪದೇ ಬರೋ ಸಂಬಳ, ಹೆಚ್ಚು-ಕಮ್ಮಿ ವರ್ಷ ಪೂರ್ತಿ ಸಾಕಾಗೋ ಅಷ್ಟು extra ರಜಗಳು... ಇಷ್ಟೆಲ್ಲಾ ಇದ್ದು ಕೊಟ್ಟ ಕಾಸಿಗೆ (ಸಂಬಳ, ಲಂಚ ಅಲ್ಲ...!) ಪ್ರಾಮಾಣಿಕವಾಗಿ ಕೆಲಸ ಮಾಡೋ ಅಂತವರು ಎಲ್ಲೋ ಒಂದಿಬ್ಬರು ಬೆರಳೆಣಿಕೆಗೂ ಸಿಗದೇ ಹೋಗ್ತಾರೆ. ಈ ತರ ಲಂಚಾನ expect ಮಾಡೋ ಜನರಲ್ಲಿ ರಾಜಕಾರಣಿಗಳು ಮತ್ತು ಅವರ ಸಹವರ್ತಿಗಳು, ಪೋಲಿಸ್/ಆರೋಗ್ಯ ಇಲಾಖೆಯ ಸಿಬ್ಬಂದಿ ವರ್ಗದವರು, Passport , DL ತರಹದ document ಮಾಡಿಸಿ ಕೊಡೋಕೆ ಅಂತ ಹುಟ್ಟಿಕೊಂಡಿರೋ ಮಧ್ಯವರ್ತಿ(agency) ಗಳು ಹಾಗೂ ವಿಶ್ವವಿದ್ಯಾನಿಲಯಗಳಲ್ಲಿರೋ ಅತೀ ಬುದ್ದಿವಂತರೂ ಸೇರಿದಾರೆ ಅಂತ ಯಾರಿಗೂ ಹೇಳಿ ತಿಳಿಸೋ ಅವಶ್ಯಕತೆ ಇಲ್ಲ ಅನ್ಸೊತ್ತೆ. ಎಷ್ಟರ ಮಟ್ಟಿಗೆ ಇವರುಗಳು ತಮ್ಮ ಕಿಸೆಗಳಿಗೆ ಕಂಡವರ ಕಾಸು ಇಳಿಸಿಕೊಳ್ಳುತ್ತಾರೆ ಅಂದರೆ ಅವರ ಈ outside income, ಸಂಬಳಕ್ಕಿಂತಾ ಎಷ್ಟೋ ಶೇಕಡಾ ಹೆಚ್ಚಿರುತ್ತದೆ. ಇಂತಹ ಕೆಲಸಕ್ಕೆ ಸೇರಿಕೊಳ್ಳಲು ಇರೋ ಬೇಡಿಕೆಗಳೂ ಅಷ್ಟೇ. ಕೆಲಸ ನೀಡೋಕೆ ಲಕ್ಷ offer ಮಾಡೋನೊಬ್ಬ!., ಕೇಳಿದಷ್ಟು ಕಾಸು ಕೊಟ್ಟು ಬರುವವನೊಬ್ಬ!. ಆತನೋ, ತಾ ಕೊಟ್ಟ ಲಂಚದ ಹಣವನ್ನಾ ಬಡ್ಡಿ ಸಮೇತ ಲಂಚದ ಹೆಸರಲ್ಲೇ ಪಡೆದು, ಲೆಕ್ಕ ಚುಕ್ತಾ ಆಯ್ತು ಅಂತ ಹೇಳಿ ಪಾಪ ಕಳಿದುಕೊಳ್ಳೋಕೆ ವರ್ಷ ವರ್ಷ ತಿರುಪತಿಗೆ ಮುಡಿ ಹರಕೆ ನೀಡುತ್ತಾನೆ. ಮಾಡು (ಮೇಲ್ಚಾವಣಿ) ಸೋರುತಿರೋ ಮನೆಯಲ್ಲಿರೋ ಒಬ್ಬ ಬಡಪಾಯಿ ಕೂಡಾ ಆತನ ಕಣ್ಣಿಗೆ ಹಣ ಬಿಡೋ ಮರವಾಗಿ ಕಾಣ್ತಾನೆ. ನಿನ್ನ ಬೇರು ಒಣಗಿದರೂ ಪರವಾಗಿಲ್ಲ ನನಗೆ ಹಣ್ಣು ಕೊಡೊ ಮಹರಾಯ ಅಂತಾನೆ....


ಕೃಪೆ: http://trak.in/tags/business/2009/06/30/india-corruption-bribery-report


          ಎಲ್ಲರಿಗೂ ಈ ಲಂಚದ ಬಿಸಿ ತಟ್ಟೋದಿಲ್ಲ. ಧನಿಕನಿಗೆ ಇದರಿಂದಾಗೋ ನಷ್ಟವೀನು ಇಲ್ಲ. ದುಡಿದರೆ ಮಾತ್ರ ಕೂಳು ಅನ್ನೋ ಪರಿಸ್ಥಿತಿಯಲ್ಲಿರೋ ಬಡವ/ಮದ್ಯಮವರ್ಗದ ಬಡಪಾಯಿ ಮಾತ್ರ ಅಣು ಜೀವಿ, ತೃಣ ಸಮಾನ.. ಏನೊಂದೂ ಪಡಿಯೋಕೂ ಹರ ಸಾಹಸ ಪಡೋದೇ ಅವನ ಜೀವನ..

          ಬುದ್ದಿವಂತರನ್ನ ಹುಟ್ಟಿ ಹಾಕೋಕೆ ಸರ್ಕಾರ ಎದ್ದು ನಿಲ್ಲಿಸಿರೋ ನಮ್ಮ ಅತ್ಯುನ್ನತ University ಗಳಲ್ಲಿ ಎಂತೆಂತವರು ಇರಬಹುದು ಅನ್ನೋ ಬಗ್ಗೆ ಕೆಲವೊಂದು ಸಂಗತಿ ಹೇಳಲೇಬೇಕು. ಮಕ್ಕಳಿಗೆ/ವಿದ್ಯಾರ್ಥಿಗಳಿಗೆ Percentage ಲೆಕ್ಕದಲ್ಲಿ ಮಾರ್ಕ್ಸ್ ಕೊಡೋರು ಮಾಡ್ತಿರೋ Percentage ದಂಧೆ ಇರಬಹುದು, Transfer Certificate (TC) ಪಡಿಯೋದಕ್ಕೆ ಹಣ transfer ಮಾಡು ಅಂತ ಹೇಳೋ ಅದ್ಯಾಪಕೇತರ ನೌಕರರಿರಬಹುದು, Development Section - Finance Section ಅಂದ್ಕೊಂಡು ಒಂದೊಂದು bill/letter ನ pass ಮಾಡೋಕೆ 'ಕಾಯಿಸಿ-ಕಾಯಿಸೋ' ತಂತ್ರ ಮಾಡೋ SDA-FDA ಗಳಿರಬಹುದು.., ವಿದ್ಯಾರ್ಥಿಗಳಿಗೆ ಬರುವ OBC, SC-ST Fellowship ಗಳಲ್ಲೂ ತಮ್ಮ ಲಾಭನ ಕೇಳೋ ಅಧಿಕಾರಿಗಳಿರಬಹುದು... ಬಂದಿರೋ refundable ಹಣದ Cheque ಬಂದೇ ಇಲ್ಲ ಅಂತ ಕೈ ಬಿಸಿ ಮಾಡದ ವಿದ್ಯಾರ್ಥಿಗಳಿಗೆ ಹೇಳಿ ಅವರು ತಮ್ಮ ಪ್ರಯತ್ನ ಕೈ ಬಿಟ್ಟಾಗ ತಾವೇ ಸಹಿ ಮಾಡಿ ಸ್ವೀಕರಿಸೋ ಕೀ(ಳು)ಲಾಡಿ ಗಳಿರಬಹುದು..ಇಷ್ಟೇ ಯಾಕೆ ವಿದ್ಯಾರ್ಥಿಗಳ ಹೆಸರಲ್ಲಿ ತಾವೇ scholarships ಗೆ apply ಮಾಡಿ ಅವನಿಗೆ ತಿಳಿಯದೇ ಅವನ ಪಾಲಿನ ಅವಕಾಶವನ್ನ ಬಳಸಿಕೊಳ್ಳುವ ನೀಚ ನಿಸ್ಸೀಮರೂ ನಮ್ಮೊಳಗೇ, ನಮ್ಮೊಡನೆ ಇರಬಹುದು... ಎಲ್ಲೆಡೆ ತೂತು ಬಿಟ್ಟು ನೀರು ಹೋದ ಜಾಗವನ್ನ ನೆಪ ಮಾತ್ರಕ್ಕೆ ಹುಡುಕೋ ದೊಡ್ಡವರೂ ಸಿಗಬಹುದು...?? 


          ಇದಕ್ಕೆಲ್ಲಾ ಕೊನೆ ಎಂಬುದು ಇಲ್ವಾ? ಭ್ರಷ್ಟಾಚಾರದ ನಿರ್ಮೂಲನೆ ಸಾಧ್ಯಾನೇ ಇಲ್ವಾ? ಇಂತವರನ್ನು ಸುಮ್ಮನೆ ಬಿಟ್ಟರೆ ತಾಯಿ ಭಾರತ ಮಾತೆಗೂ ತುಂಡು ಬಟ್ಟೆ ಕೊಟ್ಟು ನಿಲ್ಲಿಸದೆ ಬಿಡ್ತಾರ ಇವರು?? ಈ ಶಾಪದ ಪರಿಹಾರಕ್ಕೆ ಕೆಲವು ನನ್ನೊಳಗಿನ ವಿಚಾರಗಳು ಹೀಗಿದೆ...
  • ಆದಷ್ಟೂ ಸರ್ಕಾರಿ ಕಛೇರಿಗಳು ಹಾಗೂ ಜನತೆಯ ನಡುವಿನ ಮದ್ಯವರ್ತಿಗಳನ್ನ ತಡೆಯುವುದು.
  • ಖಾಸಗಿ ವಲಯಗಳಲ್ಲಿನಂತೆ ಪ್ರತಿ ಸಿಬ್ಬಂದಿಗಳಿಗೂ ದಿನದ ಗುರಿಯನ್ನ(Target) ನೀಡುವುದಲ್ಲದೆ, ತನ್ನಲ್ಲಿ ಬಂದ ದಾಖಲೆಯನ್ನು 24 ಗಂಟೆಯೊಳಗೆ ಪರಾಮರ್ಶಿಸಿ ಹಿಂದಿರುಗಿಸಬೇಕು ಅಥವಾ ಮುಂದಿನ ಅವಶ್ಯ ಕಾರ್ಯಗಳಿಗೆ ಕಳಿಸಬೇಕು ಎನ್ನುವಂತಹ ನಿಲುವಳಿಗಳನ್ನ ಹೊರಡಿಸುವುದು.
  • ಸರ್ಕಾರಿ ನೌಕರರ ವೇತನ ಭತ್ಯೆಯನ್ನು ಇರುವ ಅವಕಾಶಗಳ ಆಡಿಯಲ್ಲಿ ಹೆಚ್ಚಿಸುವುದು. 
  • ಭ್ರಷ್ಟಾಚಾರದ ವಿರುದ್ದ ಕಟ್ಟು ನಿಟ್ಟಾದ ಕಾನೂನು ರೀತಿಯ ಕ್ರಮಗಳನ್ನ ಜರುಗಿಸುವುದು.
  • ಭ್ರಷ್ಟಾಚಾರದ ಎದಿರು ಹೋರಾಡುತ್ತಿರೋ ಲೋಕಾಯುಕ್ತರಿಗೆ ಚೌಕಾಸಿ ಮಾಡದೆ ನಿಭಂದನಾ ಮುಕ್ತ ಅಧಿಕಾರ ಕೊಡುವುದು.
  •  ಬಹುಮುಖ್ಯವಾಗಿ ಲಂಚಮುಕ್ತ ಭಾರತದ ನಿರ್ಮಾಣಕ್ಕೆ ಪ್ರತಿಯೋರ್ವನೂ ತಾನು ಸಿದ್ದನಾಗಿ ನಿಂತು, ಹೋರಾಡೋ ಮನೋಭಾವನೆ ಬೆಳಸಿಕೊಳ್ಳುವುದು.

ಇಂತಹ ಪಿಡುಗಿನ ಎದುರು ಸೆಣಸಾಡೋದು ಸಂತೋಷ್ ಹೆಗಡೆಯವರಂತಹ ಬರಿಯ  ನಿಷ್ಟಾವಂತ ಲೋಕಾಯುಕ್ತರ ಕೆಲಸ ಮಾತ್ರವಲ್ಲ.. ಯುವಶಕ್ತಿ ಮನಸು ಮಾಡಿದರೆ ಆಗದ  ಕೆಲಸವೆಂಬುದಾವುದೂ ಇಲ್ಲ.  ಯಾವ ಕೃಷ್ಣನೂ ನಾವು ಹುಟ್ಟಿಹಾಕಿದ ಮುಳ್ಳಿನ ಮರವನ್ನ ಕಿತ್ತೆಸಿಯೋಕೆ ಅವತಾರ ಎತ್ತಿ ಬರಲಾರ. ಈ ಪರಿಯ ಸಮಸ್ಯೆಗೆ ನಮ್ಮನ್ನೇ ನಾವು ಎಚ್ಚರಿಸಿ, ಎಬ್ಬಿಸಿ, ಎದಿರು ನಿಂತರೆ ಮಾತ್ರ ಈ ಹೆಮ್ಮಾರಿಯ ಬುಡಕ್ಕೆ ಕೊಡಲಿ ಏಟು ಕೊಡಲು ಸಾದ್ಯ. ನವ ಭಾರತ ನಿರ್ಮಾಣದ ಹೊಸ ಕಾರ್ಯಕಲ್ಪಕ್ಕೆ ಜೊತೆ ಸೇರಿ ನಡೆವ ಪಣತೊಡುವ ಸಮಯ ಬಂದಿದೆ. ಹಾಗಾದಲ್ಲಿ ಮಾತ್ರ ಈ ಅಂಕಣದ ಮೊದಲ ಸಾಲು ಸುಳ್ಳಾಗಳು ಸಾದ್ಯ.... 

ಗಡಿಯೊಳಗಿನ ಸೈನಿಕರು ನಾವಾಗುವ...
ತಪ್ಪು ನಡೆ ಸಹಿಸದ ಸಿಡಿಲಾಗುವ...
ತಾಯಿ ಭರತೆಯ ನಗುವ ಉಳಿಸಲು,
ಎತ್ತೆತ್ತಿ ಬರುವ ಮತ್ತೆ ಅವತಾರವ... 

- ರೋಹಿತ್

Wednesday, July 7, 2010

ಕಳ್ಳ ಕನಯ್ಯ...


ಕದ್ದೆ ಮಡಿಕೆಯ ಬೆಣ್ಣೆಯ.. ಮುದ್ದು ಕೃಷ್ಣ ಎಂದರು..
ಕದ್ದೆ ಕನಸ ಕನ್ಯಾಮಣಿಗಳ.. ಕಳ್ಳ ಕೃಷ್ಣ ಎಂದು ಕರೆದರು..
 
ಅಣ್ಣನ ಹೆಸರಿಗೆ ಮಾದರಿಯಾಗಿ, ಸಾರಥಿಯಾದೆ ನೀ ಧರ್ಮಸಂಸ್ಥಾಪನೆಗೆ.. 
 ಜೀವ ಗೆಳೆಯನು ನೀನೆ..
ನಿಂತೆ ಲೋಕದ ಒಳಿತಿಗೆ, ಅವತಾರಗಳ ನೆಪದಿ.. 
 ಜಗದೋದ್ದಾರಕ ನೀನೆ.. 
ಹೆಣ್ಣ ಮನಸಿಗೆ ಪ್ರೀತಿಯ ಕಣ್ಣು, ಪಡ್ಡೆ ಹುಡುಗರ ಗುರುವೋ ನೀ..! 
ಮತ್ತೆ ಬಾ ಎತ್ತಿ ಅವತಾರವ.. 
ತೊಲಗಿಸಿ ಕಲಿಯುಗದ ಕಂಸರ.. ಹರಿಸು ಒಲವಿನ ಕೊಳಲ ದನಿ...
- ರೋಹಿತ್

Monday, June 28, 2010

ತೊದಲು ನುಡಿ....

ಅವಳದೋ ಸಾರ್ಥಕ ಬದುಕು. ನಿಸ್ವಾರ್ಥತೆಯ ಕೋಟೆಯೊಳಗಿನ ಮಮತೆಯ ಕೊಳದೊಳಗೆ ಮುಗ್ದತೆಯ ಸೌಗಂಧ ತುಂಬಿ ಬೆಳೆದ ಪ್ರೀತಿ ಪುಷ್ಪ ಅವಳು. ಸೋತು ಕುಗ್ಗಿದ, ನಗುವನ್ನೇ ಮರೆತಿಹ, ಬಾಳೋ ಆಸೆ ತೊರೆದಂತವನೂ ಕೂಡ ಎದ್ದು ನಿಂತು, ನಕ್ಕು, ಬಾಳೋ ದಾರಿಯೆಡೆಗೆ ಸರಿಯುವಂತೆ ಮಾಡೋ ಸ್ಫೂರ್ತಿ ಅವಳು. ಇಡೀ ಜೀವ ಸಂಕುಲದ ನಗುವನ್ನ ಚಿತ್ರಿಸಬಹುದಾದಂತಹ ಎರಡಕ್ಷರದ ಮಹಾಕಾವ್ಯ ಅವಳು. ಹೌದು. ಆಕೆ ಇನ್ನಾರು ಆಗಿರಲು ಸಾದ್ಯವೇ ಇಲ್ಲ... ನೋವ ಬಟ್ಟಲಿಂದಲೂ ನಗುವ ಉಣಬಡಿಸಬಲ್ಲ ಏಕೈಕ ಸೃಷ್ಠಿ 'ಅಮ್ಮಾ'.

          ಬರೆಯೋದಕ್ಕೆ ಅಂತ ಲೇಖನಿ ಹಿಡಿದರೆ ಮೊದಲು ಅ, ಆ.. ತಿದ್ದಿಸಿದ ಅಮ್ಮನ ನೆನಪಾಗೊತ್ತೆ. ಮೊದಲ ಬಾರಿಗೆ 'ಅ' ಅನ್ನೋ ಅಕ್ಷರವನ್ನ ತಪ್ಪಿಲ್ಲದೆ ಬರೆದಾಗ ಆ ನನ್ನಮ್ಮನಿಗಾದ ಸಂತೋಷದ ನೆನಪು ನನಗಿಲ್ಲದೇ ಇದ್ದರೂ, ಮಗ ಇಡೀ ಲೋಕ ಗೆದ್ದ ಸಂತೋಷ ಅವಳಲ್ಲಿ ತುಂಬಿರೊತ್ತೆ ಅಂತ ನನಗೆ ತಿಳಿದಿದೆ. ಆ ಮನಸೇ ಹಾಗೆ...! ತನಗೆ ಅಂತ ಯಾವತ್ತೂ ನಕ್ಕಿಲ್ಲ, ಏನನ್ನೂ ಬಯಸಿಲ್ಲ ಕೂಡಾ. ಅವಳ ಮಟ್ಟಿಗೆ ತನ್ನ ಕಂದಮ್ಮನೇ ಎಲ್ಲಾ. ಆಗ ತಾನೇ ನಾನು ಕಲಿತ 'ಅಮ್ಮಾ' ಎಂಬ ಪದವನ್ನು ಅ..ಮ್ಮ್....ಆ..... ಎಂದು ಚೂರು ಚೂರು ಮಾಡಿ ತೊದಲು ನುಡಿದಾಗ ಆಕೆಯ ಎದೆಯಾಳದಲ್ಲಿ ಉಕ್ಕಿದ ಸಂತಸದ ಕಡಲು ನನ್ನ ಮೇಲೆ ಮುತ್ತಾಗಿ ಎರಗಿದ್ದು ನಿಜ. ಕಣ್ಣಲ್ಲಿ ನಾನು ಎಂ.ಬಿ.ಬಿ.ಎಸ್. ಓದಿ ಡಾಕ್ಟರ್ ಆಗ್ತೀನಿ ಅನ್ನೋ ಕನಸು ಕಟ್ಟಿಕೊಂಡೆ ಬೆಳಸಿದ್ದಳು ನನ್ನ. ನಾನೋ, ಒಣ ತುಂಟ! ಕಂಡಿದ್ದೆಲ್ಲ ಬೇಕು ಅನ್ನೋ ಹಠ ಬೇರೆ.. ಕೊಟ್ಟ ಕಷ್ಟ ಒಂದಾ..ಎರಡಾ..? ಇತ್ತ ಪ್ರತಿ ನೋವಿಗೆ ಅತ್ತ ಕಡೆಯಿಂದ ಪುಟ್ಟ ನಗುವೇ ಉತ್ತರವಾಗಿರ್ತಾ ಇತ್ತು. ತೀರ್ಥಹಳ್ಳಿಯ ಬೇಗುವಳ್ಳಿಯಲಿ ಇದ್ದಾಗ ಸ್ನಾನ ಮಾಡಿಸಲು ಮೈಗೆ ಎಣ್ಣೆ ಹಚ್ಚಿ ಬಿಟ್ಟಂತಹ ಒಂದುವರೆ ವರ್ಷದ ನಾನು, ಯಾರ ಅರಿವಿಗೂ ಬಾರದೆ, ಮನೆ ಎದುರಿನ ರಸ್ತೆಯ ನಡುವೆ ಬಂದು ನಿಂತುಕೊಂಡು ಹೋಗೋ-ಬರೋ ಬಸ್ಸುಗಳಿಗೆ ಟಾ-ಟಾ ಮಾಡ್ತಿದ್ದನ್ನು ನೆನೆಸಿ ಈಗಲೂ ದಿಗಿಲಾಗುತ್ತಾಳೆ ನನ್ನಮ್ಮ. 




ತನ್ನ ಜೀವದೊಳಗೆ ನನ್ನ ಜೀವ ಹಿಡಿದು,
ನಾನಿತ್ತ ನೋವ ನವಮಾಸ ತಡೆದು,
ನೀ ಕೊಟ್ಟೆ ನನಗೆ ಈ ಜನುಮವಾ..
ಅಮ್ಮಾ.. ಈ ಜೀವ ನಿನದಲ್ಲವಾ..??



 
          ಇನ್ನೂ ನೆನಪಿದೆ, ಬ್ಯಾಟು-ಬಾಲು ಹಿಡ್ಕೊಂಡು ಕ್ರಿಕೆಟ್ ಆಡೋಕೆ ಹೋಗಿ ನನಗಿಂತ ೨-೩ ವರ್ಷ ದೊಡ್ಡೋನ ಜೊತೆ ಜಗಳ ಆಡಿ, ಮುಂಗಾರು ಮಳೆ ಸ್ಟೈಲ್ ನಲ್ಲಿ ಅವನಿಗೆ ಹೊಡೆದು!, ಏನೂ ನಡೆದಿಲ್ಲ ಅನ್ನೋ ತರ ತಣ್ಣಗೆ ಮನೆಗೆ ಬಂದು ಸೇರ್ಕೊಂಡ್ ಮೇಲೆ, ಆ ಮಹಾಶಯ ಬಂದು ಅಪ್ಪನ ಹತ್ರ ಕಂಪ್ಲೈಂಟ್ ರೆಜಿಸ್ಟರ್ ಮಾಡಿದಾಗ, ಕೈಗೆ ಸಿಕ್ಕ ತಮ್ಮ ಲಾಟಿ ನ ಅಪ್ಪ ಎತ್ಕೊಂಡಿದ್ದೆ ತಡ ಅಡುಗೆ ಮನೆಯಲ್ಲಿದ್ದವಳು ಓಡಿ ಬಂದು ನನ್ನ ತನ್ನ ಹಿಂದಕ್ಕೆ ಎಳ್ಕೊಂಡು, ಬೆಟ್ಟದಂತಹ ಪ್ರೀತಿನಾ ನನಗೆ ಶ್ರೀರಕ್ಷೆಯಾಗಿ ಹಿಡಿದಿದ್ದಳು. ಆ ಪ್ರೀತಿ ಕಂಡು ಲಾಟಿ ಗತಿ ಇಲ್ಲದೆ ತನ್ನ ಮೂಲೆ ಸೇರ್ಕೊಂಡಿತ್ತು. ಹಾಗೆ ನನ್ನ ಅಪ್ಪನ ಸಿಟ್ಟು ಕೂಡಾ!!

          ಅಮ್ಮ ಇಲ್ಲದೆ ಇದ್ರೆ ಒಂದು ಕ್ಷಣನೂ ಕೈ-ಕಾಲು ಆಡ್ತಿರ್ಲಿಲ್ಲ ನನಗೆ (ಈಗಲೂ ಕೂಡಾ). ಅವಳು ಕುಳಿತುಕೊಂಡರೆ ಸಾಕು ನಾನು ಸುಮ್ಮನೆ ಅವಳ ಪಕ್ಕಕೆ ಹೋಗಿ, ಹಾಗೇ ಅವಳ ಅಮೃತದ ಮಡಿಲಲ್ಲಿ ಮಲಗಿ, "ಅಮ್ಮಾ, ತಲೆ ಸವರಮ್ಮಾ" ಅಂತ ಹೇಳ್ತಾ ಇದ್ದೆ. ಹಾಗೇ ನಿದ್ದೆ ಹತ್ತಿದ ನನ್ನ ನಿಧಾನವಾಗಿ ಕಾಲಿನಿಂದ ದಿಂಬಿಗೆ ವರ್ಗಾಯಿಸಿ ಅಡುಗೆ ಮನೆಯೆಡೆಗೆ ಹೋಗ್ತಾ ಇರುವಾಗ ತುಟಿಯಂಚಲಿ ಸಣ್ಣಗೆ ನಕ್ಕು ತಿರುಗಿ ಮಲಗ್ತಾ ಇದ್ದೆ. ಅಂತೆಯೇ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕೆಲಸ ಮಾಡುತಿದ್ದ ಅಮ್ಮ ಮೂರು ದಿನಗಳ ಟ್ರೈನಿಂಗ್ ಗಾಗಿ ಶಿವಮೊಗ್ಗಕೆ ಹೋದಾಗ ದುಃಖ ತಾಳಲಾರದೆ ಅವಳ ಸೀರೆಯನ್ನ ಅಪ್ಪಿಕೊಂಡು ಅತ್ತಿದ್ದು ನೆನಪ ಪರಧಿಯಿಂದಾಚೆ ಹೋಗಲಾರದ ಕ್ಷಣಗಳಲ್ಲೊಂದು.



 ತಾರ ಸಾಗರದ ನಡುವೆ,
ಕಳೆದು ಹೋದೆನೆಂಬ ಭಯದಿ
ಬೆಳದಿಂಗಳ ಕೈ ಚಾಚಿ ಹಿಡಿದಪ್ಪಿದನು ತಾಯ ಒಡಲ...
ಕತ್ತಲಿದೆ ಕಂದಾ, 
ಒಡನೆ ಬರುವೆನು ನಾನು,
ಎನ್ನುತಾ ಉಕ್ಕಿತು ಮಗನೆಡೆಗೆ
ಮಮತೆಯ ಕಡಲ ಅಂತರಾಳ..



 
          ಪ್ರತಿ ಗುರುವಾರ Immunization ಅಂತ ನೂರಾರು ಮಕ್ಕಳಿಗೆ ಚುಚ್ಚುಮದ್ದು (ಇಂಜೆಕ್ಷನ್) ಕೊಡ್ತಿದ್ರೂ, ನನಗೆ ಕೊಡೋದಕ್ಕೆ ಪಕ್ಕದ ಮನೆ ಆಂಟಿ ನೇ ಆಗಬೇಕಿತ್ತು. ನಾನೋ, ಸ್ಕೂಲ್ ನಲ್ಲಿ  ಆಂಟಿ ಹತ್ರ 'ಅಮ್ಮ ಇಂಜೆಕ್ಷನ್ ಕೊಟ್ಟಿದಾರೆ' ಅಂತಲೂ, ಮನೆಯಲ್ಲಿ ಅಮ್ಮನ ಹತ್ರ 'ಸ್ಕೂಲ್ ನಲ್ಲಿ ಆಂಟಿ ಇಂಜೆಕ್ಷನ್ ಕೊಟ್ಟಿದಾರೆ' ಅಂತಲೂ ಹೇಳಿ ತಪ್ಪಿಸಿಕೊಂಡು ಕೊನೆಗೆ ಸಿಕ್ಕಿ ಬೀಳ್ತಾ ಇದ್ದೆ. ಆಗಲೂ ಸಹ ನನ್ನ ಮುದ್ದು ಅಮ್ಮ "ಪುಟ್ಟೂ..." ಎಂದು ಉದ್ಗರಿಸಿ ನಗುವಿನ ರಂಗೊಲೆಯನು ಎರೆದು, ನನ್ನ ಕೂರಿಸಿ "ಬನ್ನಿ ಸಿಸ್ಟ್ರೆ ಇಂಜೆಕ್ಷನ್ ಕೊಡಿ" ಅಂತ ಆಂಟಿ ನ ಕರೆದು ತಾನು ನೋಡೋಕಾಗದೆ ಒಳಗೆ ಸರಿಯುತಿದ್ದಳು.





ಆ ಭೂಮಿ ತಾಯಿಯೇ ನೀನಾದೆ ನನಗೆ..
ನಿನ್ನ ಬಿಂಬ ಆ ಚಂದ್ರ ಇಂದು ನಾನಾದೇ ,
ನಿನ್ನ ಸುತ್ತು ತಿರುಗುತಾ ನಿನ್ನ ಜೊತೆಗೆ ಇರುವಾಸೆ....
ಅಮವಾಸೆಯದೇ ಭಯ ಅಮ್ಮಾ ಕೇಳೆ ಎನಗೆ..! 








  
          ನಾನು ಅಪ್ಪನ ಎದುರು ಇಡೋ ಪ್ರತಿ ಬೇಡಿಕೆಗೆ ಸ್ವರವಾಗ್ತಿದ್ದೊಳು ಅಮ್ಮಾ. ಹಾಗಿದ್ದೋಳು ನಾನು PU ಸೈನ್ಸ್ ಗೋಸ್ಕರ ಹೊಸನಗರದಿಂದ ತೀರ್ಥಹಳ್ಳಿಗೆ ಬಂದು ಸೇರ್ಕೊಂಡಾಗ ತನ್ನ ಕೆಲಸಕ್ಕೆ ಸ್ವಯಂ ನಿವೃತ್ತಿ (Volunteer Retirement) ಕೊಟ್ಟು ನನ್ನ ಸಲಹೋಕೆ ನಿಂತಳು.  ಪರೀಕ್ಷೆಯ ದಿನಗಳಲ್ಲಿ ತಾನು ಅಲರಾಂ ಇಟ್ಕೊಂಡು, ಈ ಸೋಮಾರಿ ನ ಎಬ್ಬಿಸಿ, ಕಾಫಿ ಮಾಡ್ಕೊಟ್ಟು, ಪಕ್ಕದಲ್ಲೇ ಕುಳಿತ್ಕೊಂಡು ನಾನು "ಓದ್ಕೊಳ್ತಿನಿ ನೀನು ಮಲಗಮ್ಮಾ" ಎಂದಾಗಲೇ ಅಮ್ಮ ಮಲಗ್ತಿದ್ದಿದ್ದು. ಹುಟ್ಟಿದಲ್ಲಿಂದ ಇಲ್ಲಿಯವರೆಗೆ ಒಂದೇಟು ಹಾಕಿಲ್ಲ. ಮಗುವಾಗಿದ್ದಾಗ ಏನಾದರು ಕಲಿಸಲು ಅಥವಾ ಯಾವುದಾದರು ತಪ್ಪಿಗೆ ಅಪ್ಪ ಏಟು ಕೊಟ್ಟಾಗ ಮರೆಗೆ ಹೋಗಿ ಕಣ್ಣೀರಾಗುತ್ತಿದ್ದ ಅಮ್ಮಾ ಈಗಲೂ ಸಹ ನಾನೇನಾದ್ರು ಊಟ ಮಾಡದೆ/ಹುಷಾರಿಲ್ಲದೆ ಮಲಗಿದಾಗ ಕಂಬನಿ ಮಿಡಿಯುತ್ತಾಳೆ. ಬದಲಾಗದ ಅಖಂಡ ಪ್ರೀತಿಯ ಸ್ವರೂಪ ಅವಳು. 

ಎಂ.ಬಿ.ಬಿ.ಎಸ್. ಓದಿ ಡಾಕ್ಟರ್ ಆಗದೆ ಇದ್ರೂ ಪಿ.ಹೆಚ್.ಡಿ(Ph D) ಮಾಡಿ ನಿನ್ನ ಕನಸಿಗೆ ನನಸಿನ ಹಾದಿ ತೋರಿಸ್ತೀನಮ್ಮ ಅಂದಾಗ ಆ ನಿನ್ನ ಕಣ್ಣುಗಳ ಅಂಚಲ್ಲಿ ಕುಳಿತು ಇಣುಕುತ್ತಿದ್ದ ಹನಿಗಳನ್ನು ಹಾಗೇ ಮುತ್ತಾಗಿಸೋ ಆಸೆ ನನದು. ನಿನ್ನ ಬಿಸಿ ಅಪ್ಪುಗೆಯಲಿ ನನ್ನ ಕ್ಷಣಗಳನ್ನ ಕಳೆಯಬೇಕು ಎನ್ನುವ ಕನಸು ನನದು. ನಾನು ಸಾಯೋತನಕ ನಿನ್ನ ನಗುವನ್ನೇ ನೋಡಬೇಕು ಎನ್ನುವಂತಹ ಸ್ವಾರ್ಥ ನನದು. ಹಾಗೇ ನನ್ನ ಕೊನೆ ಉಸಿರನ್ನು ನಿನ್ನ ಮಡಿಲೊಳಗೆ ನಿನ್ನ ಕೈಗಳಿಂದ ನನ್ನ ತಲೆ ನೇವರಿಸಿಕೊಳ್ಳುತ್ತಾ, ನಾ ಮೊದಲ ಬಾರಿಗೆ ಚೂರು ಚೂರು ಮಾಡಿ ನುಡಿದ ಅ...ಮ್ಮಾ.... ಎಂಬ ತೊದಲು ನುಡಿಯೊಡನೆ ತೊರೆವ ಆಸೆ ನನದು...

ಜನ್ಮದಾ ಪೂರ್ವದಿಂದ ಪ್ರೀತಿಸಿದಳು..
ನಿನ್ನಾ ಪ್ರೀತಿಸಿದಳು..
ನೀ ಇತ್ತ ನೋವ ಮರೆತು,
ನವಮಾಸ ನರಕವನ್ನು ಕಳೆದಿದ್ದಳು...
ನಗುತಾ ಕಳೆದಿದ್ದಳು..
ನೀ ನಕ್ಕರೆನಗುತಾ
ನೀ ಅತ್ತರೆ ಅಳುತಾ
ಹಗಲಿರುಳು ನಿನಗೆಂದೇ ಸವೆದಿದ್ದಳು..
ನೋವ ನುಂಗಿದ್ದಳು..
ಪುಟ್ಟ ಕೈಯ ಕೈಲಿ ಹಿಡಿದು
ಅಕ್ಷರವ ತಿದ್ದಿ ಕಲಿಸಿ,
ಕೊನೆವರೆಗೂ ಕೈ ಬಿಡದೆ ನೆಡೆಸುವಳು,
ನಿನ್ನ ಏಳಿಗೆಯ ಕನಸ ಕಂಡಾ ಅವಳು...
ಜನ್ಮದಾತಲಿವಳು... ಬಾಳ ಸ್ಪೂರ್ತಿ ಅವಳು...
ನನಗವಳೇ ದೇವರು, ಹೆತ್ತವಳು...
ನನ್ನಾ ಹೆತ್ತವಳು....       

ನಿನ್ನ ಪ್ರೀತಿಯ ಕಂದ...
ಪುಟ್ಟು  
               

Friday, May 14, 2010

ಗರಿ ಬಲಿತ ಹಕ್ಕಿಗಳು ಗೂಡ ನೆನೆದಾಗ...



ಕಾತುರದಿ ಕಾದಿದ್ದ ದಿನವೊಂದು, ಕಣ್ಣೆದುರು ಬಂದು ನಿಂತು, ಕ್ಷಣದಲ್ಲಿ ಕಳೆದು ಹೋದಂತಹ ಅನುಭವ.. ೧೬ ವರುಷಗಳ ದಾರಿಯಲಿ ಜೊತೆ ನಡೆದ ಪ್ರತಿಯೊಬ್ಬರನು ಕರೆದು, ಒಂದೇ ವೇದಿಕೆಯಲ್ಲಿ ಕಾಣೋ ಆ ತವಕವನ್ನ ಆ ದಿನದ ತನಕ ಹಿಡಿದಿಟ್ಟುಕೊಂಡು ಬಂದಿದ್ದ ನೂರಾರು ಮನಕೆ, ಹರ್ಷೋಲ್ಲಾಸದ ಮಳೆ ಬೇಸಿಗೆಯಲ್ಲೂ ತಂಪೆರದಿದ್ದು ಸುಳ್ಳಲ್ಲ.. ಬೇರೆ ಬೇರೆ ದಾರಿಯೊಡನೆ ಬಂದತಹ ಎಲ್ಲರಲ್ಲಿದ್ದಿದ್ದು ಒಂದೇ ಹಸಿವು.. ಬದುಕ ಜಂಜಾಟ ತೊರೆದು, ತನ್ನವರ ಜೊತೆ ನೆಡೆದು.. ನೆನಪ ಮನೆಯೊಳಗೇ ಸರಿಯುವುದು...

ಪ್ರಪ್ರಥಮವಾಗಿ ಅಂತಹ ವೇದಿಕೆಯ ಸಿದ್ದತೆಗೆ ಕೈಜೋಡಿಸಿದ ಪ್ರತಿಯೊಬ್ಬರಿಗೂ, ಭಾಗಿಯಾದ ಪ್ರತಿಯೋರ್ವರಿಗೂ ಸ್ನೇಹಪೂರ್ವಕ ವಂದನೆಗಳು...


ಪ್ರತಿ ವೇದಿಕೆಗೂ ತನ್ನದೇ ಆದ ಆದ್ಯತೆ, ಜವಾಬ್ದಾರಿ ಇದ್ದೆ ಇರುತ್ತದೆ. ಹಾಗೆ ಈ ಒಂದು ಹಳೆ ವಿದ್ಯಾರ್ಥಿಗಳ ಸಂಘದ ಮುಖ್ಯ ಉದ್ದೇಶ ತಮ್ಮ ತಮ್ಮ ಅನಿಸಿಕೆ ವಿನಿಮಯದ ಜೊತೆಗೆ ಪರಸ್ಪರರ ಬೆಳವಣಿಗೆಗೆ ಸಹಾಯವಾಗುವಂತಹ ಕೆಲಸಗಳಿಗೆ ಮುನ್ನುಡಿ ಬರೆಯುವಂತಹ ಹೆಜ್ಜೆಯನ್ನು ಇಡುವಂತಹುದು. ಈ ಒಂದು ಉದ್ದೇಶ ಸಫಲವಾಗೋ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಅವರವರ ಜವಾಬ್ದಾರಿಯನ್ನ ಅರಿತು ನಡೆಯುವುದು ಅತ್ಯವಶ್ಯಕ.

ಒಂದು ವಿಭಾಗವಾಗಿ ಜೀವರಸಾಯನಶಾಸ್ತ್ರ ಅಥವಾ ಆಹಾರ ತಂತ್ರಜ್ಞಾನ ವಿಭಾಗಗಳು ಎಲ್ಲರಿಂದ ಬಯಸೋದು ತನ್ನ ಜೊತೆಗಿನ ನಿರಂತರ ಒಡನಾಟ, ಆ ಮೂಲಕ ತನ್ನ ಏಳಿಗೆಯೊಡನೆ ತನ್ನೆಲ್ಲಾ ಒಡನಾಡಿ(ವಿಧ್ಯಾರ್ಥಿ)ಗಳು ಯಶಸ್ಸಿನ ಹಾದಿಯಲ್ಲಿ ಸಾಗಲಿ ಎನ್ನುವುದು... ಹಾಗಾಗಿ ನಿಮ್ಮೆಲ್ಲರ ಪ್ರಾಮಾಣಿಕ ಅಭಿಪ್ರಾಯ, ಸಲಹೆ-ಸಹಕಾರ ಎಲ್ಲವೂ ಸಹ ಇಲ್ಲಿ ಅತ್ಯಮೂಲ್ಯ. ನಿಮ್ಮ ಗಮನಕ್ಕೆ ಬಂದಂತಹ ಉದ್ಯೋಗವಕಾಶಗಳು, ವಿಜ್ಞಾನದಲ್ಲಿ ಆದ ಹೊಸ ಹೊಸ ಆವಿಷ್ಕಾರಗಳು ಹಾಗೂ ಶೈಕ್ಷಣಿಕ ಬದುಕಲ್ಲಿ ವಿದ್ಯಾರ್ಥಿಗಳ ಬೆಳವಣಿಗೆಗೆ ಪೂರಕವಾಗಿರುವಂತಹ ಸಂಗತಿಗಳನ್ನು ಹಂಚಿಕೊಂಡರೆ ಅದೂ ಕೂಡಾ ವಿಜ್ಞಾನ ಕ್ಷೇತ್ರಕ್ಕೆ ತಾ ಮಾಡಿದ ಚಿಕ್ಕ ನೆರವು ಅಂತ ಅನಿಸಿಕೊಳ್ಳುತ್ತದೆ.

ಕೈ ಹಿಡಿದು ಶುರು ಮಾಡಿರುವ ನಮ್ಮ ಈ ಪ್ರಯಾಣವನ್ನ ಜೊತೆ ಬಿಡದೆ ನಡೆಸಿಕೊಂಡು ಹೋಗುವಂತಹ ಪ್ರಮಾಣವನ್ನ ನಾವೆಲ್ಲರೂ ಈಗ ಮಾಡಬೇಕಾಗಿದೆ. ಆ ರೀತಿಯಲ್ಲಿ

ನಮ್ಮ ಮನೆಯಂಗಳದಲ್ಲಿ ಕಟ್ಟಿದ
ನೆನಪಿನ ತೋರಣ ಸದಾ ಹಸಿರಾಗಿರಲಿ
ಇಟ್ಟಕನುಸುಗಳ ಚುಕ್ಕಿ, ಎರಚಿದ ಭಾವನೆಗಳ ರಂಗು
ಬಾನೆತ್ತರಕೆ ತಾಗಲಿ...


ಗರಿಬಲಿತ ಹಕ್ಕಿಗಳೇ.... ಗೂಡ ನೆನೆದು ಬಂದಿರಿ...
ನೆನಪಿನೂಟ ಸವಿದಿರಿ, ಕನಸ ಕಣ್ಣ ತೆರೆದಿರಿ...
ಕಳೆದ ಕ್ಷಣಗಳ ಕರೆದಿರಿ...

ಧನ್ಯವಾದಗಳು ನಿಮಗೆ....


ನಗು, ಯಶಸ್ಸು ಸದಾ ನಿಮ್ಮ ಹಿಂದೆ ಬರಲಿ...
ಜೊತೆ ಇರುವ ಕನಸು ನೆನಪಿನಲ್ಲಿರಲಿ....


ವಂದನೆಗಳು....

- ರೋಹಿತ್ ಕುಮಾರ್ ಹೆಚ್.ಜಿ.
Email: rohit.biogem@gmail.com
Mob: +91-9480128192

ಕಾದು ನೋಡಿ

ಹೊಸ ಅಂಕಣ...

"ತೀರ"


ಆತ್ಮೀಯ ಒಡನಾಡಿಗಳೇ,


೨೦೧೦-೨೦೧೧ ನೇ ಸಾಲಿನ ಹಿರಿಯ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದ ವಿಶೇಷವಾಗಿ ಮಾಡಲ್ಪಟ್ಟ "ತೀರ" ಎಂಬ ವೀಡಿಯೋ ತುಣುಕನ್ನು ಈ ಮೂಲಕ ನಮ್ಮ ಬ್ಲಾಗ್ ನಲ್ಲಿ upload ಮಾಡುತ್ತಿದ್ದೇವೆ. ನಮ್ಮ ವಿಭಾಗದಲ್ಲಿನ ದಿನಗಳ ನೆನಪನ್ನ ಮತ್ತೆ ನಿಮ್ಮಲ್ಲಿಗೆ ತರುವಂತಹ ಒಂದು ಪುಟ್ಟ ಪ್ರಯತ್ನವು ಇದಾಗಿದ್ದು, ನಿಮ್ಮೆಲ್ಲರ ಮೆಚ್ಚುಗೆಗೆ ಪಾತ್ರವಾಗುತ್ತದೆ ಎಂದು ನಂಬಿದ್ದೇವೆ.


ನಿಮ್ಮ ಪ್ರತಿಯೊಂದು ಅನಿಸಿಕೆಗಳಿಗೂ ಆದರದ ಸ್ವಾಗತ.



ಈ ವೀಡಿಯೊ ತುಣುಕನ್ನು ತಯಾರಿಸಲು ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಸಹಕರಿಸಿದ ಪ್ರತಿಯೋರ್ವರಿಗೂ ಈ ಮೂಲಕ ಧನ್ಯವಾದವನ್ನು ಅರ್ಪಿಸುತ್ತೇವೆ.


- ರೋಹಿತ್

ತೀರ ಭಾಗ - 1

ತೀರ ಭಾಗ - 2

ತೀರ ಭಾಗ - 3

ನನ್ನ ಬೆರಳಿನೊಡನೆ ಆಡಿದ ಕನಯ್ಯ...

ನನ್ನ ಬೆರಳಿನೊಡನೆ ಆಡಿದ ಕನಯ್ಯ...